ರಾಂಚಿ: ಮಾಟ ಮಂತ್ರ ಹತ್ಯೆಗಳಿಗೆ ಕುಖ್ಯಾತಿ ಪಡೆದಿರುವ ಜಾರ್ಖಂಡ್ ರಾಜ್ಯದಲ್ಲಿ ಬಾಲ್ಯ ವಿವಾಹ ಪ್ರಮಾಣವೂ ಅಧಿಕವಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಇತ್ತೀಚಿನ ಜನಸಂಖ್ಯಾ ಮಾದರಿ ಸಮೀಕ್ಷೆ ತಿಳಿಸಿದೆ.
ಗೃಹ ವ್ಯವಹಾರಗಳ ಸಚಿವಾಲಯದ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿಯಿಂದ ಹೊರತಂದ ಸಮೀಕ್ಷೆಯ ಪ್ರಕಾರ ಜಾರ್ಖಂಡ್ ನಲ್ಲಿ ವಯಸ್ಸಿಗೆ ಬರುವ ಮುಂಚಿತವಾಗಿ ಮದುವೆಯಾಗುವ ಹುಡುಗಿಯರ ಶೇಕಡಾವಾರು ಪ್ರಮಾಣವು 5.8 ರಷ್ಟಿದೆ.
18 ವರ್ಷ ವಯಸ್ಸನ್ನು ತಲುಪುವ ಮೊದಲು ವಿವಾಹವಾದ ಹುಡುಗಿಯರ ಶೇಕಡಾವಾರು ರಾಷ್ಟ್ರೀಯ ಮಟ್ಟದಲ್ಲಿ 1.9 ಆಗಿದೆ. ಕೇರಳದಲ್ಲಿ ಇದು 0.0 ಇದ್ದರೆ, ಜಾರ್ಖಂಡ್ ನಲ್ಲಿ 5.8 ರಷ್ಟಿದೆ ಎಂದು ಸಮೀಕ್ಷೆ ಹೇಳಿದೆ.
ಜಾರ್ಖಂಡ್ ನಲ್ಲಿ ಬಾಲ್ಯ ವಿವಾಹಗಳು ಗ್ರಾಮೀಣ ಪ್ರದೇಶದಲ್ಲಿ ಶೇ. 7.3 ಹಾಗೂ ನಗರ ಪ್ರದೇಶಗಳಲ್ಲಿ ಶೇ. 3 ರಷ್ಟು ಇವೆ. ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳದ ರಾಜ್ಯಗಳಲ್ಲಿ ಹೆಚ್ಚಿನ ಯುವತಿಯರು 21 ವರ್ಷ ವಯಸ್ಸನ್ನು ತಲುಪುವ ಮೊದಲು ವಿವಾಹವಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಶೇಕಡಾ 54.9% ಹುಡುಗಿಯರು 21 ವರ್ಷ ವಯಸ್ಸನ್ನು ತಲುಪುವ ಮೊದಲು ವಿವಾಹವಾಗಿದ್ದರೆ, ಜಾರ್ಖಂಡ್ ನಲ್ಲಿ ಇದು ಶೇಕಡಾ 54.6 % ರಷ್ಟಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಿದೆ.