ದರೋಡೆ ಉದ್ದೇಶದಿಂದ ಜುವೆಲ್ಲರಿ ಉದ್ಯೋಗಿ ರಾಘವೇಂದ್ರ ಆಚಾರ್ಯ ಕೊಲೆ: ವಿಚಾರಣೆ ವೇಳೆ ಬಾಯ್ಬಿಟ್ಟ ಆರೋಪಿ

Prasthutha|

ಮಂಗಳೂರು: ನಗರದ ಹಂಪನಕಟ್ಟೆಯ ಮಂಗಳೂರು ಜುವೆಲ್ಲರಿಯ ನೌಕರ ರಾಘವೇಂದ್ರ ಆಚಾರ್ಯ ಅವರ ಹತ್ಯೆ ಪ್ರಕರಣದ ಆರೋಪಿಯ ಬಂಧನವನ್ನು ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಜೈನ್ ದೃಢಪಡಿಸಿದ್ದಾರೆ.

- Advertisement -


ಕೇರಳದ ಕೋಝಿಕ್ಕೋಡು ಪೂಕಾಡ್, ಚೇಮಂಚೇರಿಯ ತುವಕೋಡ್ ನಿವಾಸಿ ಅಲಿ ಪಿ ಪಿ ಎಂಬವರ ಪುತ್ರ ಶಿಫಾಸ್ ಬಂಧಿತ ಆರೋಪಿ. ಈತ ಮಂಗಳೂರಿನ ಕರಾವಳಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್’ನಲ್ಲಿ ಬಿಇ ಡಿಪ್ಲೊಮಾ ಪ್ರವೇಶ ಪಡೆದಿದ್ದ. ಆದರೆ ವಿದ್ಯಾಭ್ಯಾಸ ಪೂರ್ಣಗೊಳಿಸಿರಲಿಲ್ಲ. ಎಸ್’ಎನ್’ಎನ್ ಗ್ಲೋಬಲ್ ಎಂಬ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ. ಇದಕ್ಕೂ ಮೊದಲು 2014ರಿಂದ 2019ರವರೆಗೆ ದುಬೈಯಲ್ಲಿ ಕೆಲಸ ಮಾಡಿದ್ದ. ಆತನ ಇಬ್ಬರು ಸಹೋದರರು ದುಬೈಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ ನಾವು ಆತನನ್ನು ಕಸ್ಟಡಿಗೆ ಪಡೆಯಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ.


ಫೆಬ್ರವರಿ 3ರಂದು ಮಂಗಳೂರು ಜ್ಯುವೆಲರ್ಸ್ ಹೆಸರಿನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ರಾಘವೇಂದ್ರ ಆಚಾರ್ಯ ಎಂಬುವವರನ್ನು ಹಾಡಹಗಲೇ ಚಾಕುವಿನಿಂದ ಚುಚ್ಚಿ ಹತ್ಯೆ ಮಾಡಲಾಗಿತ್ತು. ಅಂಗಡಿಯಲ್ಲಿದ್ದ ಕೆಲವು ವಸ್ತುಗಳು ನಾಪತ್ತೆಯಾಗಿರುವ ಬಗ್ಗೆ ಅಂಗಡಿ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸಮೀಪದ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಶಂಕಿತ ವ್ಯಕ್ತಿಯ ದೃಶ್ಯ ಸೆರೆಯಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು, ಟವರ್ ಡಂಪ್ ಡೇಟಾವನ್ನು ವಿಶ್ಲೇಷಿಸಲು ಮತ್ತು ವಿವಿಧ ಲಾಡ್ಜ್’ಗಳು ಮತ್ತು ಹೋಟೆಲ್’ಗಳನ್ನು ಪರಿಶೀಲಿಸಲು ಹಲವಾರು ತಂಡಗಳನ್ನು ರಚಿಸಲಾಗಿತ್ತು. ಸಿಸಿಟಿವಿ ಕ್ಯಾಮೆರಾ ಫೂಟೇಜ್ ಸಹಾಯದಿಂದ ಶಂಕಿತನ ಚಲನವಲನವನ್ನು ಕಾಸರಗೋಡಿನಲ್ಲಿ ಪತ್ತೆಹಚ್ಚಲಾಗಿತ್ತು. ಶಂಕಿತನ ಸಿಸಿಟಿವಿ ಕ್ಯಾಮೆರಾ ದೃಶ್ಯಗಳನ್ನು ಕರ್ನಾಟಕ ಮತ್ತು ಕೇರಳದಾದ್ಯಂತ ವ್ಯಾಪಕವಾಗಿ ಪ್ರಕಟಿಸಲಾಗಿತ್ತು.

- Advertisement -


ಮಾರ್ಚ್ 2ರಂದು ಶಂಕಿತನ ಬಗ್ಗೆ ಸುಳಿವು ಸಿಕ್ಕಿದ್ದು, ಕಾಸರಗೋಡು ಜಿಲ್ಲಾ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಶಂಕಿತನನ್ನು ಕಾಸರಗೋಡಿನಲ್ಲಿ ಬಂಧಿಸಲಾಗಿದೆ. ತಡರಾತ್ರಿಯವರೆಗೂ ವಿವರವಾದ ವಿಚಾರಣೆಯ ನಂತರ ಆರೋಪಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಆರೋಪಿ ದರೋಡೆ ಉದ್ದೇಶದಿಂದ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಕೃತ್ಯದ ಬಳಿಕ ಆತ ತನ್ನ ಸ್ವಗ್ರಾಮ ಕೋಝಿಕ್ಕೋಡ್’ಗೆ ತೆರಳಿದ್ದು, ಅಂದಿನಿಂದ ತಲೆಮರೆಸಿಕೊಂಡಿದ್ದ. ಇಂದು ಆತ ಅದೇ ಉದ್ದೇಶದಿಂದ ಕಾಸರಗೋಡಿಗೆ ಬಂದಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾನೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.



Join Whatsapp