ನರಸಿಂಹರಾಜ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ: ಅಬ್ದುಲ್ ಅಝೀಝ್ ಸ್ಪಷ್ಟನೆ

Prasthutha|

ಮೈಸೂರು: ಮೈಸೂರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಈ ಬಾರಿ ಕಣಕ್ಕಿಳಿಯುವುದಿಲ್ಲ. ಕ್ಷೇತ್ರದಲ್ಲಿ ಪಕ್ಷವನ್ನು ಬಲಪಡಿಸಲು ಶ್ರಮಿಸಿದ್ದ ನನ್ನನ್ನು ಕಡೆಗಣಿಸಿರುವುದು ನೋವು ನೀಡಿದೆ. ಆದ್ದರಿಂದ, ನನ್ನ ಮುಂದಿನ ನಡೆಯನ್ನು ಕೆಲವೇ ದಿನಗಳಲ್ಲಿ ತಿಳಿಸುತ್ತೇನೆ ಎಂದು ಜೆಡಿಎಸ್ ಮುಖಂಡ ಅಬ್ದುಲ್ ಅಝೀಝ್ ಹೇಳಿದ್ದಾರೆ.

- Advertisement -


ಸೋಮವಾರ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ‘ನರಸಿಂಹರಾಜ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಎರಡು ತಿಂಗಳ ಹಿಂದೆಯೇ ಹೇಳಿದ್ದರು. ಅದಕ್ಕೆ ನಾನು ಸಂಪೂರ್ಣವಾಗಿ ಒಪ್ಪಿಗೆ ನೀಡಿ ಸ್ವಾಗತಿಸಿದ್ದೆ. ಆದರೆ, ಅವರು ಇನ್ನೂ ಕ್ಷೇತ್ರದತ್ತ ಮುಖಮಾಡಿಲ್ಲ. ಅಲ್ಲದೇ, ಬೇರೆಯವರಿಗೆ ಜವಾಬ್ದಾರಿ ಕೊಡಲು ಹೊರಟಿದ್ದಾರೆ. ಇದರಿಂದಾಗಿ ನನಗೆ ಅಸಮಾಧಾನ ಆಗಿರುವುದು ನಿಜ. ಈ ಕಾರಣದಿಂದಾಗಿಯೇ, ಮೈಸೂರಿನಲ್ಲಿ ಈಚೆಗೆ ನಡೆದ ಪಂಚರತ್ನ ಯಾತ್ರೆ ಸಮಾರೋಪದಲ್ಲೂ ಪಾಲ್ಗೊಳ್ಳಲಿಲ್ಲ’ ಎಂದು ಅವರು ಸ್ಪಷ್ಪಪಡಿಸಿದರು.


‘ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಪಕ್ಷದವರು ವಿಳಂಬ ನೀತಿ ಅನುಸರಿಸುತ್ತಿರುವುದು ತೀವ್ರ ಬೇಸರ ಮೂಡಿಸಿದೆ. ಇನ್ನಾದರೂ ವರಿಷ್ಠರು ಎಚ್ಚೆತ್ತುಕೊಳ್ಳಬೇಕು. ಕೂಡಲೇ ತಮ್ಮ ನಿರ್ಧಾರವನ್ನು ಪ್ರಕಟಿಸಬೇಕು. ಇಲ್ಲದಿದ್ದರೆ ಬೇರೆ ಪಕ್ಷಕ್ಕೆ ಬೆಂಬಲ ಕೊಡಬೇಕಾಗುತ್ತದೆ. ತರಾತುರಿಯಲ್ಲಿ ಕಣಕ್ಕಿಳಿಯುವಂತೆ ಹೇಳಿದರೆ ಸ್ಪರ್ಧಿಸುವುದಿಲ್ಲ. ನನಗೆ ಯಾವ ಪಕ್ಷ ಸೂಕ್ತ ಎನಿಸುತ್ತದೆಯೋ ಅದಕ್ಕೆ ನನ್ನ ಬೆಂಬಲ ನೀಡುತ್ತೇನೆ. ಈ ನಿಟ್ಟಿನಲ್ಲಿ ಬೆಂಬಲಿಗರೊಂದಿಗೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದೇನೆ’ ಎಂದು ಹೇಳಿದರು.



Join Whatsapp