ಬೆಂಗಳೂರು ನಗರ ಅಭಿವೃದ್ಧಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದ ಜೆಡಿಎಸ್

Prasthutha|

ಬಿಬಿಎಂಪಿ ಮೀಸಲು ಗೊಂದಲ ನಿವಾರಣೆ

- Advertisement -

ಬಿ ಖಾತಾ ಸ್ವತ್ತುಗಳನ್ನು ಎ ಖಾತಾ ಸ್ವತ್ತುಗಳಾಗಿ ಪರಿವರ್ತನೆ

ಮಾಸಿಕ 10 ಕೆಜಿ ಅಕ್ಕಿ

- Advertisement -

ಮೆಟ್ರೋ ವಿಸ್ತರಣೆ, ಪೆರಿಪೆರಲ್ ರಿಂಗ್ ರಸ್ತೆ ನಿರ್ಮಾಣ

ಬೆಂಗಳೂರು: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಇದೇ ಮೊದಲ ಬಾರಿಗೆ ಜೆಡಿಎಸ್‌ ಪಕ್ಷವು ಬೆಂಗಳೂರು ಮಹಾನಗರ ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಜನತಾ ಪ್ರಣಾಳಿಕೆ ಬಿಡುಗಡೆ ಮಾಡಿದೆ.

ಪಂಚರತ್ನ ಯೋಜನೆಗಳ ಜತೆಗೆ ರಾಜ್ಯದಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗೆ ತರುವುದು, ಬಿಬಿಎಂಪಿ ಮೀಸಲಾತಿ ಗೊಂದಲ ನಿವಾರಣೆ, ಪ್ರತಿ ವ್ಯಕ್ತಿಗೆ ಮಾಸಿಕ 10 ಕೆ.ಜಿ. ಅಕ್ಕಿ, ಬಿ ಖಾತಾ ಸ್ವತ್ತುಗಳನ್ನು ಎ ಖಾತಾ ಸ್ವತ್ತುಗಳಾಗಿ ಪರಿವರ್ತಿಸುವುದು, ನಮ್ಮ ಮೆಟ್ರೋ ವಿಸ್ತರಣೆ ಸೇರಿದಂತೆ  16 ಪ್ರಮುಖ ಅಂಶಗಳನ್ನು ಒಳಗೊಂಡ ಬೆಂಗಳೂರಿನ ಪ್ರತ್ಯೇಕ  ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ.

ಪದ್ಮನಾಭನಗರದ ತಮ್ಮ ನಿವಾಸದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಈ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ  ಹೆಚ್.ಡಿ.ದೇವೇಗೌಡರು ಮಾತನಾಡಿ, ಈಗಾಗಲೇ ರಾಜ್ಯಕ್ಕೆ ಅನ್ವಯವಾಗುವಂತೆ ಜನತಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗಿದೆ. ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕೊಡುವ ಮುಂದಾಲೋಚನೆ ಮಾಡಿದ್ದಾರೆ. ಬೆಂಗಳೂರಗೆ ಮೊದಲ ಬಾರಿಗೆ ಪ್ರಣಾಳಿಕೆ ಮಾಡಲಾಗಿದೆ. ಪ್ರಸ್ತುತ ಬೆಂಗಳೂರಿಗೆ ಇದರ ಅವಶ್ಯಕತೆ ಇದೆ ಎಂದರು.

ಬೆಂಗಳೂರು ಬೃಹದಾಕಾರವಾಗಿ ಬೆಳೆದಿದೆ. ಸುಮಾರು 1.60 ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ಸಮಸ್ಯೆಗಳ ಗಾತ್ರ ಹೆಚ್ಚಿದೆ. ನಾನು ಮುಖ್ಯಮಂತ್ರಿ ಹಾಗೂ ಪ್ರಧಾನಿ ಆಗಿದ್ದಾಗ ಬೆಂಗಳೂರು ಈ ಮಟ್ಟದಲ್ಲಿ ಬೆಳೆಯುತ್ತದೆ ಎಂದು ಮುಂದಾಲೋಚನೆ ಮಾಡಿ ಅನೇಕ ಯೋಜನೆಗಳನ್ನು ರೂಪಿಸಿದ್ದೆ ಎಂದು ಅವರು ಹೇಳಿದರು.

ನಾನು  1994ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇದ್ದ ಬೆಂಗಳೂರಿಗೂ, ಈಗಿನ ಬೆಂಗಳೂರಿಗೂ ತುಂಬಾ  ವ್ಯತ್ಯಾಸ ಇದೆ.  ಕುಡಿಯುವ ನೀರು, ರಸ್ತೆ, ಸಂಚಾರ, ಹೀಗೆ ಹಲವು ಸಮಸ್ಯೆಗಳು ಇವೆ. ಸಮ್ಮಿಶ್ರ ಸರ್ಕಾರದಲ್ಲಿ ಏಳು ಉಪನಗರ ನಿರ್ಮಾಣ ಮಾಡಲು ಕುಮಾರಸ್ವಾಮಿ ಅವರು  ಹೊರಟರು. ಆದರೆ, ಆಗ ಸತ್ಯಶೋಧನಾ ಸಮಿತಿ ಮಾಡಿ ಕಾಂಗ್ರೆಸ್ ಮುಖಂಡರು ಅದನ್ನು ನಿಲ್ಲಿಸಿದರು. ಉಪ ನಗರಗಳನ್ನು ಮಾಡಿದ್ದಿದ್ದರೆ ಬೆಂಗಳೂರು ನಗರ ಇನ್ನೂ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆಯುತಿತ್ತು. ನಾನು ಯಾರ ಮೇಲೂ ಆಪಾದನೆ ಮಾಡಲು ಹೋಗಲ್ಲ. ಹೇಳಲು ಹೋದರೆ ತುಂಬಾ ವಿಷಯ ಇದೆ ಎಂದು ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು.

ಪ್ರತಿಯೊಂದು ಸಮಸ್ಯೆಗೆ ಪರಿಹಾರ ಇದೆ. ಹೇಗೆ ಮುಸ್ಲಿಮರ ಸಮಸ್ಯೆಗಳಿಗೆ ಪರಿಹಾರ, ಬೆಂಗಳೂರಿನ ನೀರು ಪೂರೈಕೆ ಸೇರಿ ಎಲ್ಲ ಅಂಶಗಳನ್ನು ಉಲ್ಲೇಖ ಮಾಡಲಾಗಿದೆ. ನಮ್ಮ ಸರ್ಕಾರ ಬಂದರೆ ನಾವು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವ ಎಲ್ಲವನ್ನೂ ಜಾರಿ ಮಾಡಲು ಬದ್ಧರಾಗಿದ್ದೇವೆ ಎಂದರು ಅವರು.

ಪ್ರಣಾಳಿಕೆ ಸಮಿತಿ ಸದಸ್ಯ ಹಾಗೂ ರಾಜ್ಯಸಭೆಯ ಮಾಜಿ ಸದಸ್ಯರಾದ ಕುಪೇಂದ್ರ ರೆಡ್ಡಿ ಮಾತನಾಡಿ, ಅನೇಕ ವರ್ಷಗಳಿಂದ ಹಕ್ಕುಪತ್ರ ನೀಡಿರಲಿಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಇಡಿ ಬೆಂಗಳೂರಿಗೆ ಹಕ್ಕುಪತ್ರ ನೀಡಲಾಗಿತ್ತು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಕೈಗೊಂಡು, ಹಲವಾರು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಬೆಂಗಳೂರು ಹೊರವರ್ತುಲ ರಸ್ತೆ  ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಸಬ್ ಅರ್ಬನ್ ರೈಲು ಅಭಿವೃದ್ಧಿ ಒತ್ತು ನೀಡಲಾಗಿದೆ ಎಂದು ಹೇಳಿದರು.

ಜೆಡಿಎಸ್ ಬೆಂಗಳೂರಿಗೆ ನೀಡಿರುವ ಪ್ರಣಾಳಿಕೆಯಲ್ಲಿ ಏನಿದೆ?:

ವಸತಿ ಆಸರೆ: ವಸತಿ ಆಸರೆಯಡಿ ನಗರದ ಬಡವರಿಗೆ ಕೈಗೆಟುಕುವ ದರದಲ್ಲಿ ವಸತಿ ಆಸರೆ ಕಲ್ಪಿಸುವ ಹಾಗೂ ಕಾರ್ಮಿಕರಿಗೆ ವಿಶೇಷ ಯೋಜನೆಯಡಿ ವಸತಿ ಸೌಲಭ್ಯ ಕಲ್ಪಿಸುವ ಭರವಸೆ ನೀಡಲಾಗಿದೆ.

ಬೀದಿ ಬದಿ ವ್ಯಾಪಾರಿಗಳಿಗೆ ಭದ್ರತೆ, ಖಾಸಗಿ ಶಾಲೆಗಳಲ್ಲಿ ಹತ್ತು ಸಾವಿರ ರೂ.ಗಿಂತ ಕಡಿಮೆ ವೇತನ ಪಡೆಯುವ ಶಿಕ್ಷಕರಿಗೆ ಸಹಾಯಧನ, ನೋಂದಾಯಿತ ಆಟೋ ಚಾಲಕರಿಗೆ ಮತ್ತು ಭದ್ರತಾ ಸಿಬ್ಬಂದಿಗಳಿಗೆ ಮಾಸಿಕ ಎರಡು ಸಾವಿರ ರೂ. ಸಹಾಯಧನ ಹಾಗೂ ಬೀದಿ ಬದಿಯ ವ್ಯಾಪಾರಿಗಳಿಗೆ ದುಡಿಮೆ ರೂಪದಲ್ಲಿ ವೇತನ ನೀಡುವ ಘೋಷಣೆ ಮಾಡಿದೆ.

ಜನಸಂದಣಿ ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ 1100 ಮಕ್ಕಳ- ವಯಸ್ಕರ ಸ್ನೇಹಮಯ ಶೌಚಾಲಯ ನಿರ್ಮಾಣ ಮಾಡಲಾಗುವುದು.

ಹತ್ತು ಕೆ.ಜಿ ಅಕ್ಕಿ: ಪಡಿತರ ವ್ಯವಸ್ಥೆಯಡಿಯಲ್ಲಿ ಪ್ರತಿ ವ್ಯಕ್ತಿಗೆ 10 ಕೆ.ಜಿ. ಅಕ್ಕಿಯನ್ನು ಪ್ರತಿ ತಿಂಗಳು ನೀಡುವುದು, ಪಾಲಿಕೆಯ ಪ್ರತಿಯೊಂದು  ವಲಯವನ್ನು ಶೈಕ್ಷಣಿಕ ಜಿಲ್ಲೆಯಾಗಿ ಘೋಷಿಸಿ, ಜಿಲ್ಲಾ ಶಾಲಾ ಶಿಕ್ಷಣ ಪರಿಷತ್ ಸ್ಥಾಪಿಸುವುದಾಗಿ ಹೇಳಿದೆ.

ಬೆಂಗಳೂರಿಗೆ ಪ್ರಬಲ ಆಡಳಿತದಡಿಯಲ್ಲಿ  ಪಾಲಿಕೆಯ ಆಡಳಿತ ಸುವ್ಯವಸ್ಥೆಗಾಗಿ ಕ್ಷೇತ್ರವಾರು ಮರು ವಿಂಗಡಣೆ ಮಾಡಿ ಮೀಸಲಾತಿ ಗೊಂದಲ ಬಗೆಹರಿಸಿ, ಶೀಘ್ರ ಚುನಾವಣೆ ನಡೆಸುವುದು ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಪಾಲಿಕೆ ಆಡಳಿತ ವಹಿಸುವ ಭರವಸೆ ನೀಡಿದೆ.

ಪಾಲಿಕೆ ವ್ಯಾಪ್ತಿಯ 110 ಗ್ರಾಮಗಳಿಗೆ ಪೈಪ್‍ಲೈನ್ ಮೂಲಕ ಕುಡಿಯುವ ನೀರು ನೀಡುವುದು, ಬಿ ಖಾತೆಯಲ್ಲಿರುವ ಆರು ಲಕ್ಷ ಸ್ವತ್ತುಗಳನ್ನು ಎ ಖಾತಾ ಸ್ವತ್ತುಗಳಾಗಿ ಪರಿವರ್ತಿಸುವುದು, ವಸತಿ ಸಮುಚ್ಚಯ ಹಾಗೂ ವಾಣಿಜ್ಯ ಸಂಕೀರ್ಣಗಳಲ್ಲಿ ಬಯೋಗ್ಯಾಸ್ ಉತ್ಪಾದನೆಗೆ ಉತ್ತೇಜನ ನೀಡುವುದಾಗಿ ತಿಳಿಸಿದೆ.

ಹೋಟೆಲ್, ಛತ್ರಗಳಲ್ಲಿ ಸಾವಯವ ತಟ್ಟೆ, ಲೋಟಗಳ ಬಳಸುವಂತೆ ಪ್ಲಾಸ್ಟಿಕ್ ಬಳಕೆಗೆ ನಿರ್ಭಂದ ಹೇರಲಾಗುವುದು. ಪಾಲಿಕೆ ವ್ಯಾಪ್ತಿಯ ರಸ್ತೆ ಮತ್ತು ಉದ್ಯಾನವನಗಳಲ್ಲಿ 2026ರ ವೇಳೆಗೆ ಸೋಲಾರ್ ದೀಪಗಳನ್ನು ಅಳವಡಿಸುವುದು, ಆರೋಗ್ಯ ಶ್ರೀರಕ್ಷೆಯಡಿಯಲ್ಲಿ ಪ್ರತಿ ವಾರ್ಡ್‍ನಲ್ಲೂ 30 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆ ಸ್ಥಾಪಿಸಿ ವಿನೂತನ ಮಾದರಿ ಆರೋಗ್ಯ ಸೇವೆ ಒದಗಿಸುವ ಭರವಸೆ ನೀಡಿದೆ.

ಅಲ್ಲದೆ, ಬೆಂಗಳೂರು ಸಾರ್ವಜನಿಕ ಆರೋಗ್ಯ ಮಂಡಳಿ ಸ್ಥಾಪಿಸುವ ಮೂಲಕ ತಾಜ್ಯ ನಿರ್ವಹಣೆ, ಅಂಟು ರೋಗಗಳ ತಡೆಗಟ್ಟುವಿಕೆ ಹಾಗೂ ಮಾಲಿನ್ಯ ನಿಯಂತ್ರಣ ಮೊದಲಾದ ಆರೋಗ್ಯ ನಿರ್ವಹಣೆಯ ಮುಂಜಾಗ್ರತಾ ಕ್ರಮಗಳ ಉಸ್ತುವಾರಿ ವಹಿಸಲಾಗುವುದು. ಮಹಾನಗರದಲ್ಲಿ ಉತ್ತಮ ಸಾರಿಗೆ ವ್ಯವಸ್ಥೆಯಡಿ ನಗರದ ಸುತ್ತಲೂ ಇರುವ ರೈಲು ಮಾರ್ಗಗಳನ್ನು ಬಳಸಿ, ಎಲ್ಲಾ ನಿಲ್ದಾಣಗಳನ್ನು ಜೋಡಿಸಿ ಸ್ಥಳೀಯ ರೈಲ್ವೆ ಯೋಜನೆಯನ್ನು ಅಭಿವೃದ್ಧಿಪಡಿಸುವುದಾಗಿ ಘೋಷಣೆ ಮಾಡಿದೆ.

ನಗರದ ಎಲ್ಲಾ ರೈಲು ನಿಲ್ದಾಣಗಳಿಂದ 36 ಎಲೆಕ್ಟ್ರಿಕ್ ಬಸ್ಸುಗಳನ್ನು ಬೆಳ್ಳಿಗೆ 7 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ  ವೃತ್ತಾಕಾರದಲ್ಲಿ ದ್ವಿಮುಖವಾಗಿ ಚಲಿಸುವ ವ್ಯವಸ್ಥೆ ಮಾಡಲಾಗುವುದು, ಸಿಲಿಕಾನ್ ಸಿಟಿ ಪುನರ್ ನಿರ್ಮಾಣದಡಿ ಜಾಗತಿಕ ಬ್ರಾಂಡ್  ಬೆಂಗಳೂರನ್ನು ಉಳಿಸಲು ಕಣಿವೆ, ಕಾಲುವೆ ಮತ್ತು ಚರಂಡಿಗಳ ಒತ್ತುವರಿ ತೆರವುಗೊಳಿಸಿ ನಗರವನ್ನು ಪುನರ್ ನಿಮಾರ್ಣಮಾಡುವುದಾಗಿ  ಹೇಳಿದೆ.

ಮಹಿಳಾ ಸುರಕ್ಷತೆ: ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಗೆ ಒನ್ ಸ್ಟಾಪ್ ಸೆಂಟರ್ ಮತ್ತು ಸುರಕ್ಷತಾ ನಗರ ಯೋಜನೆ ಅನುಷ್ಠಾನ ಮಾಡುವುದಾಗಿ ಪ್ರಕಟಿಸಿದೆ. ಬೆಂಗಳೂರು ನಗರದಲ್ಲಿನ ಕಣಿವೆ, ಕೆರೆಗಳ ಸಂರಕ್ಷಣೆ ಮತ್ತು ಕಾಲುವೆಗಳ ಪುನಶ್ಚೇತನ ಮಾಡುವುದು, ಬಿಬಿಎಂಪಿ, ಬಿಡಿಎ, ಬಿಡ್ಲ್ಯೂಎಸ್‍ಎಸ್‍ಬಿ ಸಂಸ್ಥೆಗಳಿಗೆ ಮಾರ್ಗದರ್ಶನ  ನೀಡಲು ಬೆಂಗಳೂರು ಕಾರ್ಯಾಚರಣೆ ಸಂಶೋಧನಾ ಕೇಂದ್ರ ಸ್ತಾಪಿಸುವುದಾಗಿ ಭರವಸೆ ನೀಡಿದೆ.

ಮನೆ ಅಂಗಳದಲ್ಲಿ ಗಿಡ ನೆಟ್ಟು ಬೆಳಸಿದ ಮನೆ ಮಾಲೀಕನಿಗೆ ಪ್ರತಿ ಗಿಡಕ್ಕೆ ಪ್ರತಿ ವರ್ಷ 2000 ರೂ. ಸ್ವತ್ತಿನ ತೆರಿಗೆ ವಿನಾಯಿತಿ ನೀಡುವುದು, ಬಿಬಿಎಂಪಿಗೆ 110 ಗ್ರಾಮಗಳಲ್ಲಿ 300 ಸಾರ್ವಜನಿಕ ಉದ್ಯಾನವನ ನಿರ್ಮಾಣ, 900 ಚ.ಮೀ.ಗಿಂತ ಕಡಿಮೆ ವಿಸ್ತೀರ್ಣದ ಮನೆಯಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಘಟಕ ಸ್ಥಾಪಿಸಲು ಒಂದು ಲಕ್ಷ ರೂ ಸಹಾಯಧನ ನೀಡುವುದಾಗಿ ಹೇಳಿದೆ.

ನಮ್ಮ ಮೆಟ್ರೋ ವಿಸ್ತರಣೆ: ನಮ್ಮ ಮೆಟ್ರೋ ಮಾರ್ಗವನ್ನು 60 ಕಿ.ಮೀ.ಉದ್ದ ಎಡ-ಬಲ ಪಾಶ್ರ್ವ ಪ್ರದೇಶಗಳಿಗೆ ವಿಸರಣೆ ಮಾಡುವುದು, ಮೇಕೆದಾಟು ಬಳಿ 60 ಟಿಎಂಸಿ  ನೀರು ಸಂಗ್ರಹದ ಜಲಾಶಯ ನಿರ್ಮಾಣ, ಎತ್ತಿನ ಹೊಳೆ ಯೋಜನೆಯಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ 1.8 ಟಿಎಂಸಿ ಅಡಿ ಹಾಗೂ ಹೆಸರಘಟ್ಟ ಜಲಾಶಯಕ್ಕೆ 0.8 ಟಿಎಂಸಿ ಅಡಿ ನೀರು ತುಂಬಿಸುವ ಮೂಲಕ ನಗರದ ಕುಡಿಯುವ ನೀರಿನ ಕ್ಷಾಮ ನಿವಾರಿಸುವುದು. ನೆನೆಗುದಿಗೆ ಬಿದ್ದಿರುವ ಬೆಂಗಳೂರು  ಹೊರವರ್ತುಲ ಕಾಮಗಾರಿ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವ ಭರವಸೆಗಳನ್ನು ನೀಡಲಾಗಿದೆ.

ಪ್ರಣಾಳಿಕೆ ಬಿಡುಗಡೆ ಸಮಯದಲ್ಲಿ ಪ್ರಣಾಳಿಕೆ ಸಮಿತಿ ಸದಸ್ಯರಾದ ಕುಪೇಂದ್ರ ರೆಡ್ಡಿ,  ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಟಿ.ಎ.ಶರವಣ, ಬೆಂಗಳೂರು ನಗರದ ಜೆಡಿಎಸ್ ಅಧ್ಯಕ್ಷ, ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಎಂ.ರಮೇಶ್‍ಗೌಡ ಮತ್ತಿತರರು ಉಪಸ್ಥಿತರಿದ್ದರು.