ಮುಸ್ಲಿಂ ಮೀಸಲಾತಿ ಮುಂದುವರೆಸಲು ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ: ಶಾಸಕ ಬಂಡೆಪ್ಪ ಖಾಶೆಂಪುರ್ ಸೇರಿದಂತೆ ಅನೇಕರು ಭಾಗಿ

Prasthutha|

ಬೀದರ್: ಮುಸ್ಲಿಮರಿಗೆ 2 ಬಿ ಅಡಿಯಲ್ಲಿ ನೀಡಲಾಗುತ್ತಿದ್ದ ಮೀಸಲಾತಿಯನ್ನು ರಾಜ್ಯ ಸರ್ಕಾರ ರದ್ದು ಮಾಡಿರುವುದನ್ನು ವಿರೋಧಿಸಿ, ಮುಸ್ಲಿಂ ಮೀಸಲಾತಿ ಮುಂದುವರೆಸುವಂತೆ ಆಗ್ರಹಿಸಿ ಮಾಜಿ ಸಚಿವ, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಹಾಗೂ ಶಾಸಕ ಬಂಡೆಪ್ಪ ಖಾಶೆಂಪುರ್ ರವರ ಮುಖಂಡತ್ವದಲ್ಲಿ ಜೆಡಿಎಸ್ ಜಿಲ್ಲಾ ಘಟಕದಿಂದ ಪ್ರತಿಭಟನಾ ಜಾಥಾ ನಡೆಸಲಾಯಿತು.
ಬೀದರ್ ನಗರದ ಗಣೇಶ ಮೈದಾನದ ಬಳಿಯ ಜೆಡಿಎಸ್ ಜಿಲ್ಲಾ ಕಚೇರಿಯಿಂದ ಮಂಗಳವಾರ ಪ್ರತಿಭಟನೆ ಆರಂಭಿಸಿದ ಜೆಡಿಎಸ್ ನಾಯಕರು ಜಿಲ್ಲಾಧಿಕಾರಿ ಕಛೇರಿಯವರೆಗೆ ಜಾಥಾ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್, 1995ರಲ್ಲಿ ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಶೇ. 04% ಮೀಸಲಾತಿ ಕಲ್ಪಿಸಿದ್ದರು. ಅಂದಿನಿಂದ ಇಂದಿನವರೆಗೂ ಮೀಸಲಾತಿ ಸಿಗುತ್ತಿತ್ತು. ಈ ಬಿಜೆಪಿ ಸರ್ಕಾರ ಮೀಸಲಾತಿ ರದ್ದು ಮಾಡಿದೆ. ಬಿಜೆಪಿಯವರು ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಆ ಸಮುದಾಯಕ್ಕೆ ಮೋಸ ಮಾಡುತ್ತಿದ್ದಾರೆ.
ದೇವೇಗೌಡರು ಜಾರಿಗೊಳಿಸಿದ್ದ ಮೀಸಲಾತಿಯನ್ನು ಇವರು ರದ್ದು ಮಾಡಿದ್ದಾರೆ. ಇದು ಖಂಡನೀಯವಾಗಿದೆ. ತಕ್ಷಣವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು ಅಲ್ಪಸಂಖ್ಯಾತರ ಮೀಸಲಾತಿ ರದ್ದು ಮಾಡಿರುವ ನಿರ್ಧಾರವನ್ನು ವಾಪಸು ತೆಗೆದುಕೊಳ್ಳಬೇಕು. ಮೊದಲಿನಂತೆಯೇ ಅಲ್ಪಸಂಖ್ಯಾತರ ಮೀಸಲಾತಿಯನ್ನು ಮುಂದುವರೆಸಬೇಕು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲಪೂರ್, ಪ್ರಮುಖರಾದ ಸಜ್ಜದ್ ಸಾಹೇಬ್, ಸಿಎಂ ಫೈಜ್, ಬಾಬಾ ಬುಕಾರಿ, ಐಲಿಂಜಾನ್ ಮಠಪತಿ, ಎಮ್.ಡಿ ಅಸದುದ್ದೀನ್, ಎಮ್.ಡಿ ನಬಿ ಖುರೇಷಿ, ರಾಜು ಕಡ್ಯಾಳ್, ಮಾರುತಿ ಬೌದ್ಧೆ, ಸೈಯದ್ ಸರ್ಪರಾಜ್ ಹಸ್ಮಿ, ಅಬ್ದುಲ್ ಸಮ್ಮದ್, ಇಸ್ಲಾಯಿಲ್ ಅಹಮದ್, ಸಂಗಮ್ಮ ವಿ ಪಾಟೀಲ್, ಲಲಿತಾ ಕರಂಜೆ, ವಸಿಮ್, ದೇವೇಂದ್ರ ಸೋನಿ, ಎಮ್.ಡಿ ಸಲಿಂ, ರಾಜಶೇಖರ ಜವಳೆ, ಸೈಖ್, ಸೈಯದ್ ಇಸ್ಮಾಯಿಲ್, ಶಮ್ಮಿ ಶೇಖ್, ಅಶೋಕ್ ಕೊಡ್ಗೆ, ಸೈಯದ್ ಬಿಲಾಲ್, ಮಿರಾಜ್ ಪೈಮ್ ಬೇಗ್ ಸೇರಿದಂತೆ ಅನೇಕರಿದ್ದರು.



Join Whatsapp