ಒಳ್ಳೆಯ ಉದ್ದೇಶದಿಂದ ಜೆಡಿಎಸ್, ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟಿಲ್ಲ: ಸಿದ್ದರಾಮಯ್ಯ

Prasthutha|

ಮೈಸೂರು: ಜೆಡಿಎಸ್ ನವರು ಒಳ್ಳೆಯ ಉದ್ದೇಶದಿಂದ ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಟ್ಟಿಲ್ಲ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತ ಅಭ್ಯರ್ಥಿ ಗೆಲ್ಲಿಸಿಕೊಳ್ಳಬೇಕು ಅನ್ನುವ ಆಸಕ್ತಿ ಜೆಡಿಎಸ್ ಗೆ ಇಲ್ಲ. ಒಂದು ವೇಳೆ ಗೆಲ್ಲಿಸಲೇಬೇಕು ಅನ್ನುವ ಉದ್ದೇಶವಿದ್ದರೆ ರಾಮನಗರ, ಚನ್ನಪಟ್ಟಣ, ಹಾಸನದಲ್ಲಿ ಟಿಕೆಟ್ ಕೊಡಲಿ. ಮೈಸೂರು ಭಾಗದಲ್ಲಿ ಅವರು ಅಲ್ಪಸಂಖ್ಯಾತರಿಗೆ ಟಿಕೆಟ್ ಕೊಡುವುದಿಲ್ಲ, ಉತ್ತರ ಕರ್ನಾಟಕದಲ್ಲಿ ಟಿಕೆಟ್ ಕೊಡುತ್ತಾರೆ ಎಂದರೆ ಏನರ್ಥ? ಆದರೆ, ಜನ ಬುದ್ದಿವಂತರಿದ್ದಾರೆ. ಇಂತಹ ತಂತ್ರಗಳು ಜನರಿಗೆ ಅರ್ಥವಾಗುತ್ತವೆ ಎಂದು ಹೇಳಿದರು.

- Advertisement -


ಬಿ.ಎಸ್.ಯಡಿಯೂರಪ್ಪ, ವಿಜಯೇಂದ್ರ ಆಪ್ತರನ್ನೇ ಗುರಿಯಾಗಿಸಿ ಐಟಿ ದಾಳಿ ಮಾಡಿರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ಐಟಿ ದಾಳಿಯಲ್ಲಿ ರಾಜಕೀಯ ಇದೆ ಎಂಬುದು ನನ್ನ ಅನುಮಾನ. ನನಗಂತೂ ಇದರಲ್ಲಿ ರಾಜಕೀಯ ವಾಸನೆ ಬರುತ್ತಿದೆ ಎಂದು ತಿಳಿಸಿದರು. ನಾನು ರಾಷ್ಟ್ರ ರಾಜಕಾರಣಕ್ಕೆ ಹೋಗುವುದು ಊಹಾಪೋಹ. ಸೋನಿಯಾಗಾಂಧಿಯವರೂ ರಾಷ್ಟ್ರ ರಾಜಕಾರಣಕ್ಕೆ ಕರೆದಿಲ್ಲ. ಆ ಬಗ್ಗೆ ಚರ್ಚೆಯೂ ಆಗಿಲ್ಲ. ಸುಮ್ಮನೆ ಊಹಾಪೋಹದ ಚರ್ಚೆಗಳು ಬೇಡ. ನಾನು ಎಂದೂ ಆ ಯೋಚನೆ ಮಾಡಿಯೂ ಇಲ್ಲ. ಆ ಬಗ್ಗೆ ಚರ್ಚೆ ಬೇಡ, ನಾನು ರಾಜ್ಯ ರಾಜಕಾರಣದಲ್ಲೇ ಸಕ್ರಿಯನಾಗಿರುತ್ತೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು


ಎರಡೂ ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಉಪಚುನಾವಣೆ ಫಲಿತಾಂಶ ಭವಿಷ್ಯದ ಚುನಾವಣೆಗೆ ದಿಕ್ಸೂಚಿ ಎಂದು ಹೇಳುವುದಿಲ್ಲ. ಹಾಗೇ ಹೇಳಲು ಸಾಧ್ಯವಿಲ್ಲ. ಆದರೆ, ಫಲಿತಾಂಶದಿಂದ ಈ ಸರ್ಕಾರದ ಮೇಲೆ ಜನರ ಅಭಿಪ್ರಾಯ ಏನು ಎಂಬುದು ಗೊತ್ತಾಗುತ್ತದೆ. ಕೇಂದ್ರ ಹಾಗೂ ರಾಜ್ಯ ಎರಡೂ ಸರ್ಕಾರ ಬಂದರೆ ಸ್ವರ್ಗ ಮಾಡುತ್ತೇವೆ ಅಂದಿದ್ದರು. ಈಗ ಬೆಲೆ ಏರಿಕೆಯಿಂದ ಜನರ ಬದುಕು ನರಕ ಆಗಿದೆ. ಹೀಗಾಗಿ, ಕಾಂಗ್ರೆಸ್ ಅನ್ನು ಎರಡೂ ಕ್ಷೇತ್ರಗಳಲ್ಲಿ ಗೆಲ್ಲಿಸುತ್ತಾರೆ ಎಂದು ಆಶಯ ವ್ಯಕ್ತಪಡಿಸಿದರು.

Join Whatsapp