JDS ಎನ್‌ಡಿಎ ಮೈತ್ರಿಕೂಟ ಸೇರ್ಪಡೆಯಿಂದ ಎರಡೂ ಪಕ್ಷಗಳಿಗೂ ಶಕ್ತಿ: ಜಿ.ಟಿ.ದೇವೇಗೌಡ

Prasthutha|

ಮೈಸೂರು: ಎನ್‌ಡಿಎ ಮೈತ್ರಿಕೂಟಕ್ಕೆ ಜೆಡಿಎಸ್ ಸೇರ್ಪಡೆಯಾಗಲು ತೀರ್ಮಾನ ಮಾಡಿರುವುದನ್ನು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ಮುಕ್ತವಾಗಿ ಸ್ವಾಗತಿಸಿದ್ದಾರೆ.

- Advertisement -

ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಮಾಲೋಚನೆ ನಡೆಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೈತ್ರಿಯನ್ನು ಅಧಿಕೃತವಾಗಿ ಘೋಷಣೆ ಮಾಡುತ್ತಿದ್ದಂತೆ ಜಿ.ಟಿ.ದೇವೇಗೌಡರು ಸ್ವಾಗತಿಸಿ, ಈ ಮೈತ್ರಿಯಿಂದ ಎರಡೂ ಪಕ್ಷಗಳಿಗೆ ಶಕ್ತಿ ಬರಲಿದೆ ಎಂದರು.

ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಾಗೂ ಮಾಜಿ ಪ್ರಧಾನಿ, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು ಒಟ್ಟಿಗೆ ಕುಳಿತು ರಾಜ್ಯ ಮತ್ತು ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಮಾಲೋಚನೆ ಮಾಡಿದ್ದರು. ದೇಶದ ಹಿತಕ್ಕಾಗಿ ಜೆಡಿಎಸ್ ಎನ್‌ಡಿಎ ಭಾಗವಾಗಬೇಕೆಂದು ಕೋರಿದ್ದರ ಪರಿಣಾಮವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವರಾದ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದ ಬಳಿಕ ಎನ್‌ಡಿಎ ಭಾಗವಾಗಿ ಇರಲು ತೀರ್ಮಾನ ಮಾಡಿರುವುದು ಒಳ್ಳೆಯ ತೀರ್ಮಾನವಾಗಿದೆ ಎಂದು ಜಿಟಿಡಿ ಅಭಿಪ್ರಾಯಪಟ್ಟಿದ್ದಾರೆ.

- Advertisement -

ದೇಶ, ರಾಜ್ಯಗಳ ಪರಿಸ್ಥಿತಿ ಅವಲೋಕನ ಸೇರಿದಂತೆ ಹಲವು ವಿಚಾರಗಳ ಕುರಿತು ಸಮಾಲೋಚನೆ ಮಾಡಿ ಒಂದಾಗಿರುವುದರಿಂದ ಅನುಕೂಲ ಆಗಲಿದೆ. ಕರ್ನಾಟಕದಲ್ಲಿ ಈ ಎರಡೂ ಪಕ್ಷಗಳ ಮೈತ್ರಿಯಿಂದ ಮುಂದಿನ ದಿನಗಳಲ್ಲಿ ಎರಡು ಪಕ್ಷಗಳಿಗೆ ದೊಡ್ಡ ಶಕ್ತಿ ಬರಲಿದೆ ಮತ್ತು ಇದರಿಂದ ಅನುಕೂಲ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ನಾಯಕರು ಮಾಡಿರುವ ಈ ತೀರ್ಮಾನವನ್ನು ನಾನು ಸ್ವಾಗತಿಸುತ್ತೇನೆ ಎಂದು ಅವರು ಹೇಳಿದ್ದಾರೆ.

Join Whatsapp