ತಿರುವನಂತಪುರ: ಇಲ್ಲಿ ಜೆಡಿಎಸ್ ರಾಷ್ಟ್ರೀಯ ಸಭೆಯೊಂದನ್ನು ನಡೆಸಲಾಗಿದ್ದು, ದೇವೇಗೌಡರಿಗೆ ಆಹ್ವಾನ ನೀಡದೇ ಕರ್ನಾಟಕದಿಂದ ಸಿಎಂ ಇಬ್ರಾಹಿಂ ಅವರನ್ನು ಆಹ್ವಾನಿಸಲಾಗಿತ್ತು. ಇಬ್ರಾಹಿಂ ಕರ್ನಾಟಕ ಜೆಡಿಎಸ್ ಅಧ್ಯಕ್ಷರಾಗಿ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಇದನ್ನು ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಎಂದು ಪರಿಗಣಿಸಲಾಗಿದೆ. ಈ ಸಭೆಯು ಕೇವಲ ದೇವೇಗೌಡರ ನಿರ್ಧಾರವನ್ನು ವಿರೋಧಿಸಲು ಸೇರಿದ್ದ ಸಭೆಯಾಗಿತ್ತು ಎಂದು ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಸಿ.ಕೆ. ನನು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿ.ಕೆ. ನನು, ಒಂದು ವೇಳೆ ಎನ್‌ಡಿಎ ಸೇರ್ಪಡೆಯಾಗುವ ತಮ್ಮನಿರ್ಧಾರವನ್ನು ದೇವೇಗೌಡರು ರದ್ದುಪಡಿಸದಿದ್ದರೆ, ಡಿಸೆಂಬರ್ 9ರಂದು ನಡೆಯಲಿರುವ ರಾಷ್ಟ್ರೀಯ ಮಹಾಧಿವೇಶನದಲ್ಲಿ ಅವರ ನಿರ್ಧಾರವನ್ನು ಔಪಚಾರಿಕವಾಗಿ ತಳ್ಳಿ ಹಾಕಲಾಗುವುದು. ಈ ಕುರಿತು ಏಕಪಕ್ಷೀಯ ನಿರ್ಧಾರ ಕೈಗೊಂಡಿರುವ ದೇವೇಗೌಡರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಪಕ್ಷದ ಜಾತ್ಯತೀತ ಸಿದ್ಧಾಂತವನ್ನು ರಕ್ಷಿಸಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ.
ಅಧಿವೇಶನಕ್ಕೂ ಮೊದಲು ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಳ್ಳುವಂತೆ ಆಗ್ರಹಿಸುವ ಪತ್ರವೊಂದನ್ನು ದೇವೇಗೌಡರಿಗೆ ಹಸ್ತಾಂತರಿಸಲಾಗುತ್ತದೆ ಎಂದೂ ಅವರು ಹೇಳಿದ್ದಾರೆ. ಈ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಗೆ ಕರ್ನಾಟಕದಿಂದ ಸಿ.ಎಂ.ಇಬ್ರಾಹಿಂ ಸೇರಿದಂತೆ ಒಟ್ಟು 11 ರಾಜ್ಯಗಳ ರಾಜ್ಯಾಧ್ಯಕ್ಷರು ವೈಯಕ್ತಿಕವಾಗಿ ಉಪಸ್ಥಿತರಿದ್ದರು ಹಾಗೂ ನಾಲ್ಕು ಜನ ರಾಜ್ಯಾಧ್ಯಕ್ಷರು ಆನ್ ಲೈನ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಸಿ.ಕೆ.ನನು ತಿಳಿಸಿದ್ದಾರೆ.
ಈ ಸಭೆಯಲ್ಲಿ ಕೇರಳದ ಜೆಡಿಎಸ್ ರಾಜ್ಯಾಧ್ಯಕ್ಷ ಮ್ಯಾಥ್ಯ ಟಿ. ಥಾಮಸ್ ಈ ಭಾಗವಹಿಸಿರಲಿಲ್ಲ. ತಮ್ಮ ರಾಜ್ಯದ ಪಕ್ಷದ ಪದಾಧಿಕಾರಿಗಳಿಗೂ ಈ ಸಭೆಗೆ ಹಾಜರಾಗದಂತೆ ಅವರು ಸೂಚಿಸಿದ್ದರು.