ಬೆಂಗಳೂರು: ಚುನಾವಣಾ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿ ಶಂಕರ್ ಅವರ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್ ಅನೂರ್ಜಿತಗೊಳಿಸಿದೆ.
ಬಿಜೆಪಿಯ ಪರಾಜಿತ ಅಭ್ಯರ್ಥಿ ಬಿ ಸುರೇಶ್ ಗೌಡ ಸಲ್ಲಿಸಿದ್ದ ಚುನಾವಣಾ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠವು ಭಾಗಶಃ ಮಾನ್ಯ ಮಾಡಿದೆ.
ಕರ್ನಾಟಕ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿರುವುದರಿಂದ ಹೈಕೋರ್ಟ್‌ನ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಾಗುವಂತೆ ಈ ಆದೇಶಕ್ಕೆ ತಡೆ ನೀಡುವಂತೆ ಗೌರಿಶಂಕರ್ ಪರ ವಕೀಲರು ಮನವಿ ಮಾಡಿದರು. ಆದರೆ ಇದಕ್ಕೆ ಸುರೇಶ್ ಗೌಡ ಪರ ಹಿರಿಯ ವಕೀಲೆ ನಳಿನಾ ಮಾಯೇಗೌಡ ಆಕ್ಷೇಪ ವ್ಯಕ್ತಪಡಿಸಿದರು.
ಅನರ್ಹತೆಯು ತಕ್ಷಣಕ್ಕೆ ಜಾರಿಗೆ ಬರದಿರುವುದರಿಂದ ಗೌರಿ ಶಂಕರ್ ಅವರು ಚುನಾವಣೆಗೆ ಸ್ಪರ್ಧಿಸಲು ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ವಾದ ಮಂಡಿಸಿದರು.
ಇದೇ ವೇಳೆ ಈ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಗೌರಿ ಶಂಕರ್ ಅರ್ಜಿ ಸಲ್ಲಿಸಲು ಹೈಕೋರ್ಟ್ ಅವಕಾಶ ನೀಡಿದೆ. ಆಯ್ಕೆ ಅಸಿಂಧು ಮಾಡಿದ ಆದೇಶ ಜಾರಿಗೆ ಒಂದು ತಿಂಗಳ ಕಾಲ ತಡೆಯಾಜ್ಞೆಯನ್ನೂ ನೀಡಿದೆ. ಇದೇ ವೇಳೆ ಗೌರಿ ಶಂಕರ್ ಸಹ ಸುಪ್ರೀಂ ಕೋರ್ಟ್‌ನಲ್ಲಿ ತೀರ್ಪು ಪ್ರಶ್ನಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಗೌರಿ ಶಂಕರ್ ಅವರು 32 ಸಾವಿರ ವಯಸ್ಕರು ಮತ್ತು 16 ಸಾವಿರ ಮಕ್ಕಳಿಗೆ ನಕಲಿ ವಿಮಾ ಪಾಲಿಸಿಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿ ಜಯ ಸಾಧಿಸಿದ್ದಾರೆ. ಇದು ಪ್ರಜಾ ಪ್ರತಿನಿಧಿ ಕಾಯಿದೆ ಸೆಕ್ಷನ್ 123ರ ಅಡಿ ಅಪರಾಧ. ಹೀಗಾಗಿ, ಗೌರಿ ಶಂಕರ್ ಆಯ್ಕೆ ಅಸಿಂಧುಗೊಳಿಸಬೇಕು ಎಂದು ಸುರೇಶ್‌ಗೌಡ ನ್ಯಾಯಾಲಯದ ಮೊರೆ ಹೋಗಿದ್ದರು.
ಚುನಾವಣೆಯಲ್ಲಿ ಉಮೇದುವಾರಿಕೆ ಸಲ್ಲಿಸಿ, ನಾಮಪತ್ರ ಹಿಂಪಡೆಯಲು ಏಪ್ರಿಲ್ 24ರವರೆಗೆ ಅವಕಾಶವಿದೆ. ಅದರೊಳಗೆ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್‌ನಲ್ಲಿ ಗೌರಿ ಶಂಕರ್ ತಡೆ ಪಡೆದುಕೊಳ್ಳಬೇಕಿದೆ.