ತುಮಕೂರು: ತುರುವೇಕೆರೆಯಲ್ಲಿ ನಡೆದ ಜಂಟಿ ಸಮಾವೇಶದಲ್ಲಿ ಬಿಜೆಪಿ– ಜೆಡಿಎಸ್ ಎರಡು ಪಕ್ಷಗಳ ಕಾರ್ಯಕರ್ತರು ಮತ್ತು ನಾಯಕರ ನಡುವೆ ದೊಡ್ಡ ಜಟಾಪಟಿಯೇ ನಡೆದಿದೆ.
ಜೆಡಿಎಸ್ ಶಾಸಕ ಎಂ.ಟಿ.ಕೃಷ್ಣಪ್ಪ, ಬಿಜೆಪಿಯ ಕೊಂಡಜ್ಜಿ ವಿಶ್ವನಾಥ್ 2019ರ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಅವರಿಗೆ ಬೆಂಬಲ ನೀಡಿದ್ದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ನಲ್ಲಿ ಇದ್ದುಕೊಂಡು ನನ್ನ ವಿರುದ್ಧ ಕೆಲಸ ಮಾಡಿದರು. ಈ ಬಾರಿ ಬಿಜೆಪಿ ಅಭ್ಯರ್ಥಿಗೆ ಸಹಕಾರ ನೀಡುತ್ತಾರೆಯೇ ಅಥವಾ ಬೇರೆ ಏನಾದರೂ ಮಾಡುತ್ತಾರೆಯೇ? ಎಂದು ಪ್ರಶ್ನಿಸಿದ್ದು ಬಿಜೆಪಿ ಕಾರ್ಯಕರ್ತರನ್ನು ಕೆರಳಿಸಿತು.
ಕೃಷ್ಣಪ್ಪ ಹೇಳಿಕೆಗೆ ಸಮಜಾಯಿಷಿ ಕೊಡಲು ಮುಂದಾದ ಕೊಂಡಜ್ಜಿ ವಿಶ್ವನಾಥ್ ಅವರನ್ನು ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ತಡೆದರು. ಈಗ ಏನೂ ಮಾತನಾಡುವುದು ಬೇಡ ಎಂದು ವಾಪಸ್ ಕಳುಹಿಸಿದರು. ಇದರಿಂದಾಗಿ ವೇದಿಕೆ ಮೇಲೆಯೇ ಮುಖಂಡರ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.