ಮಿತ್ರ ಪಕ್ಷದ ನಡೆಗೆ ಪ್ರೀತಂಗೌಡ ಕೆಂಡಾಮಂಡಲ
ಹಾಸನ: ಮೈತ್ರಿ ಧರ್ಮ ಪಾಲಿಸುವುದು 2 ಪಕ್ಷಗಳ ಜವಾಬ್ದಾರಿ ಆಗಿರುತ್ತದೆ. ನಮ್ಮ ಪಕ್ಷದ ಸೂಚನೆಯಂತೆ ನಾವು ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿಲ್ಲ. ಆದರೆ ಬಿಜೆಪಿ ಉಪಾಧ್ಯಕ್ಷರಾಗಿ ಯಾರಿಗೆ ವಿಪ್ ನೀಡಲಾಗಿತ್ತೊ ಅವರಿಗೆ ಮತ ನೀಡಿಲ್ಲ. ಹೀಗಾಗಿ ಮೈತ್ರಿ ಧರ್ಮ ಪಾಲಿಸಿಲ್ಲ ಎನ್ನುವುದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಮಿತ್ರ ಪಕ್ಷದ ನಡೆಗೆ ಮಾಜಿ ಶಾಸಕ ಪ್ರೀತಂಗೌಡ ಕೆಂಡಾಮಂಡಲರಾಗಿದ್ದಾರೆ.
ಹಾಸನ ನಗರ ಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಜೆಡಿಎಸ್ ಪಾಲಾಗಿದ್ದು, ಶಾಸಕ ಎಚ್.ಪಿ. ಸ್ವರೂಪ್ ತಮ್ಮ ಆಪ್ತರಿಗೆ ಗಾದಿ ಕೊಡಿಸುವ ಮೂಲಕ ತಮ್ಮ ನಾಯಕತ್ವದ ಹಿಡಿತ ಸಾಬೀತುಪಡಿಸಿದ್ದಾರೆ. ಈ ಮೂಲಕ ತಮ್ಮ ಎದುರಾಳಿ ಮಾಜಿ ಶಾಸಕ ಪ್ರೀತಂ ಗೌಡ ಅವರಿಗೆ ಠಕ್ಕರ್ ನೀಡಿದ್ದಾರೆ.
9ನೇ ವಾರ್ಡ್ ಜೆಡಿಎಸ್ ಸದಸ್ಯ ಎಂ ಚಂದ್ರೇಗೌಡ ಅಧ್ಯಕ್ಷರಾಗಿ ಹಾಗೂ ಬಿಜೆಪಿಯಿಂದ ಆಯ್ಕೆಯಾದರೂ ಜೆಡಿಎಸ್ ಬೆಂಬಲಿಸಿದ್ದ 35ನೇ ವಾರ್ಡ್ ಸದಸ್ಯೆ ಲತಾದೇವಿ ಸುರೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಹಾಸನ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆ ಬಳಿಕ ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೀತಂ ಗೌಡ, ಮೈತ್ರಿ ಧರ್ಮಕ್ಕೆ ಚ್ಯುತಿ ಬಾರದಂತೆ ನಡೆಯಬೇಕೆಂದು ಸೂಚನೆ ಇತ್ತು. ಹಾಗಾಗಿ ನಮ್ಮ ರಾಷ್ಟ್ರೀಯ ನಾಯಕರ ಅಪೇಕ್ಷೆಯಂತೆ ನಡೆದುಕೊಂಡಿದ್ದೆವು ಎಂದರು.
ನಮ್ಮಿಂದ ವೀರಶೈವ ಮಹಿಳೆ ಉಪಾಧ್ಯಕ್ಷ ಮಾಡಲು ತೀರ್ಮಾನ ಮಾಡಲಾಗಿತ್ತು. ಮತ ಮಾತ್ರ ಎಲ್ಲರದ್ದು ಬೇಕು. ಅಧಿಕಾರ ಒಂದೇ ಸಮುದಾಯದಕ್ಕೆ ಸಿಗಬಾರದು ಎನ್ನೊ ಕಾರಣಕ್ಕೆ ತೀರ್ಮಾನ ಮಾಡಲಾಗಿತ್ತು. ಆದರೆ ಇವತ್ತು ಮೈತ್ರಿ ಪಕ್ಷ ಮಾಡಿರುವ ತೀರ್ಮಾನ ನಮಗೆ ಅಚ್ಚರಿ ಮೂಡಿಸಿದೆ. ಈ ಬಾರಿಯೂ ಮನಸ್ಸು ಮಾಡಿದ್ದರೆ ಅಧ್ಯಕ್ಷ-ಉಪಾಧ್ಯಕ್ಷ ಆಗಬಹುದಾಗಿತ್ತು. ಆದರೆ ಯಾವುದೇ ಬೆಳವಣಿಗೆಗೆ ಅವಕಾಶ ನೀಡದೆ ಪಕ್ಷದ ಸೂಚನೆಯಂತೆ ಚೌಕಟ್ಟು ದಾಟಿಲ್ಲ. ಇದನ್ನ ರಾಜ್ಯ, ರಾಷ್ಟ್ರೀಯ ನಾಯಕರು ಗಮನಿಸುತ್ತಾರೆ. ಅವರು ಏನು ತೀರ್ಮಾನ ಮಾಡುತ್ತಾರೆ ನೋಡೋಣ ಎಂದು ಕಿಡಿಕಾರಿದ್ದಾರೆ.
ಪ್ರೀತಂಗೌಡಗೆ ಹಿನ್ನಡೆ ಆದರೆ ಮುಂದೆ ಮುನ್ನಡೆ ಆಗೋದು. ಬ್ಯಾಕ್ ಸ್ಟೆಪ್ ಇಟ್ಟರೆ ಸಿಕ್ಸ್ ಹೊಡೆಯುವುದಕ್ಕೆ ಆಗೋದು. ನಾನು ಮೈತ್ರಿ ವಿರುದ್ಧ ಮಾತನಾಡುತ್ತಿಲ್ಲ. ಜೆಡಿಎಸ್ ಪಕ್ಷದ ಧೊರಣೆಯ ವಿರುದ್ಧ ಮಾತನಾಡಿದ್ದೇನೆ ಎಂದರು.