ಜೆಡಿಎಸ್​​-ಬಿಜೆಪಿ ಮೈತ್ರಿ ವಿಚಾರ: ಇಂದು ಸುದ್ದಿಗೋಷ್ಠಿ ಕರೆದ ದೇವೇಗೌಡ

Prasthutha|

ಹೊಸದಿಲ್ಲಿ: ಲೋಕಸಭೆ ಚುನಾವಣೆಗೆ ಬಿಜೆಪಿ ಜೊತೆ ಜಂಟಿಯಾಗಿ ಸಮರಕ್ಕಿಳಿಯಲು ಜೆಡಿಎಸ್ ನಿರ್ಧರಿಸಿದೆ.

- Advertisement -


ಜೆಡಿಎಸ್ ವರಿಷ್ಠ ಹೆಚ್​ಡಿ ದೇವೇಗೌಡ, ಬಿಜೆಪಿ ಹೈಕಮಾಂಡ್ ಜೊತೆ ಚರ್ಚಿಸಿ ಮೈತ್ರಿಗೆ ಮುನ್ನುಡಿ ಬರೆದಿದ್ದಾರೆ. ಈಗಾಗಲೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಸಹೋದರ ರೇವಣ್ಣ, ಪ್ರಜ್ವಲ್ ರೇವಣ್ಣ, ನಿಖಿಲ್, ಸಾ.ರಾ.ಮಹೇಶ್ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಬಿಜೆಪಿ ಹೈಕಮಾಂಡ್ ಜೊತೆ ಚರ್ಚಿಸಿದ್ದಾರೆ.

ನಿನ್ನೆ(ಸೆ.21) ಮೈತ್ರಿ ಸಂಬಂಧ ದೆಹಲಿಯ ಸಫ್ದರ್​ಜಂಗ್ ಲೇನ್​ನಲ್ಲಿರುವ ದೇವೇಗೌಡರ ನಿವಾಸಲ್ಲಿ ಮಹತ್ವದ ಸಭೆ ನಡೆದಿದೆ. ಬಿಜೆಪಿ ವತಿಯಿಂದ ಆಗಮಿಸಿದ್ದ ಗೋವಾ ಸಿಎಂ ಪ್ರಮೋದ್ ಸಾವಂತ್ ಜೆಡಿಎಸ್ ನಾಯಕರ ಜೊತೆ ಮೈತ್ರಿ ಬಗ್ಗೆ ಮಾತುಕತೆ ನಡೆಸಿದರು. 6 ಲೋಕಸಭಾ ಕ್ಷೇತ್ರಗಳ ಮೇಲೆ ಕಣ್ಣಿಟ್ಟಿರುವ ಜೆಡಿಎಸ್ ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡಲೇ ಬೇಕು ಎಂದು ಬೇಡಿಕೆ ಮುಂದಿಟ್ಟಿದೆ ಎನ್ನಲಾಗಿದೆ.

- Advertisement -


ಮಂಡ್ಯ, ಹಾಸನ, ಕೋಲಾರ, ತುಮಕೂರು ಸೀಟ್​ಗಾಗಿ ಜೆಡಿಎಸ್ ಬೇಡಿಕೆ ಇಟ್ಟಿದ್ದು, ಈ ಪೈಕಿ ತುಮಕೂರು ಲೋಕಸಭಾ ಕ್ಷೇತ್ರದ ಬಗ್ಗೆ ಇನ್ನೂ ಅಂತಿಮವಾಗಿಲ್ಲ ಎನ್ನಲಾಗಿದೆ.

ಬಿಜೆಪಿ ಜೊತೆ ಜೆಡಿಎಸ್ ಹೆಜ್ಜೆ ಹಾಕಲು ಹೈಕಮಾಂಡ್ ನಾಯಕರ ಜೊತೆ ಅಂತಿಮ ಹಂತದ ಮಾತುಕತೆ ನಡೆಯಬೇಕಿದೆ. ಅಮಿತ್ ಶಾ ಜೊತೆ ಚರ್ಚೆ ಬಳಿಕ ಮೈತ್ರಿಗೆ ಫೈನಲ್ ಮುದ್ರೆ ಬೀಳಲಿದೆ. ವಿಧಾನಸಭೆ ವೋಟ್‌ ಶೇರಿಂಗ್ ಆಧಾರದಲ್ಲಿ ಸೀಟ್‌ ಶೇರಿಂಗ್‌ ಸೂತ್ರ ಮುಂದಿಡಲು ಕುಮಾರಸ್ವಾಮಿ ಮುಂದಾಗಿದ್ದಾರೆ.

ಬಿಜೆಪಿ ಹೈಕಮಾಂಡ್ ಮುಂದೆ ಜೆಡಿಎಸ್ ನಾಯಕರು ವೋಟ್ ಶೇರಿಂಗ್ ಸೂತ್ರ ಮುಂದಿಡಲು ಸಿದ್ಧತೆ ಮಾಡಿಕೊಂಡಿದ್ದಾರೆ. 6 ಲೋಕಸಭಾ ವ್ಯಾಪ್ತಿಯಲ್ಲಿ ವಿಧಾನಸಭೆ ಕ್ಷೇತ್ರಗಳಿಂದ ಮತ ಪ್ರಮಾಣದ ವಿವರ ಸಂಗ್ರಹಿಸಿರುವ ಕುಮಾರಸ್ವಾಮಿ, ಬಿಜೆಪಿಗಿಂತ ಹೆಚ್ಚು ಮತಗಳಿರುವ ಕ್ಷೇತ್ರಗಳ ಮೇಲೆಯೇ ಕಣ್ಣಿಟ್ಟಿದ್ದಾರೆ. ತುಮಕೂರು, ಹಾಸನ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳನ್ನು ತಮಗೆ ನೀಡುವಂತೆ ಜೆಡಿಎಸ್ ಬಿಗಿ ಪಟ್ಟು ಹಿಡಿದಿದೆ.

ಇನ್ನು ಈ ನಡುವೆ ಇಂದು(ಸೆ.22) ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರು ಸುದ್ದಿಗೋಷ್ಠಿ ಕರೆದಿದ್ದಾರೆ. ಬೆಳಗ್ಗೆ 9.30ಕ್ಕೆ ಸುದ್ದಿಗೋಷ್ಠಿ ನಡೆಯಲಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಬಗ್ಗೆ ಅಧಿಕೃತ ಮಾಹಿತಿ ಹೊರ ಹಾಕುವ ಸಾಧ್ಯತೆ ಇದೆ.

Join Whatsapp