ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಸಂಶಯಾಸ್ಪದ ಸಾವಿನ ತನಿಖೆಗಾಗಿ ನೇಮಿಸಲಾಗಿದ್ದ ನಿವೃತ್ತ ನ್ಯಾಯಾಧೀಶ ಎ. ಆರ್ಮಗಸ್ವಾಮಿ ಆಯೋಗವು ಶನಿವಾರ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ರಿಗೆ ವರದಿ ಸಲ್ಲಿಸಿದೆ.
ಆಸ್ಪತ್ರೆಯಲ್ಲಿ ಸಾವಿಗೀಡಾದ ಜಯಲಲಿತಾರ ಸಾವಿನ ಬಗ್ಗೆ ಗುಮಾನಿ ವ್ಯಕ್ತವಾದುದರಿಂದ 2017ರಲ್ಲಿ ಈ ಆಯೋಗವನ್ನು ನೇಮಿಸಲಾಗಿತ್ತು.
150 ಸಾಕ್ಷ್ಯಗಳನ್ನು, ಸಾಕ್ಷಿಗಳನ್ನು ಕಂಡಿರುವ ಈ ವರದಿಯನ್ನು ಜಸ್ಟಿಸ್ ಎ. ಆರ್ಮಗಸ್ವಾಮಿ ಅವರು ಇಂಗ್ಲಿಷ್ ಮತ್ತು ತಮಿಳಿನಲ್ಲಿ ಸಿದ್ಧ ಪಡಿಸಿದ್ದಾರೆ. 600 ಪುಟಗಳ ವರದಿಯನ್ನು ಇಂದು ಬೆಳಿಗ್ಗೆ ಮುಖ್ಯಮಂತ್ರಿಗಳ ಸೆಕ್ರೆಟೆರಿಯೇಟಿಗೆ ಸಲ್ಲಿಸಿದರು.
ವೈದ್ಯಕೀಯ ವರದಿ ಮತ್ತು ಸಾಕ್ಷ್ಯಕ್ಕಾಗಿ ಎಐಐಎಂಎಸ್ ರಚಿಸಿದ ಸಮಿತಿಯು ಜಸ್ಟಿಸ್ ಆರ್ಮಗಸ್ವಾಮಿಯವರಿಗೆ ಸಹಾಯ ಸಹಕಾರ ನೀಡಿತು. ಅಪೋಲೋ ಆಸ್ಪತ್ರೆಯವರು ಜಯಲಲಿತಾರಿಗೆ ನೀಡಿದ ಚಿಕಿತ್ಸೆ ಬಗೆಗೆ ಈ ಮೊದಲೇ ಜಸ್ಟಿಸ್ ಆರ್ಮಗಸ್ವಾಮಿಯವರ ಆಯೋಗವು ಕ್ಲೀನ್ ಚಿಟ್ ವರದಿಯನ್ನು ಸಲ್ಲಿಸಿತ್ತು.