ಬೆಂಗಳೂರು : 2ಎ ಮೀಸಲಾತಿಗೆ ಸಂಬಂಧಿಸಿ ಕಾಲಾವಕಾಶ ಕೋರಿರುವ ಮುಖ್ಯಮಂತ್ರಿ ಸಿಎಂ ಯಡಿಯೂರಪ್ಪ ಆ ಬಗ್ಗೆ ನಮಗೆ ಲಿಖಿತವಾಗಿ ಅಥವಾ ಸ್ಥಳಕ್ಕೆ ಬಂದು ಭರವಸೆ ನೀಡಬೇಕು ಎಂದು ಪಂಚಮಸಾಲಿ ಮೀಸಲಾತಿ ಹೋರಾಟದ ನೇತೃತ್ವ ವಹಿಸಿರುವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ನಗರದ ಫ್ರೀಡಂ ಪಾರ್ಕ್ ನಲ್ಲಿ 2ಎ ಮೀಸಲಾತಿಗೆ ಒತ್ತಾಯಿಸಿ ಲಿಂಗಾಯತ ಪಂಚಮಸಾಲಿ ಸಮಾಜ ನಡೆಸುತ್ತಿರುವ ಸತ್ಯಾಗ್ರಹ ಇವತ್ತಿಗೆ 6ನೇ ದಿನಕ್ಕೆ ತಲುಪಿದೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಜಯ ಮೃತ್ಯುಂಜಯ ಸ್ವಾಮೀಜಿ, ಸರಕಾರ ನಮ್ಮ ಬೇಡಿಕೆಯನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು. ಸತ್ಯಾಗ್ರಹವನ್ನು ಮಾ.4ರ ವರೆಗೆ ಮುಂದುವರಿಸುತ್ತೇವೆ. ಸಮಯಾವಕಾಶ ಕೇಳಿರುವ ಮುಖ್ಯಮಂತ್ರಿ ನಮಗೆ ಲಿಖಿತವಾಗಿ ಅಥವಾ ಪ್ರತಿಭಟನಾ ಸ್ಥಳಕ್ಕೆ ಬಂದು ತಿಳಿಸಲಿ. ಕೇಂದ್ರ ಸರಕಾರ ಮೇಲ್ಜಾತಿ ವರ್ಗಗಳಿಗೆ ಯಾವುದೇ ಬೇಡಿಕೆ, ಪ್ರತಿಭಟನೆಗಳಿಲ್ಲದೆಯೇ, ಆರ್ಥಿಕವಾಗಿ ವಿಶೇಷ ವಲಯವೆಂದು ಗುರುತಿಸಿ ಶೇ.10 ಮೀಸಲಾತಿ ಕೊಟ್ಟಿದೆ. ಹಾಗಿದ್ರೆ, ನಮ್ಮ ನ್ಯಾಯಯುತ ಬೇಡಿಕೆಗೆ ಸರಕಾರ ಯಾಕೆ ಸ್ಪಂಧಿಸುತ್ತಿಲ್ಲ? ಎಂದು ಅವರು ಪ್ರಶ್ನಿಸಿದ್ದಾರೆ.