ಜಯ್ ಶಾ ಹೇಳಿಕೆ ಕ್ರಿಕೆಟ್ ಸಮುದಾಯಗಳನ್ನು ವಿಭಜಿಸಲಿದೆ: ಪಿಸಿಬಿ

Prasthutha|

ಭಾರತಕ್ಕೆ ಬರಲ್ಲ ಎಂದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್

- Advertisement -

ನವದೆಹಲಿ: ಭಾರತ-ಪಾಕಿಸ್ತಾನ ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟು ಇದೀಗ ಕ್ರಿಕೆಟ್ ವಲಯದಲ್ಲೂ ಮುಂದುವರಿದಿದೆ. 2023 ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಿಲ್ಲ. ಪಾಕಿಸ್ತಾನದಲ್ಲಿ ಆಯೋಜನೆಯಾಗಿರುವ ಟೂರ್ನಿಯನ್ನು ತಟಸ್ಥ ತಾಣಕ್ಕೆ ವರ್ಗಾಯಿಸಲಾಗುವುದು ಎಂಬ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ ಹೇಳಿಕೆಗೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಖಾರವಾಗಿ ಪ್ರತಿಕ್ರಿಯಿಸಿದೆ.

ʻ2023ರ ಏಕದಿನ ವಿಶ್ವಕಪ್ ಸೇರಿದಂತೆ ಮುಂದಿನ ವರ್ಷಗಳಲ್ಲಿ ಭಾರತದಲ್ಲಿ ನಿಗದಿಯಾಗಿರುವ ಐಸಿಸಿ ಟೂರ್ನಿಗಳಲ್ಲಿ ಪಾಕಿಸ್ತಾನ ತಂಡ ಭಾಗವಹಿಸದೇ ಇರುವುದಕ್ಕೆ ಜಯ್ ಶಾ ಹೇಳಿಕೆ ಕಾರಣವಾಗಬಹುದು ಎಂದು ಪಿಸಿಬಿ ಎಚ್ಚರಿಸಿದೆ.

- Advertisement -

ಮುಂಬೈನಲ್ಲಿ ಮಂಗಳವಾರ ನಡೆದ ಬಿಸಿಸಿಐ ವಾರ್ಷಿಕ ಸಭೆಯ ಬಳಿಕ ಜಯ್ ಶಾ ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿರುವ ಪಿಸಿಬಿ, ತುರ್ತಾಗಿ ಏಷ್ಯಾ ಕ್ರಿಕೆಟ್ ಕೌನ್ಸಿಲ್ ಸದಸ್ಯರ ಸಭೆ ಕರೆಯುವಂತೆ ಆಗ್ರಹಿಸಿದೆ. 2023 ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯು ಪೂರ್ವ ನಿಗದಿಯಂತೆ, ಜುಲೈ- ಆಗಸ್ಟ್ ತಿಂಗಳಿನಲ್ಲಿ ಪಾಕಿಸ್ತಾನದಲ್ಲಿ ನಡೆಯಬೇಕಿತ್ತು. ಆದರೆ ಈ ಟೂರ್ನಿಯನ್ನು ತಟಸ್ಥ ತಾಣಕ್ಕೆ ವರ್ಗಾಯಿಸಲಾಗುವುದು ಎಂದು ಜಯ್ ಶಾ ಹೇಳಿದ್ದಾರೆ. ಆದರೆ ಈ ಕುರಿತಾಗಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ಗೆ ಯಾವುದೇ ಮಾಹಿತಿ ನೀಡಿಲ್ಲ. ಮತ್ತು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಯಾವುದೇ ಚರ್ಚೆ ನಡೆಸದೆ ಶಾ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ. ಇದೊಂದು ಪ್ರಮುಖ ಮತ್ತು ಸೂಕ್ಷ್ಮ ವಿಚಾರವಾಗಿದ್ದು, ಈ ಹಿನ್ನೆಲೆಯಲ್ಲಿ ತುರ್ತಾಗಿ ಎಸಿಸಿ ಸದಸ್ಯರ ಸಭೆ ಕರೆಯುವಂತೆ ಪಿಸಿಬಿ ಪತ್ರದ ಮೂಲಕ ಆಗ್ರಹಿಸಿದೆ.

ʻಇಂತಹ ಹೇಳಿಕೆಗಳ ಒಟ್ಟಾರೆ ಪರಿಣಾಮವು ಏಷ್ಯನ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಸಮುದಾಯಗಳನ್ನು ವಿಭಜಿಸಲಿದೆ. 2023ರ ಐಸಿಸಿ ವಿಶ್ವಕಪ್ ಮತ್ತು 2024-2031ರ ನಡುವಿನಲ್ಲಿ ಭಾರತದಲ್ಲಿ ಐಸಿಸಿ ಆಯೋಜಿಸುವ ಟೂರ್ನಿಗಳಲ್ಲಿ ಪಾಕಿಸ್ತಾನ ತಂಡ ಭಾಗವಹಿಸದೇ ಇರುವುದಕ್ಕೆ ಜಯ್ ಶಾ ಹೇಳಿಕೆ ಕಾರಣವಾಗಬಹುದು.ʼ

ʻಪಾಕಿಸ್ತಾನದಲ್ಲಿ ನಿಗದಿಯಾಗಿರುವ ಏಷ್ಯಾ ಕಪ್ ಟೂರ್ನಿಯನ್ನು ತಟಸ್ಥ ಸ್ಥಳಕ್ಕೆ ಸ್ಥಳಾಂತರಿಸುವ ಕುರಿತು ಎಸಿಸಿ ಅಧ್ಯಕ್ಷ ಜಯ್ ಶಾ ಅವರು ಮಂಗಳವಾರ ನೀಡಿದ ಹೇಳಿಕೆಯು ಪಿಸಿಬಿ ಪಾಲಿಗೆ ಆಶ್ಚರ್ಯ ಮತ್ತು ನಿರಾಸೆ ಉಂಟುಮಾಡಿದೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮಂಡಳಿ ಅಥವಾ ಪಾಕಿಸ್ತಾನ ಕ್ರಿಕೆಟ್ ಮಂಡಳಿ ( ಏಷ್ಯಾ ಕಪ್ ಆಯೋಜಕರು) ಜೊತೆ ಯಾವುದೇ ಚರ್ಚೆ ಅಥವಾ ಸಮಾಲೋಚನೆ ನಡೆಸದೇ ನೀಡಿದ ಈ ಹೇಳಿಕೆಯು ದೀರ್ಘಕಾಲೀನ ಪರಿಣಾಮ ಬೀರಲಿದೆ. ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಬಿಕ್ಕಟ್ಟಿನ ಕುರಿತಾದ ಪರಿಣಾಮವನ್ನು ಊಹಿಸದೆಯೇ ಜಯ್ ಶಾ ಅವರರು ಏಕಪಕ್ಷೀಯ ಹೇಳಿಕೆ ನೀಡಿದ್ದಾರೆ ಎಂದು ಪಿಸಿಬಿ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಸಿದೆ.

ಮುಂಬೈನಲ್ಲಿ ಮಂಗಳವಾರ ನಡೆದ ಬಿಸಿಸಿಐ ವಾರ್ಷಿಕ ಸಭೆಯ ಬಳಿಕ ಮಾತನಾಡಿದ ಶಾ, ʻ ಈ ಹಿಂದೆ ಪಾಕಿಸ್ತಾನವು ಭಾರತದಲ್ಲಿ ಕ್ರಿಕೆಟ್ ಆಡಲು ನಿರಾಕರಿಸಿತ್ತು. ಹೀಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಿಲ್ಲ. 2023 ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯನ್ನು ತಟಸ್ಥ ತಾಣದಲ್ಲಿ ಆಯೋಜಿಸಲಾಗುವುದು. ಇದು ನನ್ನ ನಿರ್ಧಾರʼ ಎಂದು ಹೇಳಿದ್ದರು.

2023ರಲ್ಲಿ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿದ್ದು, 2025ರ ಚಾಂಪಿಯನ್ಸ್ ಟ್ರೋಫಿ ಪೂರ್ವ ನಿಗದಿಯಂತೆ ಪಾಕಿಸ್ತಾನದಲ್ಲಿ ನಡೆಯಲಿದೆ. ಇದು ಐಸಿಸಿ ಆಯೋಜಿಸುವ ಟೂರ್ನಿಯಾಗಿರುವ ಹಿನ್ನಲೆಯಲ್ಲಿ ಸ್ಥಳಾಂತರವಾಗುವ ಯಾವುದೇ ಸಾಧ್ಯತೆಗಳಿಲ್ಲ.



Join Whatsapp