ಯೋಧನ ಹತ್ಯೆ:  ಸಂತ್ರಸ್ತ ಕುಟುಂಬಕ್ಕೆ ಬೆಂಬಲವಾಗಿ ನಿಂತ ಬಿಎಸ್’ಎಫ್

Prasthutha|

ಗಾಂಧಿನಗರ: ತಮ್ಮ ಅಪ್ರಾಪ್ತ ವಯಸ್ಸಿನ ಮಗಳ ವೀಡಿಯೋವನ್ನು ಜಾಲತಾಣಕ್ಕೆ ಹಾಕಿದ್ದನ್ನು ಪ್ರಶ್ನಿಸಲು ಹೋದ ಬಿಎಸ್’ಎಫ್ ಯೋಧ 45ರ ಮೇಲಾಜಿಭಾಯಿ ವಘೇಲರನ್ನು ಹತ್ಯೆಗೈದ ವಿಷಯ ತಿಳಿದು ಬಿಎಸ್ಎಫ್- ಗಡಿ ಭದ್ರತಾ ಪಡೆಯವರು ಧಾವಿಸಿ   ಕಾನೂನು ಪ್ರಕ್ರಿಯೆಯನ್ನು ಆರಂಭಿಸಿದ್ದಾರೆ.

- Advertisement -

“ಬಿಎಸ್’ಎಫ್ ಯೋಧರು ಸಾವಿಗೀಡಾದ ಸೈನಿಕನ ಕುಟುಂಬದ ಸಂಪರ್ಕದಲ್ಲಿದ್ದು, ಅಗತ್ಯವಿರುವ ಹಣ, ವೈದ್ಯಕೀಯ ಸೇರಿದಂತೆ ಎಲ್ಲ ಬಗೆಯ ನೆರವು ನೀಡಲಾಗುವುದು” ಎಂದು ಬಿಎಸ್’ಎಫ್ ಮಂಗಳವಾರ ಪತ್ರ ಬರೆದು ತಿಳಿಸಿದೆ.

ಚಕ್ಲಾಸಿ ತಾಲೂಕಿನ ವಾಣಿಪುರ ಗ್ರಾಮದಲ್ಲಿ ಡಿಸೆಂಬರ್ 24ರ ರಾತ್ರಿ ವಘೇಲಾರನ್ನು ಕೊಚ್ಚಿ ಕೊಂದಿದ್ದರು. ಅವರು 15 ದಿನಗಳ ರಜೆಯಲ್ಲಿ ಮನೆಗೆ ಬಂದಿದ್ದಾಗ ಈ ಕೃತ್ಯ ನಡೆದಿದೆ. ಇಬ್ಬರು ಮಹಿಳೆಯರ ಸಹಿತ ಕೊಲೆ ಮಾಡಿದ 7 ಜನರನ್ನು ಬಂಧಿಸಿದ್ದು ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ. ಅವರ ಮೇಲೆ ಗಲಭೆ ಮತ್ತು ಕೊಲೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

- Advertisement -

ವಘೇಲಾರ ಪತ್ನಿ 42ರ ಹರೆಯದ ಮಂಜುಳಾ ಅವರು ನಡಿಯಾಡ್’ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಸ್ಥಿತಿ ಗಂಭೀರವಾಗಿದೆ ಎಂದು ಮಗ ಪ್ರತೀಕ್ ತಿಳಿಸಿದ್ದಾರೆ. ಅವರ ಇನ್ನೊಬ್ಬ ಮಗ ನವದೀಪ್ ಸಹ ತೀವ್ರ ಗಾಯಗೊಂಡಿದ್ದು ಅಹಮದಾಬಾದ್ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬವು ಚಕ್ಲಾಸಿ ತಾಲೂಕಿನ ಸೂರ್ಯನಗರದಲ್ಲಿ ನೆಲೆಸಿತ್ತು.

ಗುಜರಾತ್ ವಲಯದ ಬಿಎಸ್’ಎಫ್ ಇನ್ಸ್’ಪೆಕ್ಟರ್ ಜನರಲ್ ರವಿ ಗಾಂಧಿಯವರು ರಾಜ್ಯ ಪೊಲೀಸ್ ಇಲಾಖೆಯ ಜೊತೆ ಸಂಪರ್ಕದಲ್ಲಿದ್ದು ತನಿಖೆಗೆ ಎಲ್ಲ ಬಗೆಯ ಸಹಕಾರ ನೀಡುವುದಾಗಿ ಹೇಳಿದ್ದಾರೆ. “ಕೊಲೆಯಾದ ಬಿಎಸ್’ಎಫ್ ಯೋಧ ಮತ್ತು ಗಾಯಗೊಂಡ ಕುಟುಂಬದವರಿಗೆ ಬೇಗ ನ್ಯಾಯ ದೊರಕಿಸಲು ಬಿಎಸ್’ಎಫ್ ಮತ್ತು ರಾಜ್ಯ ಪೋಲೀಸು ಇಲಾಖೆ ಸಮನ್ವಯದಿಂದ ಕೆಲಸ ಮಾಡುತ್ತಿವೆ” ಎಂದು ರವಿ ಗಾಂಧಿ ತಿಳಿಸಿದ್ದಾರೆ.

ವಘೇಲಾ ಅವರು ಬಿಎಸ್’ಎಫ್’ನ ಮೆಹ್ಸಾನಾದ 56ನೇ ಬೆಟಾಲಿಯನ್’ನಲ್ಲಿ ಹವಾಲ್ದಾರ್ ಆಗಿದ್ದರು. ಅವರ 15ರ ಹರೆಯದ ಮಗಳ ವೀಡಿಯೋವನ್ನು ಶೈಲೇಶ್ ಅಲಿಯಾಸ್ ಸುನೀಲ್ ಜಾಧವ್ ಎಂಬಾತ ಜಾಲತಾಣಕ್ಕೆ ಹಾಕಿದ್ದನು. ಇದನ್ನು ವಿಚಾರಿಸಲು ವಘೇಲಾ, ಅವರ ಮಡದಿ ಮಂಜುಳ, ಮಗ ನವದೀಪ್ ಮತ್ತು ಸೋದರಳಿಯ ಚಿರಾಗ್ ವಘೇಲಾ ಅಲ್ಲಿಗೆ ಹೋಗಿದ್ದರು. ಆಗ ಏಳು ಜನರು ದಾಳಿ ಮಾಡಿ ವಘೇಲಾರನ್ನು ಕೊಚ್ಚಿ ಕೊಂದರೆ, ಉಳಿದವರನ್ನು ಗಾಯಗೊಳಿಸಿದ್ದರು.

 ಆರೋಪಿಗಳ ವಿರುದ್ಧ ಐಪಿಸಿ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿದ್ದಾರೆ.



Join Whatsapp