ಬೆಂಗಳೂರು: ದೇಶದ ಪ್ರಥಮ ಪ್ರಧಾನಿಗಳಾದ ಜವಾಹರಲಾಲ್ ನೆಹರೂ ಅವರು ಮಹಾನ್ ಪ್ರಜಾಪ್ರಭುತ್ವವಾದಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ಇಂದು ಭಾರತದ ಪ್ರಪ್ರಥಮ ಪ್ರಧಾನಮಂತ್ರಿ ಪಂಡಿತ್ ಜವಾಹರಲಾಲ್ ನೆಹರೂ ಅವರ 59ನೇಯ ಪುಣ್ಯತಿಥಿಯ ಅಂಗವಾಗಿ ವಿಧಾನಸೌಧದ ಆವರಣದಲ್ಲಿರುವ ಅವರ ಪ್ರತಿಮೆಯ ಬಳಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
ಜವಾಹರಲಾಲ್ ನೆಹರೂ ಅವರು ಈ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಮೊದಲನೇ ಪ್ರಧಾನಿಯಾಗಿ 17 ವರ್ಷಗಳ ಕಾಲ ಸ್ವತಂತ್ರ ಭಾರತವನ್ನು ಆಧುನಿಕಗೊಳಿಸಲು ಪ್ರಮುಖ ಪಾತ್ರ ವಹಿಸಿದ್ದರು. ಅದಕ್ಕಾಗಿಯೇ ಆಧುನಿಕ ಭಾರತ ನಿರ್ಮಾತೃ ಎಂದು ಕರೆಯುತ್ತೇವೆ. ಬ್ರಿಟಿಷರು ದೇಶವನ್ನು ಲೂಟಿ ಮಾಡಿ ಬಿಟ್ಟು ಹೋಗಿದ್ದ ದೇಶವನ್ನು ಪ್ರಧಾನಿಗಳಾಗಿ ಅನೇಕ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡಿದರು. ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಯಾಗಿ ನೆಲೆಗೊಂಡಿದ್ದರೆ, ಸಾರ್ವಭೌಮತ್ವ ಉಳಿದಿದ್ದರೆ ಅದಕ್ಕೆ ಜವಾಹರಲಾಲ್ ನೆಹರೂ ಅವರು ಕಾರಣ. ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದು ದೇಶದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಿದ್ದರು ಎಂದರು.
ಆಧುನಿಕತೆಯ ಅಡಿಪಾಯ
ಅವರು ಹಾಕಿದ ಅಡಿಪಾಯದ ಮೇಲೆಯೇ ಅಭಿವೃದ್ಧಿ ಕಾರ್ಯವನ್ನು ಮುಂದುವರೆಸುವ ಕೆಲಸವನ್ನು ಮಾಡುತ್ತೇವೆ. ಈ ದೇಶಕ್ಕೆ ಪ್ರಜಾಪ್ರಭುತ್ವ, ಅಭಿವೃದ್ಧಿ, ಆಧುನಿಕತೆಯ ಅಡಿಪಾಯ ಹಾಕಿದವರು ನೆಹರೂ. ಸ್ವಾತಂತ್ರ್ಯ ಹೋರಾಟದಲ್ಲಿ , ಸುಭಾಶ್ ಚಂದ್ರ ಬೋಸ್, ವಲ್ಲಭಭಾಯಿ ಪಟೇಲ್ , ಜವಾಹರಲಾಲ್ ನೆಹರೂ, ಚಂದ್ರಶೇಖರ್ ಆಜಾದ್, ಲಾಲ್ ಬಹದ್ದೂರ್ ಶಾಸ್ತ್ರಿ ಅವರುಗಳು ಮಹಾತ್ಮಗಾಂಧಿ ಅವರೊಂದಿಗೆ ಅಪಾರವಾಗಿ ತೊಡಗಿಸಿಕೊಂಡಿದ್ದರು. ನೆಹರು ಅವರು ಸುಮಾರು ಒಂಭತ್ತು ವರ್ಷಗಳ ಕಾಲ ಜೈಲು ವಾಸವನ್ನೂ ಅನುಭವಿಸಿದ್ದರು. ದೇಶದ ಸ್ವಾತಂತ್ರ್ಯ, ಅಭಿವೃದ್ಧಿಗಾಗಿ ಅಪಾರ ತ್ಯಾಗ, ಬಲಿದಾನಗಳನ್ನು ಮಾಡಿದ ಕುಟುಂಬ ಅವರದ್ದು ಎಂದು ತಿಳಿಸಿದರು.
ತ್ಯಾಗ, ಬಲಿದಾನಗಳನ್ನು ಸ್ಮರಿಸಬೇಕು
ಈಗ ಟೀಕೆಗಳನ್ನು ಮಾಡುತ್ತಾರೆ ಆದರೆ ಅವರು ದೇಶಕ್ಕಾಗಿ ಮಾಡಿದ ತ್ಯಾಗ, ಬಲಿದಾನಗಳನ್ನು ನಾವು ಸ್ಮರಿಸಬೇಕು. ಅದು ನಮ್ಮೆಲರಿಗೂ ಸ್ಫೂರ್ತಿ. ಮಹಾನ್ ವ್ಯಕ್ತಿಯ ಪುಣ್ಯ ಸ್ಮರಣೆಯಂದು ಅವರನ್ನು ಸ್ಮರಿಸುತ್ತಿದ್ದೇವೆ ಎಂದರು.