ನೆಹರು, ವಾಜಪೇಯಿ ಆದರ್ಶ ನಾಯಕರು, ಎಲ್ಲಾ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಲಿ: ನಿತಿನ್ ಗಡ್ಕರಿ

Prasthutha|

ಮುಂಬೈ: ಮಾಜಿ ಪ್ರಧಾನಿಗಳಾದ ಜವಾಹರಲಾಲ್ ನೆಹರು, ಅಟಲ್ ಬಿಹಾರಿ ವಾಜಪೇಯಿ ಅವರನ್ನು “ ಭಾರತೀಯ ಪ್ರಜಾಪ್ರಭುತ್ವದ ಆದರ್ಶ ನಾಯಕರು” ಎಂದು ಕೇಂದ್ರ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ನಿತಿನ್ ಗಡ್ಕರಿ ಬಣ್ಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ನಾಯಕರು ಆತ್ಮಾವಲೋಕನ ಮಾಡಿಕೊಳ್ಳಲಿ ಮತ್ತು ಘನತೆಯಿಂದ ವರ್ತಿಸಲಿಯೆಂದು ಅವರು ಬುಧವಾರ ಹೇಳಿಕೆ ನೀಡಿದ್ದಾರೆ.

- Advertisement -

ಅಟಲ್ ಬಿಹಾರಿ ವಾಜಪೇಯಿ ನಮ್ಮ ಸ್ಫೂರ್ತಿ ಮತ್ತು ಪಂಡಿತ್ ಜವಾಹರಲಾಲ್ ನೆಹರು ಅವರು ಕೂಡ ಭಾರತೀಯ ಪ್ರಜಾಪ್ರಭುತ್ವಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆಂದು ಅವರು ಹೇಳಿದರು.

ಇತ್ತೀಚೆಗೆ ನಡೆದ ಮಾನ್ಸೂನ್ ಅಧಿವೇಶನದಲ್ಲಿ ಪೆಗಾಸೆಸ್ ಸ್ಪೈವೇರ್, ಕೃಷಿಕಾಯ್ದೆ, ಬೆಲೆಯೇರಿಕೆ ವಿರುದ್ಧ ಆಡಳಿತ ಮತ್ತು ವಿರೋಧ ಪಕ್ಷ ಪರ ವಿರೋಧ ಚರ್ಚೆಗಳು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉತ್ತಮ ಬೆಳವಣಿಗೆ. ಆದರೆ ಇದನ್ನು ಮುಂದಿಟ್ಟುಕೊಂಡು ಪರಸ್ಪರ ಆರೋಪ-ಪ್ರತ್ಯಾರೋಪ ನಿರತರಾಗಿರುವುದು ದುರಂತ. ಈ ಹಿನ್ನೆಲೆಯಲ್ಲಿ ಉಭಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಅವರು ಹೇಳಿದರು.

- Advertisement -

ವಾಸ್ತವದಲ್ಲಿ ಇಂದು ಅಧಿಕಾರದಲ್ಲಿರುವವರು ನಾಳೆ ವಿರೋಧ ಪಕ್ಷದಲ್ಲಿರುತ್ತಾರೆ. ಮಾತ್ರವಲ್ಲದೆ ಈ ಸ್ಥಿತಿ ನಾಳೆ ಬದಲಾವಣೆಯಾಗಬಹುದು ಎಂದು ಹೇಳಿರು. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬೇಸರ ವ್ಯಕ್ತಪಡಿಸಿದ ಅವರು ರಾಜಕೀಯದಲ್ಲಿ ಪ್ರತಿಯೊಬ್ಬರೂ ಘನತೆಯನ್ನು ಕಾಪಾಡುವಂತಾಗಲಿ ಎಂದು ಕಿವಿಮಾತು ಹೇಳಿದರು.

ಕಾಂಗ್ರೆಸ್ ಪಕ್ಷದ ಸದ್ಯದ ಸ್ಥಿತಿಯ ಕುರಿತು ಮಾತನಾಡಿದ ಗಡ್ಕರಿ “ಯಶಸ್ವಿ ಪ್ರಜಾಪ್ರಭುತ್ವದಲ್ಲಿ ಬಲವಾದ ವಿರೋಧ ಅಗತ್ಯ. ಆಡಳಿತ ಮತ್ತು ವಿರೋಧ ಪಕ್ಷಗಳು ಪ್ರಜಾಪ್ರಭುತ್ವದ ಎರಡು ಚಕ್ರಗಳು. ಪ್ರಜಾಪ್ರಭುತ್ವವನ್ನು ಯಶಸ್ವಿಗೊಳಿಸಲು ಪ್ರಬಲ ವಿರೋಧ ಪಕ್ಷದ ಅಗತ್ಯವಿದೆ ಎಂದು ತಿಳಿಸಿದರು.

ನೆಹರು ಎಲ್ಲಾ ಸಮಯದಲ್ಲಿ ವಿರೋಧ ಪಕ್ಷದ ನಾಯಕರಾದ ವಾಜಪೇಯಿ ಅವರನ್ನು ಸಂದರ್ಭನುಸಾರವಾಗಿ ಗೌರವ ಮತ್ತು ವಿರೋಧಿಸುತ್ತಿದ್ದರು. ಈ ನಿಟ್ಟಿನಲ್ಲಿ ಪ್ರಸಕ್ತ ಸನ್ನಿವೇಶದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಲಿಯೆಂದು ತಿಳಿಸಿದರು. ಕಾಂಗ್ರೆಸ್ ಪಕ್ಷ ಪ್ರಬಲ ವಿರೋಧ ಪಕ್ಷವಾಗಿ ಹೊರಹೊಮ್ಮಬೇಕು ಮತ್ತು ಜವಬ್ದಾರಿಯುತ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸಲಿಯೆಂದು ಸಲಹೆ ನೀಡಿದರು.

ಸದ್ಯ ದೇಶದ ರಾಜಕೀಯ ವಿದ್ಯಮಾನಗಳನ್ನು ಅವಲೋಕಿಸಿದಾಗ ಉಭಯ ಪಕ್ಷದ ನಾಯಕರು ಗತಿಸಿದ ಹಿರಿಯ ನಾಯಕರನ್ನು ಮುಂದಿಟ್ಟುಕೊಂಡು ನೀಚ ಹೇಳಿಕೆಯನ್ನು ಹರಿಯಬಿಡುವ ಮೂಲಕ ಪರಸ್ಪರ ಕೆಸರೆರಚಾಟದಲ್ಲಿ ನಿರತರಾಗಿರುವ ನಡುವೆ ನಿತಿನ್ ಗಡ್ಕರಿ ಅವರ ಈ ಹೇಳಿಕೆ ಸಾಕಷ್ಟು ಮಹತ್ವ ಪಡೆದಿದೆ.



Join Whatsapp