ನವದೆಹಲಿ: ದೆಹಲಿಯ ಜಂತರ್ ಮಂತರ್ ನಲ್ಲಿ ಹಿಂದುತ್ವವಾದಿಗಳಿಂದ ಪ್ರಚೋದನಕಾರಿ, ಮುಸ್ಲಿಮ್ ವಿರೋಧಿ ಘೋಷಣೆ ಮತ್ತು ಹಿಂಸೆಗೆ ಕರೆನೀಡಿದ ಪ್ರಕರಣದ ಪ್ರಮುಖ ಆರೋಪಿ ಪಿಂಕಿ ಚೌಧರಿ ಅಲಿಯಾಸ್ ಭೂಪೇಂದರ್ ತೋಮರ್ ಗೆ ದೆಹಲಿ ನ್ಯಾಯಾಲಯವು ಶುಕ್ರವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡುವ ಮೂಲಕ ಬಂಧನಕ್ಕೆ ತಡೆ ನೀಡಿದೆ.
ಘಟಣೆಗೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ಸಲ್ಲಿಸಿದ ವೀಡಿಯೋ ವರದಿ ಆಧಾರದಲ್ಲಿ ಬಂಧನ ಭೀತಿಯಲ್ಲಿದ್ದ ಪಿಂಕಿ ಚೌಧರಿಗೆ ಪಟಿಯಾಲ ಹೌಸ್ ಕೋರ್ಟ್ ನ್ಯಾಯಾಧೀಶರಾದ ಅಶುತೋಷ್ ಕುಮರ್ ಅವರು ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಬಂಧನದಿಂದ ತಡೆ ನೀಡಿದೆ. ಮಾತ್ರವಲ್ಲ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಅಥವಾ ಸಾಕ್ಷ್ಯಗಳನ್ನು ತಿರುಚ ಬಾರದೆಂದು ನ್ಯಾಯಾಲಯವು ಆರೋಪಿಗೆ ಸೂಚಿಸಿದೆ. ಅಗತ್ಯ ಸಂದರ್ಭದಲ್ಲಿ ತನಿಖಾಧಿಕಾರಿಗಳೊಂದಿಗೆ ಸಹಕರಿಸಬೇಕೆಂದು ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.
ಕಾರ್ಯಕ್ರಮದ ಪ್ರಮುಖ ಸಂಘಟಕರು ಮತ್ತು ಆರೋಪಿಗಳಲ್ಲಿ ಒಬ್ಬರಾದ ಅಶ್ವಿನಿ ಉಪಾಧ್ಯಾಯ ಅವರು ದೆಹಲಿ ಪೊಲೀಸರಿಂದ ಬಂಧನದ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಮುಸ್ಲಿಮ್ ವಿರೋಧಿ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ ಐದು ಮಂದಿ ಆರೋಪಿಗಳನ್ನು ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.
ಆರೋಪಿ ಪರ ವಕೀಲರು ಎಫ್.ಐ.ಆರ್ ನಲ್ಲಿ ಚೌಧರಿಯ ಹೆಸರಿಲ್ಲ ಮತ್ತು ಘಟನೆ ಸಂದರ್ಭದಲ್ಲಿ ಸ್ಥಳದಲ್ಲಿರಲಿಲ್ಲ. ಮಾತ್ರವಲ್ಲ ಅವರು ಯಾವುದೇ ಕೋಮು ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿಲ್ಲವೆಂದು ನ್ಯಾಯಾಲಯಕ್ಕೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಪಿಂಕಿ ಚೌಧರಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ಪುರಸ್ಕರಿಸಿ ನ್ಯಾಯಾಲಯ ಅವರಿಗೆ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಮಂಜೂರು ಮಾಡುವ ಮೂಲಕ ಬಂಧನದಿಂದ ಮುಕ್ತಿ ನೀಡಿದೆ.