ಬೆಂಗಳೂರು: ಜನಾಕ್ರೋಶದಿಂದಾಗಿ ಜನೋತ್ಸವ ಕಾರ್ಯಕ್ರಮ ರದ್ದಾಗಿದೆ. ಅವರಿಗೆ ನಿಜವಾಗಿಯೂ ಜನರ ಬಗ್ಗೆ ಇಷ್ಟು ಕಾಳಜಿ ಇದ್ದಿದ್ದರೆ, ಅವರು ಗುಪ್ತಚರ ಇಲಾಖೆ ಮಾಹಿತಿ ಪಡೆದು 27ರಂದು ಕಾರ್ಯಕ್ರಮವನ್ನು ರದ್ದು ಮಾಡಬಹುದಿತ್ತು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ‘ಬಿಜೆಪಿ ಸರ್ಕಾರ ತನ್ನ ಒಂದು ವರ್ಷದ ಸಾಧನೆಯ ಜನೋತ್ಸವ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಪ್ರವೀಣ್ ಅವರ ಸಾವಿನಿಂದ ತೀವ್ರವಾಗಿ ಮನನೊಂದು ಈ ಕಾರ್ಯಕ್ರಮ ಮಾಡಲು ಮನಸ್ಸು ಒಪ್ಪುತ್ತಿಲ್ಲ ಎಂಬ ಕಾರಣ ಕೊಟ್ಟು ರದ್ದು ಮಾಡಲಾಗಿದೆ ಎಂದು ತಿಳಿಸಿದರು.
ಈ ಮಧ್ಯೆ ಬಿಜೆಪಿ ಸರ್ಕಾರ ಕೆಳಗಿನ ಬೇಡಿಕೆಗಳನ್ನು ಈಡೇರಿಸುವಂತೆ ಕಾಂಗ್ರೆಸ್ ಆಗ್ರಹಿಸಿದೆ:
- ಪ್ರವೀಣ್ ಹತ್ಯೆ ಪ್ರಕರಣದ ತನಿಖೆ ಮುಕ್ತ ಹಾಗೂ ಪಾರದರ್ಶಕವಾಗಬೇಕು.
2.ಇದುವರೆಗೂ ಆಗಿರುವ ಕೋಮುಗಲಭೆ ಹಾಗೂ ಕೋಮುಹತ್ಯೆಯ ಬಗ್ಗೆ ನ್ಯಾಯಾಂಗ ತನಿಖೆ ಆಗಬೇಕು.
3.ನಮ್ಮ ಸಮಾಜದಲ್ಲಿ ಕೋಮು ವಿಷ ಬೀಜ ಬಿತ್ತುತ್ತಿರುವ ಎಲ್ಲಾ ಸಮುದಾಯಗಳ ಸಂಘಟನೆಗಳನ್ನು ನಿಷೇಧಿಸಬೇಕು. ಇದಕ್ಕೆ ನಾವು ಬೆಂಬಲಿಸುತ್ತೇವೆ ಎಂದರು
ಆದರೆ ಸತ್ಯಾಂಶ ಏನೆಂದರೆ ಪ್ರವೀಣ್ ಅವರ ಹತ್ಯೆಯಾಗಿದ್ದು ಜುಲೈ 26 ರಂದು ಮುಖ್ಯಮಂತ್ರಿಗಳ ಮನಸ್ಸು ಕರಗಿದ್ದು ಜುಲೈ 28 ಬೆಳಗಿನ ಜಾವ 12:30ಕ್ಕೆ ಎಂದು ಲೇವಡಿ ಮಾಡಿದರು.
ಸಚಿವರಾದ ಸುನಿಲ್ ಕುಮಾರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಅವರಿಗೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ದಿಗ್ಬಂಧನ ಮಾಡಿದಾಗ ಸರ್ಕಾರಕ್ಕೆ ಈ ಜ್ಞಾನೋದಯವಾಗಿದೆ.ಬಿಜೆಪಿ ಯುವ ಮೋರ್ಚಾ ಹಾಗೂ ಪದಾಧಿಕಾರಿಗಳು ಸಾಮೂಹಿಕ ರಾಜೀನಾಮೆಗೆ ನೀಡಲು ಮುಂತಾದಾಗ ಮುಖ್ಯಮಂತ್ರಿ ಮತ್ತು ಬಿಜೆಪಿಗೆ ಜ್ಞಾನೋದಯವಾಗಿದೆ ಎಂದು ತಿಳಿಸಿದರು.
ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರು ಗೃಹ ಮಂತ್ರಿಗಳು ಹಾಗೂ ಮುಖ್ಯಮಂತ್ರಿಗಳ ರಾಜೀನಾಮೆಗೆ ಪಟ್ಟು ಹಿಡಿದು, ಬಿಜೆಪಿ ಸರ್ಕಾರದಲ್ಲಿ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಇಲ್ಲ ಎಂದಾದರೆ ಬಿಜೆಪಿ ಸರ್ಕಾರ ಇರಬೇಕೇ ಎಂದು ಜನ ಆಕ್ರೋಶದಿಂದ ಮಾತನಾಡಿದಾಗ ಅವರಿಗೆ ಜ್ಞಾನೋದಯವಾಗಿದೆ ಎಂದು ತಿಳಿಸಿದ್ದಾರೆ.
ಸರ್ಕಾರ ಅನುಕಂಪದ ಹೆಸರಲ್ಲಿ ಯಾರ ಮೇಲೆ ಗೂಬೆಕೂರಿಸಲು ಪ್ರಯತ್ನಿಸುತ್ತಿದೆ? ಪ್ರವೀಣ್ ಅವರ ಪತ್ನಿಯೇ ಈ ಸರ್ಕಾರದಿಂದ ಯಾರಿಗೂ ನ್ಯಾಯ ಸಿಗುವುದಿಲ್ಲ ಎಂದು ಹೇಳಿದ್ದಾರೆ.ಸರ್ಕಾರ ಇನ್ನಾದರೂ ತನ್ನ ವೈಫಲ್ಯವನ್ನು ಒಪ್ಪಿಕೊಳ್ಳಬೇಕು. ರಾಜ್ಯದಲ್ಲಿ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಇದ್ದಾರೆ ಎಂದು ಬಿಜೆಪಿ ಕಾರ್ಯಕರ್ತರಿಗೆ ಅನುಮಾನ ವ್ಯಕ್ತವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿದೆ ಎಂದು ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಗೃಹ ಸಚಿವರೇ ತಮ್ಮ ಇಲಾಖೆಗೆ ಮರ್ಯಾದೆ ನೀಡದಿದ್ದಾಗ ಬೇರೆಯವರು ನೀಡಲು ಹೇಗೆ ಸಾಧ್ಯ? ಗೃಹ ಸಚಿವಾಲಯ ಅತ್ಯಂತ ಭ್ರಷ್ಟ ಇಲಾಖೆ ಎಂದು ಅವರೇ ಹೇಳಿದರು. ಪೊಲೀಸರು ಎಂಜಲು ಕಾಸು ತಿಂದು ನಾಯಿತರ ಬಿದ್ದಿರುತ್ತಾರೆ ಎಂದು ಹೇಳಿಕೆ ನೀಡಿದ್ದರು. ಬೆಂಗಳೂರು ಕಮಿಷನರ್ ಸುಳ್ಳು ಹೇಳುತ್ತಾರೆಂದು ಶಾಸಕರು ಟೀಕೆ ಮಾಡಿದಾಗ ಗೃಹಸಚಿವರು ಸುಮ್ಮನೆ ಇದ್ದರು. ಸರ್ಕಾರದ ದುರಾಡಳಿತ ಬಗ್ಗೆ ಟೀಕೆ ಮಾಡಿದರೆ ಕಾಂಗ್ರೆಸ್ ನವರೇ ರೇಪ್ ಮಾಡುತ್ತಿದ್ದಾರೆ ಎಂಬ ಬೇಜವಾಬ್ದಾರಿ ಹೇಳಿಕೆ ನೀಡುತ್ತಾರೆ ಎಂದು ಕಿಡಿಕಾರಿದರು.
ಈಗಲೂ ಕೂಡ ದಕ್ಷಿಣ ಕನ್ನಡದಲ್ಲಿ ಸೆಕ್ಷನ್ 144 ಜಾರಿಯಾಗಿದ್ದು, ಈಗ ಪ್ರವೀಣ್ ಅವರಿಗೆ ನ್ಯಾಯ ಕೊಡಿಸಲು ಯಾಕೆ ಬಿಜೆಪಿ ನಾಯಕರು ಹೋಗುತ್ತಿಲ್ಲ? ಹರ್ಷ ಅವರಿಗೆ ನ್ಯಾಯ ಕೊಡಿಸಲು ಇರುವ ಕಾಳಜಿ ಪ್ರವೀಣ್ ಅವರಿಗೆ ನ್ಯಾಯ ಕೊಡಿಸಲು ಯಾಕೆ ಇಲ್ಲ. ಅಲ್ಲಿ ಒಂದು ನ್ಯಾಯ, ಇಲ್ಲಿ ಒಂದು ನ್ಯಾಯ ಯಾಕೆ? ನಿಮ್ಮ ಅಸ್ತ್ರ ನಿಮಗೆ ತಿರುಗುಬಾಣವಾಗಿದೆ. ಇದೇ ಕಾರಣಕ್ಕೆ ಬಿಜೆಪಿ ತಮ್ಮ ಚಾಳಿ ಮುಂದುವರಿಸಿ, ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಪರಿಸ್ಥಿತಿಯಲ್ಲಿ ಎಲ್ಲರಿಗೂ ರಕ್ಷಣೆ ನೀಡಲು ಹೇಗೆ ಸಾಧ್ಯ? ನಿಮ್ಮ ಗುಪ್ತಚರ ಇಲಾಖೆ ಕತ್ತೆ ಕಾಯುತ್ತಿದೆಯೇ? ನಿಮ್ಮ ಕಾರ್ಯಕರ್ತರ ಬಗ್ಗೆ ನೀವೇ ಹೀಗೆ ಮಾತನಾಡುತ್ತಿರುವುದರಿಂದ ನಿಮ್ಮ ಕಾರ್ಯಕರ್ತರು ಈ ರೀತಿ ರೊಚ್ಚಿಗೆದ್ದಿದ್ದಾರೆ ಎಂದು ಕಿಡಿಕಾರಿದರು.
ಎಸ್‌ಡಿಪಿಐ ಹಾಗೂ ಪಿ ಎಫ್ ಐ ಸಂಘಟನೆಗಳಿಗೆ ಕಾಂಗ್ರೆಸ್ ಕುಮ್ಮಕ್ಕು ಇದೆ ಎಂದು ಬಿಜೆಪಿ ಆರೋಪಿಸುತ್ತದೆ. ಆದರೆ ಆರ್ ಎಸ್ ಎಸ್ ಮೂಲದ ಸತ್ಯಜಿತ್ ಎಂಬುವರು ಸಂದರ್ಶನ ಒಂದರಲ್ಲಿ ಒಂದು ಅಂಶ ಹೇಳಿದ್ದಾರೆ. ಅವರ ಪ್ರಕಾರ, ‘ರಾಜಕೀಯವಾಗಿ ಕಾಂಗ್ರೆಸ್ಸನ್ನು ಸೋಲಿಸಬೇಕಾದರೆ ಎಸ್ ಡಿ ಪಿ ಐ ಬಲವಾಗಬೇಕು. ಹೀಗಾಗಿ ಬಿಜೆಪಿಯವರು ಎಸ್ ಡಿ ಪಿ ಐಗೆ ಆರ್ಥಿಕ ನೆರವು ನೀಡಿ ಬೆಂಬಲ ನೀಡುತ್ತಿದೆ. ಮುಸಲ್ಮಾನರನ್ನು ಕಾಂಗ್ರೆಸ್ ನಿಂದ ಬೇರ್ಪಡಿಸಲು ಎಸ್ ಡಿ ಪಿ ಐ ಅನ್ನು ಬಿಜೆಪಿ ಬೆಳೆಸುತ್ತಿದೆ. ಇಲ್ಲದಿದ್ದರೆ ಇಷ್ಟು ವರ್ಷಗಳ ಕಾಲ ಇಲ್ಲದ ಹಿಜಾಬ್ ವಿಚಾರ ಈಗ ಏಕೆ ಬರುತ್ತಿತ್ತು ಎಂದು ಹೇಳಿದ್ದಾರೆ
ನಿಮ್ಮ ವೈಫಲ್ಯಗಳನ್ನು ನಾವು ಎತ್ತಿ ಹಿಡಿದರೆ, ನನಗೆ ಕಾಂಗ್ರೆಸ್ ಸರ್ಟಿಫಿಕೇಟ್ ಬೇಡ ಎಂದು ಹೇಳುತ್ತೀರಿ. ನಿನ್ನೆ ನಿಮ್ಮ ಕಾರ್ಯಕರ್ತರೇ ನಿಮ್ಮ ಸರ್ಕಾರಕ್ಕೆ ಸರ್ಟಿಫಿಕೇಟ್ ನೀಡಿದ್ದಾರೆ. ನಿಮ್ಮ ಕಾರ್ಯಕರ್ತರು ಕೇವಲ ನಳಿನ್ ಕುಮಾರ್ ಕಟೀಲ್ ಅವರ ಕಾರನ್ನು ಮಾತ್ರ ಅಲ್ಲಾಡಿಸಿಲ್ಲ. ನಿಮ್ಮ ಸರ್ಕಾರವನ್ನು ಅಲ್ಲಾಡಿಸಿದ್ದಾರೆ. ಇದೇ ಕಾರಣಕ್ಕೆ ಮಧ್ಯರಾತ್ರಿ ತುರ್ತು ಪತ್ರಿಕಾಗೋಷ್ಠಿಯನ್ನು ಮಾಡಿ ಜನೋತ್ಸವ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಈ ಭ್ರಷ್ಟೋತ್ಸವ ನಿಲ್ಲಬೇಕಾದರೆ ನೀವು ರಾಜೀನಾಮೆ ನೀಡಬೇಕು. ಗೃಹ ಸಚಿವರು ಇಷ್ಟೆಲ್ಲಾ ಆದ ನಂತರ ರಾಜಕೀಯದಿಂದಲೇ ಸ್ವಯಂ ನಿವೃತ್ತಿ ಪಡೆಯುವುದು ಉತ್ತಮ ಎಂದು ವ್ಯಂಗ್ಯವಾಡಿದ್ದಾರೆ.