ತಮ್ಮ ಸ್ವಾರ್ಥ ಸಾಧನೆಗೆ ಧರ್ಮವನ್ನು ಗುರಾಣಿಯಾಗಿಸುವ ಅಜೆಂಡಾ ಸಾಹಿತ್ಯ ವಲಯಕ್ಕೆ ನುಸುಳಿರುವುದು ಆಘಾತಕಾರಿ: ಡಾ. ಮೂಡ್ನಾಕೂಡು ಚಿನ್ನಸ್ವಾಮಿ

Prasthutha|

ಬೆಂಗಳೂರು: ತಮ್ಮ ಸ್ವಾರ್ಥ ಸಾಧನೆಗೆ ಧರ್ಮವನ್ನು ಗುರಾಣಿಯಾಗಿಸುವ ಅಜೆಂಡಾ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯಕ್ಕೆ ನುಸುಳಿರುವುದು ಆಘಾತಕಾರಿ ಎಂದು ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.

- Advertisement -

ನಗರದ ಕೆ.ಆರ್ ವೃತ್ತದಲ್ಲಿರುವ ಅಲುಮ್ನಿ ಅಸೋಸಿಯೇಷನ್ ಸಭಾಂಗಣದ ಪ್ರಧಾನ ವೇದಿಕೆಯಾದ ಚಂಪಾ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಜನಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

“ಒಂದು ಪಂಥ ತಮ್ಮ ಸ್ವಾರ್ಥ ಸಾಧನೆಗೆ ಧರ್ಮವನ್ನು ಗುರಾಣಿಯಾಗಿಸಿಕೊಂಡು ಮುಗ್ಧ ಬಹುಜನರನ್ನು ಮರುಳುಮಾಡಿ ‘ನಾವು ಮತ್ತು ಅವರು’ ಎಂಬ ಸ್ಪಷ್ಟ ಗೆರೆ ಎಳೆದುಬಿಟ್ಟಿದೆ. ಆ ಪಂಥ ತನ್ನ ಕಬಂಧ ಬಾಹುಗಳನ್ನು ಎಲ್ಲೆಡೆ ಚಾಚಿದೆ. ರಾಜಕೀಯವಾಗಿ ಅವರು  ಮುಸಲ್ಮಾನರ ಪ್ರತ್ಯೇಕೀಕರಣವನ್ನು ಮಾಡುತ್ತಾ ಬಂದಿದ್ದಾರೆ. ಅದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಅಂತಹ ಒಂದು ಅಜೆಂಡಾ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯಕ್ಕೆ ನುಸುಳಿರುವುದು ಆಘಾತಕಾರಿಯಾಗಿದೆ” ಎಂದರು.

- Advertisement -

ಕನ್ನಡ ಸಾಹಿತ್ಯ ಪರಿಷತ್ತು ಎಲ್ಲಾ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ, ಎಲ್ಲರ ಆಶೋತ್ತರಗಳಿಗೂ ಪೂರ್ವಗ್ರಹಗಳಿಂದ ಮುಕ್ತವಾಗಿ, ಸಮಾನವಾಗಿ ಸ್ಪಂದಿಸಬೇಕಾದ ಸಂಸ್ಥೆ. ದುರದೃಷ್ಟವಶಾತ್ ಪ್ರಸ್ತುತ ಅವಧಿಯ ಅಧ್ಯಕ್ಷರ ಮೊದಲ ಸಮ್ಮೇಳನದಲ್ಲಿಯೆ ಅತೃಪ್ತಿ ಕಾಣಿಸಿಕೊಂಡಿದೆ. ಸಾಹಿತ್ಯವೆಂದರೆ ಜನ- ಜನರ ಬದುಕಿನ ಪ್ರತಿಫಲನ, ಜನರ ಬದುಕಿಗೆ ಸಂಬಂಧಿಸಿದ ಕುಟುಂಬ, ಸಮಾಜ, ದೇಶ, ಭಾಷೆ, ನೆಲ, ಜಲ, ಇತಿಹಾಸ, ಧರ್ಮ, ಪರಂಪರೆ ಇವೆಲ್ಲವೂ ರೂಪುಗೊಳ್ಳುವುದು ಸಾಹಿತ್ಯದ ಮುಖಾಂತರ, ಮಸ್ತಕಗಳೆಂದರೆ ಆಯಾ ಕಾಲಘಟ್ಟದಲ್ಲಿ ಪ್ರಾಜ್ಞರಿಂದ ನಿರ್ಮಿಸಲ್ಪಟ್ಟ ಅಕ್ಷರ ಸೌಧಗಳು, ಸಾರ್ವಜನಿಕ ಮನ್ನಣೆಯೇ ಅವುಗಳಿಗೆ ಅಧಿಕೃತ ಮುದ್ರೆ ಎಂದು ಚಿನ್ನಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಸಾಹಿತ್ಯ ಪರಿಷತ್ತು ಹಳಿ ತಪ್ಪಿದಾಗಲೆಲ್ಲಾ ಜನರೇ ಎಚ್ಚರಿಸುತ್ತಾ ಬಂದ ಪರಿಪಾಠವಿದೆ. ನನ್ನ ಅನುಭವಕ್ಕೆ ಬಂದ ಹಾಗೆ 1992 ರಲ್ಲಿ ಜಾಗೃತ ಸಮ್ಮೇಳನ ನಡೆದದ್ದು ಹೀಗೆ. ಅಂದು ಸಮ್ಮೇಳನಾಧ್ಯಕ್ಷರ ಆಯ್ಕೆಯನ್ನು ಪ್ರಶ್ನಿಸಲಾಗಿತ್ತು. ಅಂದಿನ ತಲೆಮಾರಿನ ದಿಗ್ಗಜರೆನಿಸಿದ ಲಂಕೇಶ್, ಅನಂತಮೂರ್ತಿ, ಕಿ.ರಂ. ನಾಗರಾಜ, ಡಿ. ಆರ್. ನಾಗರಾಜ್, ಗೋವಿಂದರಾವ್‌, ಸಿದ್ದಲಿಂಗಯ್ಯ ಮತ್ತು ಇಲ್ಲಿರುವ ನನ್ನ ತಲೆಮಾರಿನ ಅನೇಕರು ಸೇರಿ ನಡೆಸಿದ ಸಮ್ಮೇಳನ ಆದಾಗಿತ್ತು. ಇಂದು ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನದ ಆಹ್ವಾನ ಪತ್ರಿಕೆಯಲ್ಲಿ ಗಂಭೀರವಾದ ಲೋಪವೊಂದು ಎಲ್ಲರ ಕಣ್ಣಿಗೆ ರಾಚುವಂತಿದೆ. ಒಂದು ಪಂಥ ತಮ್ಮ ಸ್ವಾರ್ಥ ಸಾಧನೆಗೆ ಧರ್ಮವನ್ನು ಗುರಾಣಿಯಾಗಿಸಿಕೊಂಡು ಮುಗ್ಧ ಬಹುಜನರನ್ನು ಮರುಳುಮಾಡಿ ‘ನಾವು ಮತ್ತು ಅವರು’ ಎಂಬ ಸ್ಪಷ್ಟ ಗೆರೆ ಎಳೆದುಬಿಟ್ಟಿದೆ. ಆದ್ದರಿಂದ ಈ ಪ್ರತಿರೋಧ ನ್ಯಾಯಸಮ್ಮತವಾದದ್ದು ಎಂದು ನಾನು ತಿಳಿದುಕೊಂಡಿದ್ದೇನೆ ಎಂದು ಅವರು ಹೇಳಿದರು.

ಜನಸಾಹಿತ್ಯ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಪ್ರೊ.ಎಸ್.ಜಾಫೆಟ್, ಪ್ರಕಾಶ್ ರಾಜ್, ಜಾಣಗೆರೆ ವೆಂಕಟರಾಮಯ್ಯ, ಚೆನ್ನಿ ಜನಾರ್ದನ್, ಅಗ್ನಿಶ್ರೀಧರ್, ಅಕ್ಕೈ ಪದ್ಮಶಾಲಿ, ವಡ್ಡಗೆರೆ ನಾಗರಾಜಯ್ಯ ಭಾಗವಹಿಸಿದ್ದರು.

Join Whatsapp