ಬೆಂಗಳೂರು: ಅಕ್ರಮ ಗಣಿಕಾರಿಕೆಯಲ್ಲಿ ಬಂಧನವಾಗಿ, ರಾಜಕೀಯವಾಗಿ 12 ವರ್ಷಗಳ ಕಾಲ ತೆರೆಮರೆಗೆ ಸರಿದಿದ್ದ ಗಾಲಿ ಜನಾರ್ದನ ರೆಡ್ಡಿ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವುದಾಗಿ ಸುಳಿವು ನೀಡಿದ್ದಾರೆ.
ಒಂದೆಡೆ ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ನವಂಬರ್ 6ರಿಂದ ಬಳ್ಳಾರಿ ಜಿಲ್ಲೆಯಿಂದ ಹೊರಗಿರಬೇಕಾಗಿರುವ ರೆಡ್ಡಿ, ಮತ್ತೆ ರಾಜಕೀಯ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ. ಕೊಪ್ಪಳದ ಗಂಗಾವತಿ ಕ್ಷೇತ್ರದಿಂದ ಸ್ಪರ್ಧಿಸುವ ಮುನ್ಸೂಚನೆ ನೀಡಿದ್ದು, ಇದರ ಜೊತೆ ರಾಯಚೂರು ಜಿಲ್ಲೆಯ ಕ್ಷೇತ್ರದ ಮೇಲೂ ಕಣ್ಣಿಟ್ಟಿದ್ದಾರೆ.
ಮೊನ್ನೆಯಷ್ಟೇ ಸುಪ್ರೀಂ ಕೋರ್ಟ್ ಅನುಮತಿ ಪಡೆದು ಬಳ್ಳಾರಿ ಜಿಲ್ಲೆಗೆ ಬಂದ ಜನಾರ್ಧನ ರೆಡ್ಡಿ ಅವರಿಗೆ ಅಭಿಮಾನಿಗಳು ತುಲಾಭಾರ ಮಾಡಿದ್ದರು. ಈ ವೇಳೆ ಮಾತನಾಡಿದ್ದ ರೆಡ್ಡಿ, ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಸುಳಿವು ನೀಡಿದ್ದರು. ಈ ಮೂಲಕ ರೆಡ್ಡಿ ಮತ್ತೆ ರಾಜ್ಯ ರಾಜಕಾರಣಕ್ಕೆ ಪ್ರವೇಶ ಮಾಡಲು ಸಿದ್ದರಾಗುತ್ತಿರುವುದು ಪಕ್ಕಾ ಆಗಿದೆ.
ಕಳೆದ ಹನ್ನೆರಡು ವರ್ಷಗಳಿಂದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಲುಕಿಕೊಂಡು ರೆಡ್ಡಿ ಜೈಲು ಪಾಲಾಗಿದ್ದರು. ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನಲ್ಲಿ ತಮ್ಮ ಕೇಸ್ ಗಳ ಪ್ರಕರಣಗಳನ್ನ ಇತ್ಯರ್ಥ ಮಾಡಲು ಅರ್ಜಿ ಸಲ್ಲಿಕೆ ಮಾಡಿ, ಆದಷ್ಟು ಬೇಗೆ ಪ್ರಕರಣ ಇತ್ಯರ್ಥ ಮಾಡುವಂತೆ ಮನವಿ ಮಾಡಿದ್ದಾರೆ. ಕಾರಣ ಚುನಾವಣೆ ಘೋಷಣೆ ಆಗುವ ಹೊತ್ತಿಗೆ ಅಕ್ರಮ ಗಣಿಗಾರಿಕೆ ಕೇಸ್ ನಿಂದ ಮುಕ್ತಿ ಪಡೆದು ಕ್ಲೀನ್ ಆಗಿ ತಮ್ಮ ರಾಜಕೀಯದ ಎರಡನೇ ಇನ್ನಿಂಗ್ಸ್ ಆರಂಭ ಮಾಡುವ ತವಕದಲ್ಲಿದ್ದಾರೆ.
ಜನಾರ್ದನ ರೆಡ್ಡಿ ಪ್ರಕರಣಗಳಲ್ಲಿ ಈಗಾಗಲೇ ಕೋರ್ಟ್ ಸಾಕಷ್ಟು ಷರತ್ತು ಸಡಿಲಿಕೆ ಮಾಡಿದೆ. ಈ ಮಧ್ಯೆ ರೆಡ್ಡಿ ತಮ್ಮ ವಿರುದ್ದದ ಪ್ರಕರಣಗಳನ್ನ ಬೇಗ ಮುಕ್ತಾಯ ಮಾಡುವಂತೆ ಮನವಿ ಮಾಡಿ ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ರೆಡ್ಡಿ ಬಿಜೆಪಿಯಿಂದ ಸ್ಪರ್ಧಿಸುವುದಂತೂ ಖಚಿತವಾಗಿದೆ.