ಜಮಖಂಡಿ ಯುನಿಟಿ ಮಾರ್ಚ್ ಗೆ ತಡೆ: ಪೊಲೀಸರ ಪಕ್ಷಪಾತಿ ಧೋರಣೆಯ ವಿರುದ್ಧ ಕಾನೂನು ಕ್ರಮ | ಪಾಪ್ಯುಲರ್ ಫ್ರಂಟ್

Prasthutha|

- Advertisement -

ಬೆಂಗಳೂರು : ಫೆಬ್ರವರಿ 17ರಂದು ಪಾಪ್ಯುಲರ್ ಫ್ರಂಟ್ ಡೇ ಪ್ರಯುಕ್ತ ಬಾಗಲಕೋಟೆಯ ಜಮಖಂಡಿಯಲ್ಲಿ ನಡೆಸಲು ಉದ್ದೇಶಿಸಿದ್ದ ಯುನಿಟಿ ಮಾರ್ಚ್ ಮತ್ತು ಸಾರ್ವಜನಿಕ ಸಭೆಗೆ ಅನುಮತಿ ನಿರಾಕರಿಸಿದ ಪೊಲೀಸರ ಪಕ್ಷಪಾತಿ ಧೋರಣೆ ಮತ್ತು ಪ್ರಜೆಗಳಿಗೆ ಸಾಂವಿಧಾನಿಕ ಹಕ್ಕನ್ನು ನಿರಾಕರಿಸುವ  ಕ್ರಮದ ವಿರುದ್ಧ ಪಾಪ್ಯುಲರ್ ಫ್ರಂಟ್ ಕಾನೂನು ಹೋರಾಟ ನಡೆಸಲಿದೆ” ಎಂದು ಪಾಪ್ಯುಲರ್ ಫ್ರಂಟ್ ಬಾಗಲಕೋಟೆ ಜಿಲ್ಲಾಧ್ಯಕ್ಷ ಅಸ್ಗರ್ ಅಲಿ ಶೇಖ್ ಹೇಳಿದ್ದಾರೆ.  

“ಪಾಪ್ಯುಲರ್ ಫ್ರಂಟ್ ನ ಸ್ಥಳೀಯ ನಾಯಕರುಗಳು ಫೆ.2ರಿಂದ ಆರಂಭಗೊಂಡು ಹದಿನೈದು ದಿನಗಳಿಂದ  ಕಾರ್ಯಕ್ರಮಕ್ಕೆ ಅನುಮತಿ‌ ನೀಡುವಂತೆ ಸ್ಥಳೀಯ ಠಾಣೆಯ  ಪೊಲೀಸ್ ಸಬ್  ಇನ್ ಸ್ಪೆಕ್ಟರ್ ಗೋವಿಂದ ಗೌಡ ಪಾಟೀಲರನ್ನು ಭೇಟಿಯಾಗಿ ಕೋರಿಕೊಂಡಿದ್ದರು. ಆದರೆ ಬಿಜೆಪಿ ಸರಕಾರದ ಒತ್ತಡಕ್ಕೆ ಮಣಿದಂತೆ ವರ್ತಿಸಿದ ಅವರು ಕೊನೆಯವರೆಗೂ ಅನುಮತಿ ನೀಡಿರಲಿಲ್ಲ. ಸಂಘಟನೆಯ ನಾಯಕರು ಮೇಲಾಧಿಕಾರಿಗಳನ್ನು ಸಂಪರ್ಕಿಸಿ  ಅನುಮತಿ ನೀಡುವಂತೆ ಮನವಿ ಮಾಡಿದ್ದರು. ಕಾರ್ಯಕ್ರಮದ ಸ್ಥಳ ಬದಲಾವಣೆ ಮಾಡಬೇಕು ಸೇರಿದಂತೆ  ಹಲವು ನಿಬಂಧನೆಗಳನ್ನು ನೀಡುತ್ತಾ ಅನುಮತಿಗೆ ಸತಾಯಿಸಿದ್ದಾರೆ ಎಂದು ಅಸ್ಗರ್ ಅಲಿ ಹೇಳಿದ್ದಾರೆ.

- Advertisement -

ಅಂತಿಮವಾಗಿ ಫೆ.16 ರಂದು ಫೊಲೀಸ್ ಅಧಿಕಾರಿಗಳು ಮರುದಿನ ಸಂಜೆ ಕಾರ್ಯಕ್ರಮ ನಡೆಸುವಂತೆ ಸೂಚನೆ ನೀಡಿದ್ದರು. ಆದರೆ ಕೊನೆಕ್ಷಣದಲ್ಲಿ ತಮ್ಮ ನಿಲುವು ಬದಲಾಯಿಸಿದ ಪೊಲೀಸರು ಅದೇ ದಿನ ಸಂಜೆ ಸಂಘಟನೆಯ ಜಿಲ್ಲಾ ನಾಯಕರನ್ನು ದಸ್ತಗಿರಿ ಮಾಡಿ ಕಿರುಕುಳ ನೀಡಿದ್ದು ಕಾರ್ಯಕ್ರಮ ನಡೆಸದಂತೆ ಬೆದರಿಕೆಯನ್ನೊಡ್ಡಿದ್ದಾರೆ. ಅಲ್ಲದೆ ಮಹಾಲಿಂಗ್ಪುರ್, ರಾಂಪುರ್, ಮುದ್ಧೋಳು ಮುಂತಾದ ಕಡೆಗಳಲ್ಲಿ  ಪೊಲೀಸರು ಸ್ಥಳೀಯ ಮುಸ್ಲಿಮ್ ನಾಯಕರನ್ನು ಕರೆದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಂತೆ ಬೆದರಿಕೆಯೊಡ್ಡಿದ್ದಾರೆ. ಈ ಎಲ್ಲಾ ಘಟನಾವಳಿಗಳು ಪೊಲೀಸರು ಸಂವಿಧಾನ ಮತ್ತು ಕಾನೂನಿಗೆ ಅಧೀನರಾಗಿ ಕೆಲಸ ಮಾಡುವ ಬದಲು ಕಾರ್ಯಕ್ರಮವನ್ನು ತಡೆಯುವುದಕ್ಕಾಗಿ ಬಿಜೆಪಿ ಸರಕಾರದ ಕೈಗೊಂಬೆಯಾಗಿ ವರ್ತಿಸಿರುವುದನ್ನು ಸ್ಪಷ್ಟ ಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.

ಬ್ಯಾನರ್,  ಧ್ವಜ ಅಳವಡಿಸಲು ನಗರಸಭೆಯ ಅನುಮತಿ ಪಡೆಯಲಾಗಿದ್ದರೂ ಪೊಲೀಸರು ಬಲವಂತವಾಗಿ ಅದನ್ನು ರದ್ದುಗೊಳಿಸಿ ಸಂಘಟನೆಯ ನಾಯಕರಿಗೆ ಕಿರುಕುಳ ನೀಡಿರುವುದು ಅಕ್ರಮವಾಗಿದೆ. ಪಾಪ್ಯುಲರ್ ಫ್ರಂಟ್ ಡೇ ಸಂಘಟನೆಯ ಸಂಸ್ಥಾಪನಾ ದಿನದ ಕಾರ್ಯಕ್ರಮವಾಗಿದ್ದು ಆಕರ್ಷಕ ಪಥಸಂಚಲನದೊಂದಿಗೆ ಈ ವರ್ಷವೂ ರಾಜ್ಯದ ಎರಡು ಕಡೆಗಳಲ್ಲಿ ನಡೆಸಲು ತೀರ್ಮಾನಿಸಲಾಗಿತ್ತು. . ಆದರೆ ಈ ಕಾರ್ಯಕ್ರಮವನ್ನು ಸರಕಾರವು ತಡೆಹಿಡಿದಿದೆ. ಸಮಾಜದ ಶಾಂತಿ ಸುವ್ಯವಸ್ಥೆ ಕಾಪಾಡಬೇಕಾಗಿದ್ದ ಜಮಖಂಡಿ ನಗರ ಪೊಲೀಸರು ಜನರಲ್ಲಿ ಭೀತಿ ಹುಟ್ಟಿಸಿ ಪಾಪ್ಯುಲರ್ ಫ್ರಂಟಿನ ಹೋರಾಟವನ್ನು ದಮನಿಸುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಹಕ್ಕುಗಳಿಗಾಗಿ ಸಾಂವಿಧಾನಿಕ ಹೋರಾಟ ನಡೆಸುತ್ತಲೇ ಬಂದಿರುವ ಪಾಪ್ಯುಲರ್ ಫ್ರಂಟ್ ಪೊಲೀಸರ ಅಸಂವಿಧಾನಿಕ ನಡೆಯ ವಿರುದ್ಧ ಕಾನೂನು ಹೋರಾಟ ನಡೆಸಲಿದೆ ಎಂದು ಅಸ್ಗರ್ ಅಲಿ ಶೇಖ್ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಪಾಪ್ಯುಲರ್ ಫ್ರಂಟ್ ರಾಜ್ಯ ಕೋಶಾಧಿಕಾರಿ ಶಾಹಿದ್ ಗುಲ್ಬರ್ಗಾ, ಜಿಲ್ಲಾ ಮುಖಂಡರಾದ ಇಮ್ತಿಯಾಝ್ ಜಮಾದಾರ್, ಮೆಹಬೂಬ್ ಗೋಗಿ, ಸಲೀಂ ಆವಟಿ ಉಪಸ್ಥಿತರಿದ್ದರು.



Join Whatsapp