ಮಂಗಳೂರು: ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಜಲೀಲ್ ಹತ್ಯೆ ಪ್ರಕರಣದ ಆರೋಪಿ ಕೇಶವ ಎಂಬವರ ಕೊಲೆಯತ್ನ ಪ್ರಕರಣದ ಎಲ್ಲಾ ಆರೋಪಿಗಳನ್ನು ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪ ಮುಕ್ತಗೊಳಿಸಿ ತೀರ್ಪು ನೀಡಿದೆ.
ಕರೋಪಾಡಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಅಬ್ದುಲ್ ಜಲೀಲ್ ಎಂಬವರ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದಂತಹ ಕೇಶವ ಎಂಬವರ ಮೇಲೆ 2017, ಡಿಸೆಂಬರ್ 26ರಂದು ಕಲ್ಲಡ್ಕ ಪೇಟೆಯಲ್ಲಿ ಮಾರಣಾಂತಿಕ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಉಮ್ಮರ್ ಫಾರೂಕ್, ನಿಜಾಮ್, ಶರೀಫ್, ಇಕ್ಬಾಲ್, ಇರ್ಫಾನ್ ಎಂಬವರ ಮೇಲೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದರಲ್ಲಿ ಒಂದನೇ ಆರೋಪಿಯಾಗಿದ್ದಂತಹ ಉಮ್ಮರ್ ಫಾರೂಕ್ ಎಂಬುವವರು ನ್ಯಾಯಾಲಯದ ವಿಚಾರಣೆ ವೇಳೆ ಮೃತಪಟ್ಟಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ದಕ್ಷಿಣ ಕನ್ನಡ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಲ್ಲಾ ಆರೋಪಿತರನ್ನು ಖುಲಾಸೆಗೊಳಿಸಿ ಶುಕ್ರವಾರ ತೀರ್ಪು ಪ್ರಕಟಿಸಿದೆ. ಈ ಪ್ರಕರಣದಲ್ಲಿ. ಆರೋಪಿತರ ಪರವಾಗಿ ನ್ಯಾಯಾಲಯದಲ್ಲಿ ವಕೀಲರಾದ ಉಮರ್ ಫಾರೂಕ್ ಮುಲ್ಕಿ, ಹೈದರ್ ಅಲಿ ಕಿನ್ನಿಗೋಳಿ, ಮುಫೀದಾ ರೆಹ್ಮಾನ್ ಮುಡಿಪು ಅವರು ವಾದಿಸಿದ್ದಾರೆ.