ಜಲಜೀವನ ಮಿಷನ್ ಯೋಜನೆಯಲ್ಲಿ ಗುರಿ ಮೀರಿದ ಸಾಧನೆ: ಮುಖ್ಯಮಂತ್ರಿ ಬೊಮ್ಮಾಯಿ

Prasthutha|

ಬೆಂಗಳೂರು: ಜಲಜೀವನ ಮಿಷನ್ ಯೋಜನೆಯಡಿ  ಮನೆ ಮನೆಗೆ ನಲ್ಲಿ ಸಂಪರ್ಕಿಸುವ ಯೋಜನೆಯಡಿ ನಿಗದಿತ ಗುರಿಗಿಂತಲೂ ಹೆಚ್ಚಿನ ಸಾಧನೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

- Advertisement -

ಆಗಸ್ಟ್ 8ರ ವರೆಗೆ ರಾಜ್ಯದಲ್ಲಿ ಒಟ್ಟು 21,63,817 ಮನೆಗಳಿಗೆ ನಳ ಸಂಪರ್ಕದ ಗುರಿ ನಿಗದಿಯಾಗಿತ್ತು. ಆದರೆ 21,81,557 ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲಾಗಿದೆ. ಇದು ನಿಗದಿತ ಗುರಿಗಿಂತಲೂ ಹೆಚ್ವಿನ ಸಾಧನೆಯಾಗಿದೆ. ಅದರ ಜತೆ ಬ್ಯಾಚ್ 1 ಕಾಮಗಾರಿಗಳನ್ನು ಸೆಪ್ಟೆಂಬರ್ 15 ರೊಳಗೆ ಪೂರ್ಣಗೊಳಿಸಬೇಕು ಹಾಗೂ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ವಾರದಲ್ಲಿ 3 ದಿನ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಬೇಕೆಂದು  ಮುಖ್ಯಮಂತ್ರಿಗಳು  ಸೂಚನೆ ನೀಡಿದರು.

ಅವರು ಇಂದು ಬೆಂಗಳೂರಿನ ಆರ್ ಟಿ ನಗರ ನಿವಾಸದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಅವರು ಈ ಸೂಚನೆ ನೀಡಿದರು.

- Advertisement -

ಜಲಜೀವನ ಮಿಷನ್ ಪ್ರಧಾನ ಮಂತ್ರಿಗಳ ಮಹತ್ವಾಕಾಂಕ್ಷೆಯ ಯೋಜನೆ. ಜನರಿಗೆ ಕುಡಿಯುವ ನೀರನ್ನು ಒದಗಿಸಲು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕು. ಇದು  ನಮ್ಮ ಸರ್ಕಾರದ ಆದ್ಯತೆಯಾಗಿದೆ. ಹೀಗಾಗಿ ಇದು ಕೇವಲ ಪೈಪ್ ಲೈನ್ ಅಳವಡಿಸುವ ಯೋಜನೆಯಾಗದೇ ಮನೆಮನೆಗೂ ನೀರು ಸರಬರಾಜು ಮಾಡುವ ಯೋಜನೆಯಾಗಬೇಕು. ಜನರು ಕುಡಿಯುವ ನೀರಿನ ಸಮಸ್ಯೆಯ ಜೊತೆಗೆ ಬದುಕುತ್ತಿದ್ದಾರೆ. ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಸಮಸ್ಯೆಯ ಬಗ್ಗೆ ಚರ್ಚಿಸದೇ, ಸ್ಥಳಕ್ಕೆ ತೆರಳಿ ಸಮಸ್ಯೆಯ ಬಗ್ಗೆ ತಿಳಿಯಬೇಕು. ಮುಖ್ಯ ಇಂಜಿನಿಯರ್ ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್ ಗಳು ವಾರದಲ್ಲಿ ಕನಿಷ್ಟ 3 ದಿನ  ಸ್ಥಳಕ್ಕೆ ತೆರಳಿ ಕಾಮಗಾರಿಗಳ ಪರಿಶೀಲನೆ ಮಾಡಬೇಕು ಎಂದು ಸೂಚಿಸಿದರು.

ಇಲಾಖೆಯ ಮುಖ್ಯಸ್ಥರು ಈ ಯೋಜನೆಯಡಿ ಜಿಲ್ಲೆಗಳಲ್ಲಿ ಆಗುತ್ತಿರುವ ಪ್ರಗತಿ ಬಗ್ಗೆ ಆಗ್ಗಿಂದಾಗ ಪರಿಶೀಲನೆ ನಡೆಸಬೇಕು. ವಿಳಂಬಕ್ಕೆ ವಿವರಣೆ ಪಡೆದು, ಯೋಜನೆ ನಿಗದಿತ ಅವಧಿಯಲ್ಲಿ ಮುಗಿಸಲು ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಹಲವು ಜಿಲ್ಲೆಗಳಲ್ಲಿ ಓವರ್ ಹೆಡ್ ಟ್ಯಾಂಕ್ ಗಳನ್ನು ಕೂಡಲೇ ಸ್ಥಾಪನೆ ಮಾಡಿ. ಈ ಬಗ್ಗೆ ಎಲ್ಲ ಜಿಲ್ಲೆಗಳ ಪ್ರಗತಿ ಪರಿಶೀಲಿಸಲು ಇಂಜಿನೀಯರ್ ಒಬ್ಬರನ್ನು ನಿಯೋಜಿಸಬೇಕು. ಗುತ್ತಿಗೆದಾರರ ಅದಕ್ಷತೆಯನ್ನು ಕಾರಣವಾಗಿಸದೇ, ಜಿಲ್ಲೆಯ ಅಧಿಕಾರಿಗಳು ಕಾಲಕಾಲಕ್ಕೆ ಕಾಮಗಾರಿಯ ಪ್ರಗತಿಪರಿಶೀಲನೆ ನಡೆಸಿ ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು. ಕೆಲವು ಜಿಲ್ಲೆಗಳಲ್ಲಿ ಜಲಜೀವನ್ ಮಿಷನ್ ಅಡಿ ನಿಧಾನಗತಿಯ ಪ್ರಗತಿಯನ್ನು ಗಮನಿಸಲಾಗಿದೆ.   ಈ ಯೋಜನೆಯ  ಪ್ರಗತಿಯ ವಿವರಗಳನ್ನು ಸಿಎಂ ಡ್ಯಾಶ್ ಬೋರ್ಡ್ ನಲ್ಲಿ ಹಾಕಬೇಕು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. 

ಅಭಿವೃದ್ಧಿ ಆಕಾಂಕ್ಷಿ ಜಿಲ್ಲೆಗಳಾದ ರಾಯಚೂರು, ಯಾದಗಿರಿಯಲ್ಲಿ ಜಲಜೀವನ್ ಮಿಷನ್ ಯೋಜನೆ ಗುರಿ ಸಾಧಿಸಿಲ್ಲವಾದ್ದರಿಂದ,  ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳು ಈ ಜಿಲ್ಲೆಗೆ ಖುದ್ದು ಭೇಟಿ ನೀಡಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಬೇಕು. ಜಲಜೀವನ ಮಿಷನ್ ಬ್ಯಾಚ್ 2 ಅಡಿ ಕಾಮಗಾರಿಗಳ ಪ್ರಗತಿ ಪರಿಶೀಲನೆಗಾಗಿ ಮುಖ್ಯ ಇಂಜಿನಿಯರ್ ಹಾಗೂ ಕಾರ್ಯನಿರ್ವಾಹಕ ಇಂಜಿನಿಯರ್ ಗಳ ಸಭೆ  ಕರೆಯಬೇಕು ಎಂದು ಸೂಚಿಸಿದರು.

ಒಟ್ಟಾರೆ ಬ್ಯಾಚ್ 2 ಕಾಮಗಾರಿಗಳ ಪೂರಕ ಕೆಲಸಗಳನ್ನು ಮುಗಿಸಿ, ಕಾಮಗಾರಿಗಳನ್ನು ಈ ತಿಂಗಳ ಅಂತ್ಯದೊಳಗೆ ಪ್ರಾರಂಭಿಸಬೇಕು. ಜಲಜೀವನ ಮಿಷನ್ ಬ್ಯಾಚ್ 3 ಅಡಿ ಕಾಮಗಾರಿಗಳ ಪ್ರಗತಿ ಶೇ.75ಕ್ಕಿಂತ ಕಡಿಮೆ ಇರುವ ಜಿಲ್ಲೆಗಳ ಅಧಿಕಾರಿಗಳು ವೈಯಕ್ತಿಕ ಗಮನ ಹರಿಸಬೇಕು.



Join Whatsapp