ಜೈಶ್ರೀರಾಂ ಹೇಳಿಸಿ ಮುಸ್ಲಿಂ ವೃದ್ಧರಿಗೆ ಹಿಂಸೆ: ಜನಾರ್ದನ ರೆಡ್ಡಿ ತೀವ್ರ ಖಂಡನೆ

Prasthutha|

ಗಂಗಾವತಿ: ಜೈಶ್ರೀರಾಂ ಹೇಳಿಸಿ ಮುಸ್ಲಿಂ ವೃದ್ಧರೋರ್ವರಿಗೆ ಹಿಂಸೆ ನೀಡಿದ ಘಟನೆಯನ್ನು ಶಾಸಕ ಗಾಲಿ ಜನಾರ್ದನರೆಡ್ಡಿ ತೀವ್ರವಾಗಿ ಖಂಡಿಸಿದ್ದಾರೆ. ನ.25ರಂದು ಮಧ್ಯ ರಾತ್ರಿ ಮುಸ್ಲಿಂ ಅಂಧ ವೃದ್ಧರೋರ್ವರನ್ನು ಬೈಕ್‌ಗೆ ಬಲವಂತವಾಗಿ ಹತ್ತಿಸಿ ಸಿದ್ದಿಕೇರಿಗೆ ಕರೆದೊಯ್ದು ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಹೇಳಿ ಹಲ್ಲೆ ನಡೆಸಿ ಬಳಿ ಇದ್ದ ಹಣ ದೋಚಿ ಗಡ್ಡಕ್ಕೆ ಬೆಂಕಿ ಹಚ್ಚಿದ ಅಮಾನವೀಯ ಘಟನೆ ನಡೆದಿತ್ತು.

- Advertisement -

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಎಲ್ಲಾ ಕೋಮಿನ ಜನರು ಪರಸ್ಪರ ಪ್ರೀತಿ ,ಪ್ರೇಮ ಗೌರವದಿಂದ ಶತಮಾನಗಳಿಂದ ಬಾಳಿಬದುಕುತ್ತಿರುವ ನಮ್ಮ ದೇಶದಲ್ಲಿ ಕೆಲವು ಕೋಮುಶಕ್ತಿಗಳಿಂದ ಇಂತಹ ಘಟನೆಗಳು ನಡೆಯುತ್ತಿರುವುದು ಖಂಡನೀಯ. ಕೂಡಲೇ ದುಷ್ಕರ್ಮಿಗಳನ್ನು ಬಂಧಿಸುವಂತೆ ಪೊಲಿಸ್ ಇಲಾಖೆಗೆ ಸೂಚನೆ ನೀಡಿದ್ದೇನೆ. ಪ್ರಕರಣಕ್ಕೆ ಸಂಬಂಧಿಸಿದ ಮೇಲಾಧಿಕಾರಿಗಳ ಜತೆ ಮಾತನಾಡಿದ್ದು ಕೃತ್ಯವೆಸಗಿದವರು ಎಂತಹ ಪ್ರಭಾವಿಗಳಾಗಿದ್ದರೂ ಕಠಿಣ ಶಿಕ್ಷೆ ಕೊಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಕಿಡಿಗೇಡಿಗಳು ಮಾಡಿರುವ ಕೃತ್ಯವನ್ನು ಪೊಲೀಸ ಇಲಾಖೆ ಗಂಭೀರವಾಗಿ ಪರಿಗಣಿಸಿ ಅವರನ್ನು ಪತ್ತೆ ಹಚ್ಚಿ ಬಂಧಿಸಲಿದೆ. ತಾನು ಕಾರ್ಯದ ನಿಮಿತ್ತ ಬೆಂಗಳೂರಿನಲ್ಲಿದ್ದು ಗಂಗಾವತಿ ತೆರಳಿದ ತಕ್ಷಣ ಹುಸೇನಸಾಬ ಇವರ ನಿವಾಸಕ್ಕೆ ತೆರಳಿ ಧೈರ್ಯ ತುಂಬುತ್ತೇನೆ. ಗಂಗಾವತಿ ಕ್ಷೇತ್ರದಲ್ಲಿ ಕೋಮು ಸೌಹಾರ್ದ ಕಾಪಾಡಿಕೊಂಡು ಅಭಿವೃದ್ಧಿ ಪರ್ವ ಆರಂಭಿಸಲಾಗುತ್ತದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ತಿಳಿಸಿದ್ದಾರೆ



Join Whatsapp