ಜೈನ ಸಮುದಾಯ ಫ್ಲಿಪ್ ಕಾರ್ಟ್, ಅಮೆಜಾನ್ ಮಾದರಿಯಲ್ಲಿ ಜಾಗತಿಕ ಇ – ವಾಣಿಜ್ಯ ಸಂಸ್ಥೆ ಸ್ಥಾಪಿಸಬೇಕು: ಮುಖ್ಯಮಂತ್ರಿ ಬೊಮ್ಮಾಯಿ

Prasthutha|

ಬೆಂಗಳೂರು: ಜಾಗತಿಕ ವ್ಯಾಪಾರ ವಲಯದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ಜೈನ ಸಮುದಾಯ ಫ್ಲಿಪ್ ಕಾರ್ಟ್, ಅಮೆಜಾನ್ ಮಾದರಿಯಲ್ಲಿ ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸರ್ ವೇದಿಕೆಯಡಿ ಜಾಗತಿಕ ಈ ವಾಣಿಜ್ಯ – ವ್ಯಾಪಾರ ಸಂಸ್ಥೆ ಸ್ಥಾಪಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.

- Advertisement -

ಬೆಂಗಳೂರು ಅರಮನೆ ಮೈದಾನದ ಚಾಮರ ವಜ್ರ ಆವರಣದಲ್ಲಿ ಜೈನ್ ಇಂಟರ್ ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್ ನಿಂದ ಎರಡು ದಿನಗಳ ಜೈನರ ಜಾಗತಿಕ ಶೃಂಗ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಜೈನ ಸಮುದಾಯ ವ್ಯಾಪಾರ ವಹಿವಾಟಿನಲ್ಲಿ ವಿಶೇಷ ಪರಿಣಿತಿ ಸಾಧಿಸಿದೆ. ಜಗತ್ತಿನಾದ್ಯಂತ ಅತ್ಯುತ್ತಮ ಸಂಪರ್ಕ ಜಾಲ ಹೊಂದಿದ್ದು, ಇ – ವಾಣಿಜ್ಯ ಮಾರುಕಟ್ಟೆ ಸಂಸ್ಥೆ ಸ್ಥಾಪಿಸಿದರೆ ಅದ್ಭುತ ಯಶಸ್ಸು ಸಾಧಿಸಬಹುದು. ಇದರಿಂದ ಬರುವ ಲಾಭವನ್ನು ಜೀತೋ ಸಂಸ್ಥೆಯ ಶ್ರೇಯೋಭಿವೃದ್ಧಿಗೆ ಬಳಸಿಕೊಳ್ಳಬಹುದು ಎಂದು ಹೇಳಿದರು.

ಬೇರೆ ಸಮುದಾಯದವರು ವ್ಯಾಪಾರ ಮಾಡಲು ಹಣ ಎಷ್ಟಿದೆ ಎಂದು ನೋಡುತ್ತಾರೆ. ಜೇಬಿನಲ್ಲಿ ಹಣ ಇದ್ದರೆ ಮಾತ್ರ ವ್ಯಾಪಾರ ಮಾಡುತ್ತೇವೆ. ಇಲ್ಲವಾದಲ್ಲಿ ಯಾವುದಾದರೂ ಕೆಲಸ ನೋಡಿಕೊಳ್ಳುತ್ತೇವೆ. ಆದರೆ ಜೈನ ಸಮುದಾಯದವರು ಖಾಲಿ ಕೈಯಲ್ಲಿ ಉದ್ಯಮ, ವ್ಯಾಪಾರ ಆರಂಭಿಸುತ್ತಾರೆ. ತನ್ನ ಚಾಣಾಕ್ಷತನ, ಬದ್ಧತೆಯಿಂದ ಯಶಸ್ಸು ಸಾಧಿಸುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

- Advertisement -

ಅಧ್ಯಾತ್ಮದಲ್ಲಿ ಪಾಪ, ಪುಣ್ಯ, ವ್ಯಾಪಾರದಲ್ಲಿ ಲಾಭ ನಷ್ಟ ನೋಡುತ್ತೇವೆ. ಆದರೆ ವಾಸ್ತವವಾಗಿ ವ್ಯಾಪಾರದಲ್ಲಿ ಪಾಪ, ಪುಣ್ಯ ನೋಡಬೇಕು. ಅಧ್ಯಾತ್ಮದಲ್ಲಿ ಲಾಭ, ನಷ್ಟ ಲೆಕ್ಕ ಹಾಕಬೇಕು. ಬದುಕಿನಲ್ಲಿ ನೈಸರ್ಗಿಕ ಧರ್ಮ ಪರಿಪಾಲನೆಯಾಗಬೇಕು. ನೈಸರ್ಗಿಕ ಧರ್ಮದ ಪರಿಕಲ್ಪನೆ ಅನುಷ್ಠಾನಗೊಳ್ಳುವ ಯಾವುದಾದರೂ ಧರ್ಮ ಇದ್ದರೆ ಅದು ಜೈನ ಧರ್ಮ ಮಾತ್ರ. ಅಹಿಂಸೆಯೇ ಈ ಧರ್ಮದ ಮೂಲ ತಿರುಳು. ಹಿಂಸೆಯಿಂದ ದಾನವ ಧರ್ಮ, ಅಹಿಂಸೆಯಿಂದ ಮಾನವ ಧರ್ಮ ಸ್ಥಾಪನೆಯಾಗುತ್ತದೆ. ಮಾನವೀಯ ಧರ್ಮಕ್ಕೆ ಜೈನ ಸಮುದಾಯ ಮಾದರಿ ಎಂದು ಹೇಳಿದರು.

ಕರ್ನಾಟಕ ಮತ್ತು ಜೈನ ಧರ್ಮದ ನಡುವೆ ಚಾರಿತ್ರಿಕ ಬಾಂಧವ್ಯವಿದೆ. ಮೂರನೇ ಶತಮಾನದ ಕವಿ ಪಂಪ, ರನ್ನ ಮತ್ತಿತರರು ಜೈನ ಧರ್ಮಕ್ಕೆ ಸೇರಿದವರು. ಬಿಹಾರದಿಂದ ಕರ್ನಾಟಕಕ್ಕೆ ಬಂದ ಬಾಹು ಬಲಿ ಶ್ರವಣಬೆಳಗೊಳದಲ್ಲಿ ನೆಲೆ ನಿಲ್ಲುವಂತು ಮೋಕ್ಷ ಕಂಡ. ಹೀಗಾಗಿ ಕರ್ನಾಟಕ ಧರ್ಮ ಭೂಮಿ ಜತೆಗೆ ಮೋಕ್ಷ ಭೂಮಿಯೂ ಆಗಿದೆ ಎಂದರು.

ಜೀತೋ ಸಂಘಟನೆಯಿಂದ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆ ಆರಂಭಿಸಲು ತೀರ್ಮಾನಿಸಿರುವುದು ಉತ್ತಮ ಬೆಳವಣಿಗೆ, ಪದ್ಮಶ್ರೀ ಆಚಾರ್ಯ ಚಂದನಶ್ರೀ ಅವರ ಜತೆ ಚರ್ಚಿಸಿ ಪ್ರಸ್ತಾವನೆ ಸೂಕ್ತ ಸಲ್ಲಿಸಿದರೆ ಸರ್ಕಾರ ಅನುಮತಿ ನೀಡಲಿದೆ. ಜೈನ ಸಮುದಾಯದ ಯಾವುದೇ ರೀತಿಯ ರಚನಾತ್ಮಕ ಕೆಲಸಗಳಿಗೆ ಸರ್ಕಾರ ಬೆಂಬಲ ನೀಡಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಜೈನ ಸಮುದಾಯದ ಬೇರುಗಳು ರಾಜ್ಯದಲ್ಲಿ ಹಾಸುಹೊಕ್ಕಾಗಿದೆ. ರಾಜ್ಯದ ಆರ್ಥಿಕತೆಗೆ ಜೈನರು ಮಹತ್ವದ ಕೊಡುಗೆ ನೀಡುತ್ತಿದ್ದು, ನವ ಕರ್ನಾಟಕದ ಮೂಲಕ ನವ ಭಾರತ ನಿರ್ಮಾಣ ಮಾಡಲು ಕಾರ್ಯೋನ್ಮುಖರಾಗಿದ್ದಾರೆ ಎಂದು ಹೇಳಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿ ಅವರು ವ್ಯಾಪಾರ ಮತ್ತು ಉದ್ಯೋಗ ಮೇಳಕ್ಕೆ ಚಾಲನೆ ನೀಡಿದರು. ಈ ಶೃಂಗ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಪದ್ಮಶ್ರೀ ಆಚಾರ್ಯ ಚಂದನಶ್ರೀ ಪಾಲ್ಗೊಂಡರು.

ಅರಮನೆ ಆವರಣದಲ್ಲಿ 1.25 ಲಕ್ಷ ಚದರ ಅಡಿ ಪ್ರದೇಶದಲ್ಲಿ ಸುಮಾರು 250ಕ್ಕೂ ಹೆಚ್ಚು ಮಳಿಗೆಗಳನ್ನು ಹಾಕಲಾಗಿದೆ. ಜೈನಧರ್ಮದ ಸರಳ ಮತ್ತು ಚಿಂತನಶೀಲ ತತ್ವಾದರ್ಶನಗಳನ್ನು ಈ ಪ್ರದೇಶದಲ್ಲಿ  ಅನಾವರಣಗೊಳಿಸಲಾಗಿದೆ.

ಜೀತೋ ಸಂಸ್ಥೆಯ ಅಪೆಕ್ಸ್ ಅಧ್ಯಕ್ಷ ಸುರೇಶ್ ಮುಥ, ಅಫೆಕ್ಸ್ ಉಪಾಧ್ಯಕ್ಷ ಪರಾಸ್ ಜೈನ್, ಜಿತೋ ಬೆಂಗಳೂರು ಘಟಕದ ಅಧ್ಯಕ್ಷ ಅಶೋಕ್ ನಗೋರಿ, ಜೀತೋ ಮುಖ್ಯ ಕಾರ್ಯದರ್ಶಿ ಮಹೇಶ್ ನಹಾರ್, ಸಮಾಜ್ ಸೇವಕ್ ಮಹೇಂದ್ರ ಸಿಂಘ್ವಿ,  ಮಾಧ್ಯಮ ವಿಭಾಗದ ಮುಖ್ಯಸ್ಥ ಸಿದ್ಧಾರ್ಥ್ ಬೋಹ್ರಾ ಮತ್ತಿತರರು ಉಪಸ್ಥಿತರಿದ್ದರು.



Join Whatsapp