ಆಸ್ಪತ್ರೆ ದಾಳಿ ಪ್ರಕರಣ: ಗುಜರಾತ್ ಬಿಜೆಪಿ ಶಾಸಕನಿಗೆ 6 ತಿಂಗಳು ಜೈಲು

Prasthutha|

- Advertisement -

ಅಹ್ಮದಾಬಾದ್: ಹದಿಮೂರು ವರ್ಷಗಳ ಹಿಂದೆ ಸರಕಾರಿ ಆಸ್ಪತ್ರೆಯ ಮೇಲೆ ನಡೆದ ದಾಳಿ ಮತ್ತು ಸಾರ್ವಜನಿಕ ಆಸ್ತಿ ನಾಶಗೊಳಿಸಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇಲ್ಲಿನ ಕೆಳ ನ್ಯಾಯಾಲಯವೊಂದು ಬಿಜೆಪಿ ಶಾಸಕ ರಾಘವ್ ಜಿ ಪಟೇಲ್ ಮತ್ತು ಇತರ ನಾಲ್ವರನ್ನು ದೋಷಿಗಳೆಂದು ತೀರ್ಪಿತ್ತಿದೆ. 2007ರಲ್ಲಿ ನಡೆದ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮನಗರ ಶಾಸಕರಿಗೆ 6 ತಿಂಗಳು ಜೈಲು ಶಿಕ್ಷೆ ಮತ್ತು 100 00 ರೂಪಾಯಿ ದಂಡ ವಿಧಿಸಿದೆ.

ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದಕ್ಕಾಗಿ ನ್ಯಾಯಾಲಯವು ರಾಘವ್ ಜಿ ಒಳಗೊಂಡಂತೆ ಐದು ಮಂದಿಗೆ ಒಂದು ತಿಂಗಳ ಜಾಮೀನು ನೀಡಿದೆ. ಇತರ ಮೂವರು ಆರೋಪಿಗಳನ್ನು ಸಾಕ್ಷಿ ಕೊರತೆಯ ಹಿನ್ನೆಲೆಯಲ್ಲಿ ಖುಲಾಸೆಗೊಳಿಸಿದೆ.

- Advertisement -

ಸಾರ್ವಜನಿಕ ಆಸ್ತಿಪಾಸ್ತಿ ನಾಶ ಕಾಯ್ದೆಯಡಿ ಜಾಮನಗರ ಶಾಸಕರನ್ನು ದೋಷಿಯೆಂದು ಘೋಷಿಸಲಾಗಿದೆ. ಘಟನೆಯು ನಡೆದಾಗ ರಾಘವ್ ಜಿ ಪಟೇಲ್ ಕಾಂಗ್ರೆಸ್ ಶಾಸಕರಾಗಿದ್ದರು. ನಂತರ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಬಿಜೆಪಿಗೆ ಸೇರ್ಪಡೆಗೊಂಡ ನಂತರ ಅವರ ವಿರುದ್ಧದ ಪ್ರಕರಣವನ್ನು ಕೈಬಿಡಬೇಕೆಂದು ಕೋರಲಾಗಿದ್ದರೂ ನ್ಯಾಯಾಲಯ ಅದಕ್ಕೆ ಒಪ್ಪಿರಲಿಲ್ಲ.

ಪ್ರಕರಣ ದಾಖಲಾಗಿದ್ದ 8 ಮಂದಿಯಲ್ಲಿ ನ್ಯಾಯಾಲಯವು ರಾಘವ್‌ಜಿ ಪಟೇಲ್, ನರೇಂದ್ರಸಿಂಹ ಜಡೇಜಾ, ಜಿತು ಶ್ರೀಮಾಲಿ, ಜಯೇಶ್ ಭಟ್ ಮತ್ತು ಕರಣ್‌ಸಿನ್ಹ ಜಡೇಜಾ ಅವರನ್ನು ದೋಷಿಗಳೆಂದು ಘೋಷಿಸಿದೆ.  ಸಬ್ಬೀರ್ ಚೌಡಾ, ಪಚಾವಾರು ಮತ್ತು ಲಗ್‌ಧೀರ್‌ಸಿನ್ ಜಡೇಜಾ ಎಂಬ ಮೂವರನ್ನು ಸಾಕ್ಷ್ಯಾಧಾರ ಕೊರತೆಯ ಹಿನ್ನೆಲೆಯಲ್ಲಿ ಬಿಡುಗಡೆಗೊಳಿಸಲಾಗಿದೆ.

“2007ರಲ್ಲಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಇಬ್ಬರು ಸಾವನ್ನಪ್ಪಿದ್ದರು. ಇದು ಧ್ರೋಲ್ ನಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಓರ್ವ ಶಾಸಕನಾಗಿ ಕೆಲವು ವ್ಯಕ್ತಿಗಳೊಂದಿಗೆ ನಾನು ಆಸ್ಪತ್ರೆಗೆ ಹೋಗಿದ್ದೆ. ಈ ಸಂದರ್ಭದಲ್ಲಿ ಸ್ವಯಂಪ್ರೇರಿತರಾಗಿ ಸೇರಿ ಜನರು ಗಲಭೆಯುಂಟುಮಾಡಿದ್ದಾರೆ” ಎಂದು ರಾಘವ್ ಜಿ ಪಟೇಲ್ ಹೇಳಿದ್ದಾರೆ.



Join Whatsapp