ನವದೆಹಲಿ: ಉತ್ತರ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ (ಎನ್‌ಡಿಎಂಸಿ) ನಡೆಸಿರುವ ಜಹಾಂಗೀರ್‌ಪುರಿ ಕಟ್ಟಡ ನೆಲಸಮ, ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ತಾನು ನೀಡಿದ್ದ ಆದೇಶ ಪಾಲಿಸದೇ ಇರುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ಗುರುವಾರ ಹೇಳಿದೆ [ಜಮೀಯತ್ ಉಲೇಮಾ ಇ ಹಿಂದ್ ಮತ್ತು ಎನ್‌ಡಿಎಂಸಿ ನಡುವಣ ಪ್ರಕರಣ].
ದೆಹಲಿಯ ಜಹಾಂಗೀರ್‌ಪುರಿ ಮತ್ತಿತರ ರಾಜ್ಯಗಳಲ್ಲಿ ನಡೆದ ತೆರವು ಕಾರ್ಯಾಚರಣೆ ಪ್ರಶ್ನಿಸಿ ಸಲ್ಲಿಸಲಾದ ವಿವಿಧ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ ರಾವ್ ಮತ್ತು ಬಿ ಆರ್ ಗವಾಯಿ ಅವರಿದ್ದ ಪೀಠ ಪ್ರತಿವಾದಿಗಳಿಗೆ ನೋಟಿಸ್ ನೀಡಿದೆ. ತೆರವು ಕಾರ್ಯಾಚರಣೆ ನಡೆಯುವ ಮೊದಲು ತಮಗೆ ನೋಟಿಸ್ ನೀಡಲಾಗಿತ್ತೆ ಎಂಬುದನ್ನು ಅಫಿಡವಿಟ್‌ನಲ್ಲಿ ಬಹಿರಂಗಪಡಿಸುವಂತೆಯೂ ಅದು ಅರ್ಜಿದಾರರಿಗೆ ಸೂಚಿಸಿದೆ.
ಅಂತೆಯೇ ಕಾರ್ಯಾಚರಣೆ ಸ್ಥಗಿತಗೊಳಿಸಿ ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ಎರಡು ವಾರಗಳ ಕಾಲ ವಿಸ್ತರಿಸಿದೆ. ಮುಂದಿನ ಆದೇಶದವರೆಗೂ ಕಾರ್ಯಾಚರಣೆ ನಡೆಸದಂತೆ ಅದು ಸೂಚಿಸಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ದುಶ್ಯಂತ್ ದವೆ, ಈ ಪ್ರಕರಣ ಸಾಂವಿಧಾನಿಕ ಮತ್ತು ರಾಷ್ಟ್ರೀಯ ಮಹತ್ವದ ದೂರಗಾಮಿ ಸವಾಲುಗಳನ್ನು ಒಳಗೊಂಡಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ತೆರವು ಕಾರ್ಯಾಚರಣೆ ಮೂಲಕ ಸಮಾಜದ ನಿರ್ದಿಷ್ಟ ವರ್ಗವನ್ನು ಗುರಿಯಾಗಿಸಲಾಗುತ್ತಿದೆ ಎಂದು ಅವರು ದೂರಿದರು.
ಬಳಿಕ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ “ಇತರ ರಾಜ್ಯಗಳಲ್ಲಿಯೂ ಇಂತಹ ಘಟನೆಗಳು ನಡೆಯುತ್ತಿವೆ. ಮೆರವಣಿಗೆ, ಘರ್ಷಣೆಗಳು ಸಂಭವಿಸಿದಾಗ, ಕೇವಲ ಒಂದು ಸಮುದಾಯದ ಮನೆಗಳನ್ನು ಹಾಳುಗೆಡವಲಾಗುತ್ತಿದ್ದು ಅಧಿಕಾರ ರಾಜಕಾರಣ ಏನು ನಡೆಯಬೇಕು ಅಥವಾ ನಡೆಯಬಾರದು ಎಂಬುದನ್ನು ನಿರ್ಣಯಿಸುತ್ತದೆ” ಎಂದರು.
ತೆರವು ಕಾರ್ಯಾಚರಣೆ ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ಸಿಪಿಎಂ ನಾಯಕಿ ಬೃಂದಾ ಕಾರಟ್ ಪರ ವಾದ ಮಂಡಿಸಿದ ವಕೀಲ ಪಿ ವಿ ಸುರೇಂದ್ರನಾಥ್, ನ್ಯಾಯಾಲಯದ ಯಥಾಸ್ಥಿತಿ ಆದೇಶವಿದ್ದರೂ ತೆರವು ಕಾರ್ಯಾಚರಣೆ ನಿಲ್ಲಲಿಲ್ಲ. ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಬೃಂದಾ ಅಧಿಕಾರಿಗಳಿಗೆ ತಿಳಿಸಿದರೂ ಅವರು ನಿಲ್ಲಿಸಲಿಲ್ಲ. ಅದು 12:45 ರವರೆಗೆ ನಡೆಯಿತು. ಕಾರ್ಯಾಚರಣೆ ಸ್ಥಗಿತಗೊಳಿಸಲು ಆಕೆ ಖುದ್ದು (ಬುಲ್ಡೋಜರ್) ಎದುರಿಗೆ ನಿಲ್ಲಬೇಕಾಯಿತು,” ಎಂದರು.
ಕಾರ್ಯಾಚರಣೆ ವೇಳೆ ಕೆಡವಲಾದ ಜ್ಯೂಸ್ ಅಂಗಡಿಯ ಮಾಲೀಕ ಗಣೇಶ್ ಗುಪ್ತ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂಜಯ್ ಹೆಗ್ಡೆ, ಅಕ್ರಮವಾಗಿ ಕಟ್ಟಡ ತೆರವುಗೊಳಿಸಿರುವ ಸಂಬಂಧ ಪರಿಹಾರ ಒದಗಿಸುವಂತೆ ಕೋರಿದರು.
ಇತ್ತ ಎನ್‌ಡಿಎಂಸಿಯನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ “ಜಹಾಂಗೀರ್‌ಪುರಿ ನಡೆಯುತ್ತಿರುವ ಪಾದಚಾರಿ ಅತಿಕ್ರಮಣ ತೆರವು ಕಾರ್ಯಾಚರಣೆ ಈ ವರ್ಷದ ಜನವರಿಯಿಂದ ಆರಂಭವಾಗಿದೆ” ಎಂದರು.
“ಸಂಘಟನೆ (ಜಮೀಯತ್) ಇಲ್ಲಿಗೆ ದಿಢೀರನೆ ಬಂದರೆ ಹೀಗಾಗುತ್ತದೆ. ನೋಟಿಸ್ ನೀಡುವುದು ಯಾವಾಗ ಅಗತ್ಯವಿಲ್ಲ ಮತ್ತು ಅಕ್ರಮ ಕಟ್ಟಡಗಳಿಗೆ ಯಾಗಾಗ ನೋಟಿಸ್ ನೀಡಲಾಗಿದೆ ಎನ್ನುವ ಉದಾಹರಣೆಗಳನ್ನು ನಿಮಗೆ ತೋರಿಸುತ್ತೇನೆ. ವ್ಯಾಪಾರಿಗಳು ಕಳೆದ ವರ್ಷ ಹೈಕೋರ್ಟ್‌ಗೆ ಮೊರೆ ಹೋಗಿದ್ದು ಅದು ಕೂಡ ಕೆಡವಲು ಆದೇಶಿಸಿತ್ತು” ಎಂದರು. ಕೆಲ ರಾಜ್ಯಗಳಲ್ಲಿ ಕೂಡ ತೆರವು ಕಾರ್ಯಾಚರಣೆ ಮೂಲಕ ನಿರ್ದಿಷ್ಟ ಸಮುದಾಯವೊಂದನ್ನು ಗುರಿಯಾಗಿಸಲಾಗುತ್ತದೆ ಎಂಬ ವಾದ ಪ್ರಸ್ತಾಪಿಸಿದ ಮೆಹ್ತಾ “ಕಳೆದ ವರ್ಷ ಮಧ್ಯಪ್ರದೇಶದ ಖಾರ್ಗೋನ್‌ನಲ್ಲಿ ನಡೆದ ತೆರವು ಕಾರ್ಯಾಚರಣೆಯಲ್ಲಿ ತೊಂದರೆಗೊಳಗಾದವರಲ್ಲಿ 88 ಮಂದಿ ಹಿಂದೂಗಳು ಹಾಗೂ 26 ಮಂದಿ ಮುಸ್ಲಿಮರು ಇದ್ದರು ಎಂದು ಗಮನ ಸೆಳೆದರು.
ವಾದಗಳನ್ನು ಆಲಿಸಿದ ನ್ಯಾಯಾಲಯ “ನೋಟಿಸ್ ನೀಡಲಾಗಿತ್ತೇ ಎಂಬ ಕುರಿತು ಅರ್ಜಿದಾರರಿಂದ ನಾವು ಅಫಿಡವಿಟ್‌ಗಳನ್ನು ಬಯಸುತ್ತೇವೆ. ಹಾಗೆಯೇ (ಪ್ರತಿವಾದಿಗಳು) ಕೌಂಟರ್ ಅಫಿಡವಿಟ್ ಕೂಡ ಸಲ್ಲಿಸಬೇಕು. ಅಲ್ಲಿಯವರೆಗೆ ಯಥಾಸ್ಥಿತಿ ಮುಂದುವರೆಯಲಿದೆ” ಎಂದು ತಿಳಿಸಿತು.
(ಕೃಪೆ: ಬಾರ್ ಆ್ಯಂಡ್ ಬೆಂಚ್)