ಬೆಂಗಳೂರು: ನಟ ಜಗ್ಗೇಶ್ ಅವರು ಹುಲಿ ಉಗುರಿನ ಕೇಸ್ ಗೆ ಸಂಬಂಧಿಸಿದಂತೆ ವರ್ತೂರು ಸಂತೋಷ್ ಬಗ್ಗೆ ಆಡಿದ ಮಾತುಗಳು ವಿವಾದಕ್ಕೆ ಕಾರಣ ಆಗಿವೆ.
ಇದನ್ನು ಖಂಡಿಸಿ ವರ್ತೂರು ಸಂತೋಷ್ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಜಗ್ಗೇಶ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಹೇಳಿಕೆಯನ್ನು ತಿರುಚಿ, ಸೋಶಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ.
ಹೆಬ್ಬಗೋಡಿಯ ನಾರಾಯಣಸ್ವಾಮಿ ಮತ್ತು ಇನ್ನೋರ್ವ ವ್ಯಕ್ತಿಯ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಜಾತಿನಿಂದನೆ ,ಅವಾಚ್ಯ ಪದಗಳ ಬಳಕೆ, ಮುಖಕ್ಕೆ ಮಸಿ ಬಳಿಯುವ ಬೆದರಿಕೆ ಹಾಕಲಾಗಿದೆ ಎಂದು ಜಗ್ಗೇಶ್ ಅವರು ಆರೋಪ ಮಾಡಿದ್ದಾರೆ. ‘ತಪ್ಪು ಸಂದೇಶ ಕೊಟ್ಟು ಜಾತಿ ಗಲಭೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ನೀಡಲಾಗುತ್ತಿದೆ. ಕಿತ್ತೋದ್ ನನ್ ಮಗ ಎಂಬುದು ಗ್ರಾಮೀಣ ಭಾಷೆಯಾಗಿದ್ದು, ಅದನ್ನು ತಿರುಚಿ ಪ್ರಚೋದಿಸಲಾಗುತ್ತಿದೆ’ ಎಂದು ಜಗ್ಗೇಶ್ ದೂರು ನೀಡಿದ್ದಾರೆ.