ಕೋಟಿ ಚೆನ್ನಯ, ಬಿಲ್ಲವ ಸಮುದಾಯದ ಅವಹೇಳನದ ಆರೋಪ | ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ವಿರುದ್ಧ ಆಕ್ರೋಶ

Prasthutha|

ಮೂಡುಬಿದಿರೆ : ಬಿಲ್ಲವರು ಮತ್ತು ಕೋಟಿ ಚೆನ್ನಯರ ಬಗ್ಗೆ ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಅವಮಾನಕಾರಿ ಮಾತುಗಳನ್ನಾಡಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಜಗದೀಶ್ ಅಧಿಕಾರಿ ಅವರು ಮಾತನಾಡಿದ್ದರೆನ್ನಲಾದ ವೀಡಿಯೊ, ಆಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

- Advertisement -

ಮೂಡುಬಿದಿರೆ ಸಮೀಪದ ವಾಲ್ಪಾಡಿ ಗುತ್ತುವಿನಲ್ಲಿ ನಡೆದ ನೇಮೋತ್ಸವದ ಧಾರ್ಮಿಕ ಸಭೆಯಲ್ಲಿ ಜಗದೀಶ್ ಅಧಿಕಾರಿ ಮಾತನಾಡುತ್ತಾ, “ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು, ಮೂಲ್ಕಿಯ ಅರಸರು ಬಂದರೆ ಅವರಿಗೆ ಗೌರವ ಕೊಟ್ಟು ಕಾಲು ಹಿಡಿಯುತ್ತೇವೆ. ನಮ್ಮ ಕೈಗೂ ಬೆಲೆ ಇದೆ, ಎಲ್ಲರ ಕಾಲು ಹಿಡಿಯಲು ಆಗುವುದಿಲ್ಲ ನಮಗೆ. ಜನಾರ್ಧನ ಪೂಜಾರಿ ಕೇಂದ್ರ ಮಂತ್ರಿ ಆಗಿದ್ದಾರೆಂದು ಅವರ ಕಾಲು ಹಿಡಿಯಲು ಆಗುತ್ತಾ? ಕೆಲವರು ಟಿಕೆಟ್ ಗಾಗಿ ಕಾಲು ಹಿಡಿಯುತ್ತಾರೆ. ನನಗೆ ಟಿಕೆಟ್ ಸಿಗದಿದ್ದರೂ ಪರ್ವಾಗಿಲ್ಲ ನಾನು ಕಾಲು ಹಿಡಿಯುವವರದ್ದೇ ಹಿಡಿಯುವುದು. ಗೌರವ ಕೊಡುವವರಿಗೇ ಕೊಡುವುದು” ಎಂದು ಹೇಳಿರುವ ವೀಡಿಯೊ ವೈರಲ್ ಆಗಿದೆ.

ಈ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಜಗದೀಶ್ ಅಧಿಕಾರಿ ಅವರಿಗೆ ಕರೆ ಮಾಡಿ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿರುವ ಆಡಿಯೊ ಕೂಡ ವೈರಲ್ ಆಗಿದೆ. ಫೋನ್ ಮಾಡಿದ್ದ ವ್ಯಕ್ತಿ ಮಾತನಾಡಿ, ಕರೆ ಸ್ಥಗಿತಗೊಳಿಸಿದ್ದಾರೆಂದು ಭಾವಿಸಿ ಜಗದೀಶ್ ಅಧಿಕಾರಿ ಮಾತನಾಡಿದ್ದಾರೆ. ಅವರು ಮಾತನಾಡುತ್ತಿರುವುದು ರೆಕಾರ್ಡ್ ಆಗಿದೆ. ಅದರಲ್ಲಿ ಜಗದೀಶ್ ಅಧಿಕಾರಿ ಕೋಟಿ ಚೆನ್ನಯರ ಬಗ್ಗೆ ಮತ್ತು ಬಿಲ್ಲವರ ಬಗ್ಗೆ ಮಾತನಾಡಿರುವುದು ವಿವಾದಾತ್ಮಕವಾಗಿದೆ.

- Advertisement -

ಈ ಹಿನ್ನೆಲೆಯಲ್ಲಿ ಬಿಲ್ಲವ ಸಂಘದ ವಿವಿಧ ಘಟಕಗಳ ಮುಖಂಡರು ಶುಕ್ರವಾರ ಮೂಡುಬಿದಿರೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಬಿಜೆಪಿಯಲ್ಲಿ ಬಿಲ್ಲವರು ಹೆಚ್ಚಾಗಿ ತೊಡಗಿಸಿಕೊಂಡಿದ್ದರೂ, ಬಿಜೆಪಿ ಮುಖಂಡರು ಈ ರೀತಿ ಮಾತನಾಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

Join Whatsapp