ಕಾರವಾರ: ಶಿರೂರು ಗುಡ್ಡ ಕುಸಿತ ಉಂಟಾಗಿ 11 ಜನ ಮತ್ತು ಕೇರಳ ಮೂಲದ ಒಂದು ಟ್ರಕ್ ಕಾಣೆಯಾಗಿ ಹೆಚ್ಚುಕಡಿಮೆ ಒಂದು ತಿಂಗಳಾಯಿತು.
ಇದುವರೆಗೆ ಕೇವಲ 8 ಜನರ ದೇಹಗಳು ಮಾತ್ರ ಪತ್ತೆಯಾಗಿದ್ದು ಇನ್ನುಳಿದ ಮೂವರ ಶೋಧ ಕಾರ್ಯ ನಿಲ್ಲಿಸಲಾಗಿತ್ತು. ಕಣ್ಮರೆಯಾಗಿರುವ ಮೂವರ ಪತ್ತೆಗಾಗಿ ಶೋಧ ಕಾರ್ಯ ಮಂಗಳವಾರ ಮತ್ತೆ ಆರಂಭವಾಗಿದೆ.
ಮಳೆ ಕಡಿಮೆಯಾಗಿ ಗಂಗಾವಳಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ಅವರ ಸೂಚನೆಯಂತೆ ಮತ್ತೆ ಕಾರ್ಯಾಚರಣೆ ಆರಂಭಿಸಲಾಗಿದ್ದು, ಮಲ್ಪೆಯ ಮುಳುಗು ತಜ್ಞ ಈಶ್ವರ ಅವರ ತಂಡ ಶೋಧ ಕಾರ್ಯ ನಡೆಸುತ್ತಿದೆ.
ಈ ವೇಳೆ ಗುಡ್ಡದ ಮಣ್ಣಿನೊಂದಿಗೆ ಕೊಚ್ಚಿಹೋಗಿ ನದಿ ಪಾಲಾಗಿದ್ದ ಕೇರಳದ ಅರ್ಜುನ ಚಲಾಯಿಸುತ್ತಿದ್ದ ಟಿಂಬರ್ ಲಾರಿಯ ಜಾಕ್ ನದಿಯಾಳದಲ್ಲಿ ದೊರೆತಿದ್ದು, ಇದನ್ನು ಸ್ಥಳದಲ್ಲಿದ್ದ ಲಾರಿ ಮಾಲಿಕ ಖಚಿತಪಡಿಸಿದ್ದಾರೆ.