ಅಡುಗೆ ಅನಿಲ ಬೆಲೆ ಏರಿಕೆ ವಿರುದ್ಧ 100 ಅಡಿ ಸಿಲಿಂಡರ್ ಬಾವುಟ ಹಿಡಿದು ವಿನೂತನ ಪ್ರತಿಭಟನಾ ಜಾಥ

Prasthutha|

ಬೆಂಗಳೂರು; ಅಡುಗೆ ಅನಿಲ, ಪೆಟ್ರೋಲಿಯಂ ಉತ್ಪನ್ನಗಳು ಸೇರಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿದ್ದು, ಇದನ್ನು ವಿರೋಧಿಸಿ ಪ್ರದೇಶ ಯುವ ಕಾಂಗ್ರೆಸ್ ನಗರದ ಆನಂದ್ ರಾವ್ ವೃತ್ತದಲ್ಲಿಂದು ಬೃಹತ್ ಪ್ರತಿಭಟನಾ ಜಾಥ ನಡೆಸಿತು.
ಯುವ ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ, ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಭವನದಿಂದ 100 ಅಡಿ ಉದ್ದದ ಸಿಲಿಂಡರ್ ನ ಬಾವುಟ ಹಿಡಿದು ಹೊರಟ ಜಾಥ ಆನಂದ್ ರಾವ್ ವೃತ್ತದ ಮೇಲ್ಸೇತುವೆಯಿಂದ ಮೌರ್ಯ ಸರ್ಕಲ್ ನ ಗಾಂಧಿ ಪ್ರತಿಮೆ ಮೂಲಕ ಸಾಗಿ ವಿನೂತನವಾಗಿ ಪ್ರತಿಭಟನೆ ನಡೆಸಿತು.


ಅಡುಗೆ ಅನಿಲ ಸಿಲಿಂಡರ್ ಗಳನ್ನು ಹಿಡಿದು ಯುವ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಸರ್ಕಾರ ಕಳೆದ ಏಳು ವರ್ಷಗಳಲ್ಲಿ ಜನ ಸಾಮಾನ್ಯರ ಮೇಲೆ ನಿರಂತರವಾಗಿ ಬೆಲೆ ಏರಿಕೆ ಮಾಡಿ ಅನ್ಯಾಯ ಮಾಡುತ್ತಿದೆ. ಈ ಸರ್ಕಾರವನ್ನು ಕಿತ್ತೊಗೆಯುವವರೆಗೆ ಹೋರಾಟ ಮಾಡುವುದಾಗಿ ಪ್ರತಿಭಟನಾಕಾರರು ಘೋಷಣೆ ಕೂಗಿದರು.

- Advertisement -


ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಮಾತನಾಡಿ, ಒಂದೆಡೆ ಉಜ್ವಲ ಯೋಜನೆಯಡಿ ಉಚಿತ ಸಿಲಿಂಡರ್ ಗಳನ್ನು ನೀಡಿ, ಮತ್ತೊಂದೆಡೆ ಅಡುಗೆ ಸಿಲಿಂಡರ್ ಬೆಲೆಯನ್ನು ಗಣನೀಯವಾಗಿ ಏರಿಕೆ ಮಾಡುತ್ತಿದೆ. ಡಾ. ಮನಮೋಹನ್ ಸಿಂಗ್ ಕಾಲದಲ್ಲಿ 400 ರೂ ಇದ್ದ ಸಿಲಿಂಡರ್ ಬೆಲೆ ಇದೀಗ 900 ರೂಗೆ ತಲುಪಿದೆ. ಗೃಹಿಣಿಯರು ರಕ್ತ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಅಡುಗೆ ಮಾಡುವ ಪ್ರತಿಯೊಂದು ಪದಾರ್ಥದ ಬೆಲೆಯಲ್ಲಿಯೂ ವಿಪರೀತ ಏರಿಕೆಯಾಗಿದೆ ಎಂದು ಆರೋಪಿಸಿದರು.


ಬಿಜೆಪಿ ಎಂದರೆ ಬೆಲೆ ಏರಿಕೆ, ನರೇಂದ್ರ ಮೋದಿ ಎಂದರೆ ಬೆಲೆ ಏರಿಕೆಯಾಗಿದೆ. ಇವರಿಗೆ ಬಡವರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಇಲ್ಲವಾಗಿದ್ದರೆ ಇಷ್ಟೊಂದು ಪ್ರಮಾಣದಲ್ಲಿ ಜನರಿಗೆ ಕಷ್ಟ ನೀಡುತ್ತಿರಲಿಲ್ಲ. ಬೆಲೆ ಇಳಿಕೆ ಮಾಡದಿದ್ದರೆ ಬಿಜೆಪಿ ಸಚಿವರು, ಸಂಸದರು, ಶಾಸಕರು ಹೀಗೆ ಎಲ್ಲರನ್ನೂ ಘೇರಾವ್ ಮಾಡಿ ಹೋರಾಟವನ್ನು ತೀವ್ರಗೊಳಿಸುತ್ತೇವೆ ಎಂದು ಶ್ರೀನಿವಾಸ್ ಬಿ.ವಿ. ಎಚ್ಚರಿಕೆ ನೀಡಿದರು.

ಕೆಪಿವೈಸಿಸಿ ಅಧ್ಯಕ್ಷ ಎಂ.ಎಸ್. ರಕ್ಷಾ ರಾಮಯ್ಯ ಮಾತನಾಡಿ, ಬಿಜೆಪಿ ನಾಯಕರು ಜನರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ. ರಾಜ್ಯಕ್ಕೆ ಅಮಿತ್ ಶಾ ಭೇಟಿ ನೀಡಿದ್ದು, ಅವರು ಬೆಲೆ ಏರಿಕೆ ಕುರಿತು ಮಾತನಾಡಬೇಕು. ಆದರೆ ವಿಚಿತ್ರವೆಂದರೆ ನರೇಂದ್ರ ಮೋದಿ, ಅಮಿತ್ ಶಾ ಮತ್ತಿತರ ಬಿಜೆಪಿ ನಾಯಕರು ಜನತೆ ಸಂಕಷ್ಟದಲ್ಲಿದ್ದಾಗ ಯಾವತ್ತೂ ಅಂತಹ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ. ರಾಜ್ಯಕ್ಕೂ ಭೇಟಿ ನೀಡುವುದಿಲ್ಲ. ಯಾರದೋ ಮದುವೆ, ಇಲ್ಲವೆ ಪಕ್ಷದ ಸಭೆಗಳಿಗೆ ಆಗಮಿಸುತ್ತಾರೆ. ಬಿಜೆಪಿ ನಾಯಕರು ಮನೆಯಲ್ಲಿ ಕುಳಿತಿದ್ದಾರೆ. ನಮ್ಮ ಹೋರಾಟ ದೆಹಲಿವರೆಗೆ ಕೊಂಡೊಯ್ಯುವುದಾಗಿ ಹೇಳಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಬಲೆ ಏರಿಕೆ ನೀತಿಯಿಂದಾಗಿ ಜನ ಸಾಮಾನ್ಯರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಜನರಿಗೆ ಉದ್ಯೋಗ ಸೃಷ್ಟಿಯಾಗಿಲ್ಲ. ಇರುವ ಉದ್ಯೋಗವೂ ನಷ್ಟವಾಗಿದೆ. ಜನರಲ್ಲಿ ಹಣ ಇಲ್ಲ. ಮುಂದಿನ 15 ದಿನಗಳ ಒಳಗಾಗಿ ಬೆಲೆ ಇಳಿಕೆಯಾಗದಿದ್ದರೆ ಬೇಡಿಕೆ ಈಡೇರುವ ತನಕ ರಾಜ್ಯದ ಮೂಲೆ ಮೂಲೆಗಳಲ್ಲಿ ಯುವ ಕಾಂಗ್ರೆಸ್ ತೀವ್ರ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.


ತಮಿಳು ನಾಡಿನಲ್ಲಿ ರಾಜ್ಯ ವಲಯದಲ್ಲಿ 3 ರೂ ಸೆಸ್ ಕಡಿಮೆ ಮಾಡಿದ್ದು, ರಾಜ್ಯದಲ್ಲಿ ಬೆಲೆ ಇಳಿಕೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಗುವುದು. ರಾಜ್ಯ ಹಾಗೂ ಕೇಂದ್ರದಲ್ಲಿ ಒಂದೇ ಪಕ್ಷದ ಆಡಳಿತ ಇದ್ದರೆ ಅನುಕೂಲವಾಗುತ್ತದೆ ಎನ್ನುವ ನಂಬಿಕೆ ಹುಸಿಯಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರದಿಂದ ಈವರೆಗೆ ಇಂತಹ ಜನ ವಿರೋಧಿ, ರೈತ, ವಿದ್ಯಾರ್ಥಿ ವಿರೋಧಿ ಸರ್ಕಾರವನ್ನು ಜನತೆ ಕಂಡಿರಲಿಲ್ಲ ಎಂದು ರಕ್ಷಾ ರಾಮಯ್ಯ ಆರೋಪಿಸಿದರು.

- Advertisement -