ಸಮಾಜದ ಆರೋಗ್ಯ ಕಾಪಾಡುವ ಜವಾಬ್ದಾರಿ ಪತ್ರಕರ್ತರದ್ದು: ಸದಾಶಿವ ಶೆಣೈ

Prasthutha|

ಮಂಗಳೂರು: ಸೂಕ್ಷ್ಮ, ಸಂವೇದನಾಶೀಲತೆ ಬೆಳೆಸಿಕೊಂಡು ಟೀಕೆ, ಟಿಪ್ಪಣಿ ಎದುರಿಸಿ ನಿರ್ಭೀತಿಯಿಂದ ಕೆಲಸ ಮಾಡಬೇಕಾದುದು ಪತ್ರಕರ್ತರ ಧರ್ಮ. ಸಮಾಜದ ಆರೋಗ್ಯ ಕಾಪಾಡುವ ಜವಾಬ್ದಾರಿ ಕೂಡ ಪತ್ರಕರ್ತರದ್ದಾಗಿದೆ ಎಂದು ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಕೆ.ಸದಾಶಿವ ಶೆಣೈ ಹೇಳಿದ್ದಾರೆ.

- Advertisement -


ಬೋಳೂರಿನ ಪ್ಯಾರಡೈಸ್ ಐಲ್ಯಾಂಡ್’ನಲ್ಲಿ ಭಾನುವಾರ ಮಂಗಳೂರು ಪ್ರೆಸ್ ಕ್ಲಬ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಪತ್ರಿಕಾ ಭವನ ಟ್ರಸ್ಟ್ ಆಶ್ರಯದಲ್ಲಿ ನಡೆದ ಪ್ರೆಸ್ ಕ್ಲಬ್ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರು ಪ್ರಶಸ್ತಿ, ಸನ್ಮಾನಗಳಿಗಿಂತ ಲೇಖನಿ ಮೂಲಕ ಜನತೆಗೆ ಸಹಾಯ ಮಾಡುತ್ತಾರೆ. ಮಂಗಳೂರಿನ ಪತ್ರಕರ್ತರಿಗೆ ವಿಶೇಷ ಸ್ಥಾನಮಾನ ಇದೆ. ರಾಜ್ಯದ ಎಲ್ಲ ಕಡೆಗಳಲ್ಲಿ ಗೌರವದ ಹೆಸರು ಇದೆ. ಸಮಾಜಮುಖಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಅಭಿನಂದನೀಯ. ಬೀದಿನಾಯಿ ಬಗೆಗಿನ ಕಾಳಜಿಗೆ ಪ್ರಶಸ್ತಿ ಸಂದಿರುವುದು ಸಂತಸ ತಂದಿದೆ ಎಂದರು.
ಪ್ರೆಸ್’ಕ್ಲಬ್ ಪ್ರಶಸ್ತಿ ಪ್ರದಾನ: ಬೀದಿ ನಾಯಿಗಳಿಗೆ ಅನ್ನಾಹಾರ ಹಾಕಿ ಪೋಷಿಸುತ್ತಿರುವ ಮಂಗಳೂರಿನ ರಜನಿ ಶೆಟ್ಟಿ ಅವರಿಗೆ 2022ರ ಸಾಲಿನ ಪ್ರೆಸ್’ಕ್ಲಬ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಚಲನಚಿತ್ರ ನಟ ರೂಪೇಶ್ ಶೆಟ್ಟಿ ಪ್ರಶಸ್ತಿ ಪ್ರದಾನ ನೆರವೇರಿಸಿ, ನನ್ನ ಏಳ್ಗೆಗೆ ಮಾಧ್ಯಮಗಳೂ ಕಾರಣವಾಗಿದೆ. ನಾನೂ ಪತ್ರಕರ್ತನಾಗಿದ್ದು, ಸದ್ಯ ಚಿತ್ರನಟನೆಯಲ್ಲಿ ಬ್ಯೂಸಿ ಆಗಿದ್ದೇನೆ. ಪತ್ರಕರ್ತರಿಗೂ ಕಾರ್ಯದ ಒತ್ತಡದಿಂದ ತುಸು ಬಿಡುವು ಪಡೆಯಲು ಇಂತಹ ಕಾರ್ಯಕ್ರಮಗಳ ಅತ್ಯಗತ್ಯ ಎಂದರು.


ಪ್ರಶಸ್ತಿ ಸ್ವೀಕರಿಸಿದ ರಜನಿ ಶೆಟ್ಟಿ ಮಾತನಾಡಿ, 22 ವರ್ಷಗಳಿಂದ ನಾಯಿಗಳಿಗೆ ಆಶ್ರಯ ನೀಡುತ್ತಿದ್ದೇನೆ. ನಮ್ಮಷ್ಟೆ ಬದುಕುವ ಅಧಿಕಾರ ಮೂಕಪ್ರಾಣಿಗಳಿಗೂ ಇದೆ. ನನ್ನ ಈ ಕಾರ್ಯಕ್ಕೆ ಟೀಕೆ, ವಿರೋಧಗಳೂ ವ್ಯಕ್ತವಾಗಿದೆ. ಆದರೂ ಹಿಮ್ಮೆಟ್ಟದೆ ಪ್ರಾಣಿ ಪ್ರೇಮಿಗಳ ನೆರವು ಹಾಗೂ ಪ್ರೋತ್ಸಾಹದಿಂದ ನಾಯಿಗಳ ಆರೈಕೆ ಮಾಡುತ್ತಿದ್ದೇನೆ. ಈಗ 800 ಬೀಡಾಡಿ ನಾಯಿಗಳಿಗೆ ನಿತ್ಯವೂ ಆಹಾರ ಉಣಿಸುತ್ತಿದ್ದೇನೆ. ನಾನು ತಪ್ಪು ಮಾಡುತ್ತಿಲ್ಲ ಪ್ರೆಸ್’ಕ್ಲಬ್ ಪ್ರಶಸ್ತಿಯಿಂದ ಸಾಬೀತಾಗಿದೆ. ನನ್ನ ಜವಾಬ್ದಾರಿ ಇನ್ನೂ ಹೆಚ್ಚಿದೆ ಎಂದರು.
ಇಸಿಜಿ ಯಂತ್ರ, ವೋಚರ್ ಹಸ್ತಾಂತರ: ಬೆಳ್ತಂಗಡಿ ಹಾಗೂ ಮೂಡುಬಿದಿರೆ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಸುಮಾರು 2.50 ಲಕ್ಷ ರೂ. ಮೌಲ್ಯದ ಉಚಿತ ಇಸಿಜಿ ಯಂತ್ರದ ಕೊಡುಗೆ ಹಾಗೂ ಹೃದ್ರೋಗ ತಪಾಸಣೆಯ ಉಚಿತ ಕೂಪನ್’ನ್ನು ಮಂಗಳೂರಿನ ಹೃದ್ರೋಗ ತಜ್ಞ ಡಾ.ಪದ್ಮನಾಭ ಕಾಮತ್ ಹಸ್ತಾಂತರಿಸಿದರು.
ಹಿರಿಯ ಪತ್ರಕರ್ತರಿಗೆ ಗೌರವ: ಹಿರಿಯ ಪತ್ರಕರ್ತರಾದ ಜಿನ್ನಪ್ಪ ಗೌಡ, ರಾಮಕೃಷ್ಣ ಆರ್., ಐ.ಬಿ.ಸಂದೀಪ್ ಕುಮಾರ್, ಕೆ.ಟಿ.ವಿನೋಬ, ಪ್ರಕಾಶ್ ಇಳಂತಿಲ, ಪುಷ್ಪರಾಜ್ ಬಿ.ಎನ್, ರಾಮಕೃಷ್ಣ ಭಟ್, ಇಬ್ರಾಹಿಂ ಅಡ್ಕಸ್ಥಳ, ರವೀಂದ್ರ ಶೆಟ್ಟಿ ಅವರಿಗೆ ಪ್ರೆಸ್ ಕ್ಲಬ್ ಗೌರವ ಪುರಸ್ಕಾರ ನೀಡಲಾಯಿತು.

- Advertisement -


ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೆರವೇರಿಸಿದರು.
ಪ್ರೆಸ್’ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಆನಂದ ಶೆಟ್ಟಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಸದಸ್ಯ ಪಿ.ಬಿ.ಹರೀಶ್ ರೈ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಜಗನ್ನಾಥ ಶೆಟ್ಟಿ ಬಾಳ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಇಬ್ರಾಹಿಂ ಅಡ್ಕಸ್ಥಳ, ಪತ್ರಿಕಾ ಭವನ ಟ್ರಸ್ಟ್ ಆಧ್ಯಕ್ಷ ರಾಮಕೃಷ್ಣ ಆರ್. ಉಪಸ್ಥಿತರಿದ್ದರು.
ಪ್ರೆಸ್ ಕ್ಲಬ್ ಕಾರ್ಯಕಾರಿ ಸಮಿತಿ ಸದಸ್ಯರಾದ ಪುಷ್ಪರಾಜ್ ಬಿ.ಎನ್., ಇಬ್ರಾಹಿಂ ಅಡ್ಕಸ್ಥಳ, ಆತ್ಮಭೂಷಣ್ ಮತ್ತು ಹರೀಶ್ ಮೋಟುಕಾನ ಸನ್ಮಾನಿತರನ್ನು ಪರಿಚಯಿಸಿದರು.
ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಆರಿಫ್ ಪಡುಬಿದ್ರಿ ವರದಿ ವಾಚಿಸಿದರು. ಪತ್ರಕರ್ತ ದಿನೇಶ್ ಇರಾ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ವಂದಿಸಿದರು.
ನಿಖಿಲ್ ಶೆಟ್ಟಿ ಅವರಿಂದ ಪತ್ರಕರ್ತರ ಸಂಘದ ಸದಸ್ಯರಿಗೆ ಸಾಂಸ್ಕೃತಿಕ, ಮನೋರಂಜನಾ ಕಾರ್ಯಕ್ರಮ ನಡೆಯಿತು.

Join Whatsapp