ಬಿಷ್ಣುಪುರ್: ಜಪ್ತಿ ಮಾಡಿದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ತೆಗೆದುಕೊಂಡು ಹೋಗದಂತೆ ಸೇನೆಯನ್ನು ಮಹಿಳೆಯರ ನೇತೃತ್ವದ ಪ್ರತಿಭಟನಕಾರರು ತಡೆದ ಘಟನೆ ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ನಡೆದಿದೆ.
ಇಂದು ಬೆಳಗ್ಗೆ ಕುಂಬಿ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ ಸೇನೆಯ ಮಹಾರ್ ರೆಜಿಮೆಂಟ್‌ನ ಸಿಬ್ಬಂದಿ ಎರಡು ಎಸ್‌ಯುವಿಗಳನ್ನು ತಡೆದು, ಅದರಲ್ಲಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದರು. ಸೇನಾ ಸಿಬ್ಬಂದಿಯನ್ನು ನೋಡಿದ ತಕ್ಷಣ ಎರಡು ವಾಹನಗಳಲ್ಲಿದ್ದ ದುಷ್ಕರ್ಮಿಗಳು, ವಾಹನ ಮತ್ತು ಶಸ್ತ್ರಾಸ್ತ್ರಗಳನ್ನು ಬಿಟ್ಟು ಓಡಿಹೋಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ವಲ್ಪ ಸಮಯದ ನಂತರ ‘ಮೀರಾ ಪೈಬಿಸ್’ – ಮೈಟಿ ಮಹಿಳೆಯರ ನಾಗರಿಕ ಗುಂಪು ಸ್ಥಳದಲ್ಲಿ ಜಮಾಯಿಸಿ, ಶಸ್ತ್ರಾಸ್ತ್ರಗಳನ್ನು ತಮಗೆ ಹಸ್ತಾಂತರಿಸುವಂತೆ ಸೇನೆಗೆ ಒತ್ತಾಯಿಸಿದರು ಎಂದು ಅವರು ತಿಳಿಸಿದರು.
ನೂರಾರು ಮಹಿಳೆಯರು ರಸ್ತೆ ತಡೆ ನಡೆಸಿ, ಸೇನಾ ಬೆಂಗಾವಲು ಪಡೆ ಸ್ಥಳದಿಂದ ಹೊರಹೋಗದಂತೆ ತಡೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ಆರಂಭವಾದ ಸಂಘರ್ಷ ಸಂಪೂರ್ಣ ಮುಗಿಯುವವರೆಗೆ ಯಾವುದೇ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಬಾರದು ಎಂದು ಮಹಿಳೆಯರು ಆಗ್ರಹಿಸಿದ್ದಾರೆ