►► ‘ಬಿಜೆಪಿ ನಾಯಕನಿಂದ 22 ಕೆ.ಜಿ ಚಿನ್ನ ವಶಪಡಿಸಿದರೂ ಐಟಿ ದಾಳಿಯಿಲ್ಲ”
ಪಾಟ್ನಾ: ಇಲ್ಲಿನ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಆದಾಯ ತೆರಿಗೆ ಅಧಿಕಾರಿಗಳ ತಂಡವು ಪಕ್ಷದ ಕಚೇರಿ ಆವರಣದ ಹೊರಗೆ ನಿಲ್ಲಿಸಲಾದ ವಾಹನವೊಂದರಲ್ಲಿ 8 ಲಕ್ಷ ರೂಪಾಯಿ ಪತ್ತೆಯಾದ ಕುರಿತು ನೊಟೀಸು ನೀಡಿದೆ ಎಂದು ಎ.ಎನ್.ಐ ವರದಿ ಮಾಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ.
ಐಟಿ ಅಧಿಕಾರಿಗಳು ತಮ್ಮ ಕಚೇರಿಗೆ ಭೇಟಿ ನೀಡಿದ್ದು, ವಾಹನವೊಂದರಿಂದ ಎಂಟು ಲಕ್ಷ ರೂಪಾಯಿ ನಗದು ಪತ್ತೆಯಾಗಿರುವ ಕುರಿತು ಮಾಹಿತಿ ನೀಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಬಿಹಾರ ಮೇಲ್ವಿಚಾರಕ ಶಕ್ತಿ ಸಿಂಹ ಗೋಹಿಲ್ ಖಚಿತಪಡಿಸಿದ್ದಾರೆ.
“ಪಕ್ಷದ ರಾಜ್ಯ ಕಚೇರಿಗೆ ಯಾರ ವಾಹನ ಬಂದಿದೆ ಮತ್ತು ಅದರೊಳಗೆ ಏನಿದೆ ಎಂಬುದು ನಮಗೆ ಹೇಗೆ ತಿಳಿಯುತ್ತದೆ ಎಂದು ನಾವು ತಂಡಕ್ಕೆ ಉತ್ತರಿಸಿದ್ದೇವೆ” ಎಂದು ಗೋಹಿಲ್ ಹೇಳಿರುವುದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ. “ಯಾರು ಬೇಕಾದರೂ ತಮ್ಮ ವಾಹನದೊಳಗೆ ಏನನ್ನು ಬೇಕಾದರೂ ಹಾಕಿಕೊಂಡು ನಮ್ಮ ಪಕ್ಷದ ಕಚೇರಿಗೆ ಬರಬಹುದು. ಅದಕ್ಕೆ ನಾವು ಜವಾಬ್ದಾರರಲ್ಲ.” ಎಂದು ಅವರು ಹೇಳಿದರು.
ಮುಂಬರುವ ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್, ರಾಷ್ಟ್ರೀಯ ಜನತಾ ದಳ, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್-ಲೆನಿನಿಸ್ಟ್), ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸಿಸ್ಟ್)ಗಳನ್ನು ಒಳಗೊಂಡಿರುವ ಗ್ರಾಂಡ್ ಅಲಯನ್ಸ್ ಗೆಲುವು ಸಾಧಿಸಲು ಸಿದ್ಧವಾಗಿರುವ ಕಾರಣ, ಒತ್ತಡವನ್ನು ಹೇರುವುದಕ್ಕಾಗಿ ವಿರೋಧ ಪಕ್ಷಗಳ ರಾಜಕೀಯ ಸಂಚು ಇದಾಗಿದೆ ಎಂದು ಕಾಂಗ್ರೆಸ್ ನಾಯಕ ಈ ಐಟಿ ದಾಳಿಯ ಕುರಿತು ಹೇಳಿದ್ದಾರೆ.
“ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿ ರಕ್ಷುವಲ್ ರಿಂದ ಇಪ್ಪತ್ತೆರಡು ಕೆಜಿ ಚಿನ್ನ, 2.5 ಕೆ.ಜಿ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ. ಐಟಿ ಇಲಾಖೆ ಯಾಕಾಗಿ ಅಲ್ಲಿಗೆ ಹೋಗುತ್ತಿಲ್ಲ” ಎಂದು ಅವರು ಪ್ರಶ್ನಿಸಿದ್ದಾರೆ.