ಕಾವೇರಿ ವಿಚಾರದಲ್ಲಿ ಕಲಾವಿದರನ್ನು ಹಿಂಸಿಸುವುದು ತಪ್ಪು : ಪ್ರಕಾಶ್ ರಾಜ್

Prasthutha|

ನಿನ್ನೆಯಷ್ಟೇ ಬೆಂಗಳೂರಿನಲ್ಲಿ ತಮ್ಮ ಸಿನಿಮಾ ಪ್ರಚಾರಕ್ಕಾಗಿ ತಮಿಳು ನಟ ಸಿದ್ಧಾರ್ಥ ಬೆಂಗಳೂರಿಗೆ ಆಗಮಿಸಿದ್ದರು. ಇಂದು ಬಿಡುಗಡೆ ಆಗಲಿರುವ ಅವರ ಚಿತ್ರಕ್ಕೆ ಅವರು ಪ್ರಚಾರದಲ್ಲಿ ತೊಡಗಿದ್ದರು. ಈ ಮಾಹಿತಿಯನ್ನು ಪಡೆದಿದ್ದ ಕನ್ನಡಪರ ಕೆಲ ಕಾರ್ಯಕರ್ತರು ಪತ್ರಿಕಾಗೋಷ್ಠಿಗೆ ಆಗಮಿಸಿ, ಸಿನಿಮಾ ಪ್ರಚಾರ ಮಾಡದಂತೆ ತಡೆದರು. ಇಂತಹ ಸಂದರ್ಭದಲ್ಲಿ ಅನ್ಯ ಭಾಷಾ ಚಿತ್ರಗಳು ರಿಲೀಸ್ ಆಗುವುದನ್ನು ವಿರೋಧಿಸಿದರು.

- Advertisement -

ಮಾಧ್ಯಮಗೋಷ್ಠಿಯ ಮಧ್ಯೆ ಆಗಮಿಸಿದ ಚಳವಳಿಗಾರರು ಸಿದ್ಧಾರ್ಥ ಅವರನ್ನು ಮಾತನಾಡದಂತೆ ತಡೆದರು. ಕೊನೆಗೆ ಧನ್ಯವಾದಗಳನ್ನು ತಿಳಿಸಿ, ಮಾಧ್ಯಮಗೋಷ್ಠಿಯಿಂದ ಹೊರ ನಡೆದರು ಸಿದ್ಧಾರ್ಥ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಈ ಘಟನೆಗೆ ಪರ ವಿರೋಧ ಕೂಡ ವ್ಯಕ್ತವಾಯಿತು.

ಈ ಘಟನೆಗೆ ಸಂಬಂಧಿಸಿದಂತೆ ಪ್ರಕಾಶ್ ರೈ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದು, ‘ಕಾವೇರಿ ನಮ್ಮದು.  ಹೌದು.. ನಮ್ಮದೇ. ಆದರೆ, ದಶಕಗಳ ಈ ಸಮಸ್ಯೆಯನ್ನು ಪರಿಹರಿಸಲಾರದ ಎಲ್ಲಾ ಅಸಮರ್ಥ ರಾಜಕೀಯ ಪಕ್ಷಗಳನ್ನು,  ನಾಯಕರನ್ನು ಪ್ರಶ್ನಿಸದೆ,  ಕೇಂದ್ರ ಸರ್ಕಾರಕ್ಕೆ ಒತ್ತಡ ತರದ ನಾಲಾಯಕ್ ಸಂಸದರನ್ನು ತರಾಟೆಗೆ ತೆಗೆದುಕೊಳ್ಳದೆ, ಹೀಗೆ ಅಸಹಾಯಕ ಜನಸಾಮಾನ್ಯರನ್ನು, ಕಲಾವಿದರನ್ನು ಹಿಂಸಿಸುವುದು ತಪ್ಪು. ಒಬ್ಬ ಕನ್ನಡಿಗನಾಗಿ ಸಹೃದಯ ಕನ್ನಡಿಗರ ಪರವಾಗಿ ಕ್ಷಮಿಸಿ’ ಎಂದು ಬರೆದುಕೊಂಡಿದ್ದಾರೆ.

- Advertisement -

ಕನ್ನಡ ಸಿನಿಮಾಗಳು ಇಂದು ಬೇರೆ ಬೇರೆ ರಾಜ್ಯಗಳಲ್ಲಿ ಬಿಡುಗಡೆ ಆಗುತ್ತಿವೆ. ಕೆಜಿಎಫ್, ಕಾಂತಾರ ರೀತಿಯ ಚಿತ್ರಗಳನ್ನು ಬೇರೆ ಭಾಷಿಕರೂ ಗೆಲ್ಲಿಸಿದ್ದಾರೆ. ನಾಳೆ ಇದೇ ರೀತಿ ಬೇರೆ ರಾಜ್ಯಗಳಲ್ಲಿ ನಮ್ಮ ಕಲಾವಿದರಿಗೆ ತೊಂದರೆಯಾದರೆ ಯಾರು ಹೊಣೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

Join Whatsapp