ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಗುಲಾಂ ನಬೀ ಆಜಾದ್ ಅವರು ಪಕ್ಷಕ್ಕೆ ರಾಜೀನಾಮೆ ನೀಡಿರುವುದು ವಿಷಾದನೀಯ ಬೆಳವಣಿಗೆ. ಸುಮಾರು ಐದು ದಶಕಗಳ ಕಾಲ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯರಾಗಿದ್ದ ಆಜಾದ್ ಪಕ್ಷವನ್ನು ಕಟ್ಟಿ ಬೆಳೆಸಲು ನೀಡಿರುವ ಕೊಡುಗೆಯನ್ನು ಸ್ಮರಿಸುತ್ತಲೇ, ಅವರ ಈ ದಿಢೀರ್ ನಿರ್ಧಾರವನ್ನು ಖಂಡಿಸಬೇಕಾಗಿ ಬಂದಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಇತ್ತೀಚಿನ ಚುನಾವಣೆಗಳಲ್ಲಿನ ಹಿನ್ನಡೆಯಿಂದಾಗಿ ಕಾಂಗ್ರೆಸ್ ಪಕ್ಷ ಕಷ್ಟದ ದಿನಗಳಲ್ಲಿದೆ. ಇದಕ್ಕಿಂತಲೂ ಮುಖ್ಯವಾಗಿ ಸರ್ವಾಧಿಕಾರಿ ಪ್ರಭುತ್ವದಿಂದಾಗಿ ದೇಶ ಕಷ್ಟದಲ್ಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಗಂಡಾಂತರದಲ್ಲಿದೆ. ಸಂವಿಧಾನದ ಒಂದೊಂದು ಸ್ತಂಭಗಳೇ ನಮ್ಮ ಕಣ್ಣೆದುರಿಗೆ ಉರುಳಿ ಬೀಳುತ್ತಿದೆ. ದೇಶಾದ್ಯಂತ ದಲಿತರು, ಹಿಂದುಳಿದ ಜಾತಿಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಟ್ಟುಕೊಂಡು ಹಲ್ಲೆ-ದೌರ್ಜನ್ಯಗಳು ನಡೆಯುತ್ತಿವೆ. ಈ ಸಮುದಾಯಗಳ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ಕಿತ್ತುಕೊಂಡು ಅವರನ್ನು ದುರ್ಬಲರನ್ನಾಗಿ ಮಾಡಲಾಗುತ್ತಿದೆ ಎಂದರು.
ಇಂತಹ ಪರಿಸ್ಥಿತಿಯಲ್ಲಿ ಗುಲಾಂ ನಬೀ ಆಜಾದ್ ಅವರಂತಹ ಅಪಾರ ಅನುಭವ ಮತ್ತು ಸಂಘಟನಾ ಸಾಮರ್ಥ್ಯ ಹೊಂದಿರುವ ನಾಯಕರ ಅಗತ್ಯ ಖಂಡಿತ ಪಕ್ಷಕ್ಕೆ ಮಾತ್ರವಲ್ಲ ದೇಶಕ್ಕೂ ಕೂಡಾ ಇದೆ ಎನ್ನುವುದನ್ನು ನಿರಾಕರಿಸಲಾಗದು. ಸುಮಾರು ಐದು ದಶಕಗಳ ಸುದೀರ್ಘ ರಾಜಕೀಯ ಜೀವನವನ್ನು ಕಾಂಗ್ರೆಸ್ ಪಕ್ಷದಲ್ಲಿ ಕಳೆದಿರುವ ಗುಲಾಂ ನಬೀ ಆಜಾದ್ ಅವರಿಗೆ ಕಾಂಗ್ರೆಸ್ ನೀಡಿರುವ ಕೊಡುಗೆ ಅಪಾರವಾದುದು, ಅದೇ ರೀತಿ ಕಾಂಗ್ರೆಸ್ ಪಕ್ಷಕ್ಕೂ ಅವರ ಕೊಡುಗೆಯನ್ನು ಅಲ್ಲಗಳೆಯಲಾಗದು ಎಂದು ತಿಳಿಸಿದರು.
ಇಂದಿರಾಗಾಂಧಿ, ರಾಜೀವ್ ಗಾಂಧಿ, ಪಿ.ವಿ.ನರಸಿಂಹರಾವ್ ಮತ್ತು ಮನಮೋಹನ್ ಸಿಂಗ್ ಸೇರಿದಂತೆ ನಾಲ್ವರು ಪ್ರಧಾನಿಗಳ ಸಂಪುಟದಲ್ಲಿ ದೀರ್ಘಕಾಲ ಸಚಿವರಾಗಿದ್ದ ಆಜಾದ್ ಅವರು ಪಕ್ಷದ ವಿವಿಧ ಘಟಕಗಳಲ್ಲಿ ಪ್ರಮುಖ ಪದಾಧಿಕಾರಿಯಾಗಿ, ನೀತಿ-ನಿರ್ಧಾರಗಳನ್ನು ಕೈಗೊಳ್ಳುವ ಸಂಸದೀಯ ಮಂಡಳಿ, ಕಾರ್ಯಕಾರಿ ಸಮಿತಿ ಮತ್ತು ಚುನಾವಣಾ ಸಮಿತಿಗಳಲ್ಲಿ ಸದಸ್ಯರಾಗಿ ಕೆಲಸ ಮಾಡುವ ಅವಕಾಶವನ್ನು ಪಡೆದಿದ್ದರು. ಇದೇ ರೀತಿ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮುಖ್ಯಮಂತ್ರಿಗಳಾಗಿದ್ದವರು ಮತ್ತು ಏಳು ವರ್ಷಗಳ ಕಾಲ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು ಎಂದರು.
ಒಬ್ಬ ಸಾಮಾನ್ಯ ಕಾರ್ಯಕರ್ತ ಪಕ್ಷದಿಂದ ಬಯಸುವ ಎಲ್ಲ ಹುದ್ದೆ ಮತ್ತು ಅವಕಾಶಗಳನ್ನು ಆಜಾದ್ ಅವರು ಪಡೆದಿದ್ದಾರೆ. ಅವರಷ್ಟೇ ದೀರ್ಘಕಾಲ ಕಾಂಗ್ರೆಸ್ ಪಕ್ಷದಲ್ಲಿದ್ದರೂ ಕೂಡಾ ಇಷ್ಟೊಂದು ಅವಕಾಶಗಳನ್ನು ಪಡೆದಿರುವುದು ಅಪರೂಪ. ಕಾಂಗ್ರೆಸ್ ಪಕ್ಷ ಖಂಡಿತ ಈಗ ಕಷ್ಟದ ಕಾಲದಲ್ಲಿದೆ. ಪಕ್ಷದ ಒಳ್ಳೆಯ ದಿನಗಳಲ್ಲಿ ಅದರ ಜೊತೆ ಗುರುತಿಸಿಕೊಂಡು ಎಲ್ಲ ಅವಕಾಶಗಳನ್ನು ಪಡೆದ ಯಾವನೇ ವ್ಯಕ್ತಿ ಪಕ್ಷದ ಕಷ್ಟದ ಕಾಲದಲ್ಲಿ ಅದರ ಜೊತೆಗೆ ನಿಲ್ಲಬೇಕಾಗಿರುವುದು ಕರ್ತವ್ಯವಾಗಿದೆ. ಆದರೆ ಆಜಾದ್ ಅವರು ಪಕ್ಷದ ಕಷ್ಟದ ಕಾಲದಲ್ಲಿಯೇ ಕುಂಟುನೆಪಗಳನ್ನು ಮುಂದಿಟ್ಟು ಪಕ್ಷವನ್ನು ತ್ಯಜಿಸಿ ಹೋಗಿರುವುದು ಅತ್ಯಂತ ದುರದೃಷ್ಟಕರ ಬೆಳವಣಿಗೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವನ್ನು ತೊರೆದು ಅವರ ಪಾಡಿಗೆ ಅವರು ಹೋಗಿ ಬಿಟ್ಟಿದ್ದರೆ ಅವರಿಗೆ ಶುಭಕೋರಿ ಬೀಳ್ಕೊಡಬಹುದಿತ್ತೇನೋ? ಆದರೆ ಅವರು ತಮ್ಮ ನಿರ್ಗಮನದ ಜೊತೆ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರಾದ ರಾಹುಲ್ ಗಾಂಧಿ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ. ಇದು ಅತ್ಯಂತ ಖಂಡನೀಯ, ಇದನ್ನು ಕಾಂಗ್ರೆಸ್ ಪಕ್ಷದಲ್ಲಿರುವ ಯಾರೂ ಒಪ್ಪಲು ಸಾಧ್ಯವೇ ಇಲ್ಲ ಎಂದರು.
2004ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದಾಗ ಸೋನಿಯಾ ಗಾಂಧಿಯವರು ಮನಸ್ಸು ಮಾಡಿದ್ದರೆ ಸುಲಭದಲ್ಲಿ ಪ್ರಧಾನಿಯಾಗಬಹುದಿತ್ತು. ಆದರೆ ಅವರು ಮನೆ ಬಾಗಿಲಿಗೆ ಬಂದಿದ್ದ ಅವಕಾಶವನ್ನು ತ್ಯಾಗ ಮಾಡಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಮಾಡಿದರು. ಇದು ಭಾರತದ ರಾಜಕೀಯ ಇತಿಹಾಸದಲ್ಲಿ ಮಾತ್ರವಲ್ಲ ವಿಶ್ವದ ಇತಿಹಾಸದಲ್ಲಿಯೇ ಅಪರೂಪದ ಘಟನೆ. 2004ರಲ್ಲಿಯೇ ಮೊದಲ ಬಾರಿ ಲೋಕಸಭೆ ಪ್ರವೇಶಿಸಿದ್ದ ರಾಹುಲ್ ಗಾಂಧಿಯವರು ಇಚ್ಛೆ ಪಟ್ಟಿದ್ದರೆ ಕೇಂದ್ರದಲ್ಲಿ ಸಚಿವರಾಗಬಹುದಿತ್ತು. ಅವರನ್ನು ಯಾರೂ ಬೇಡ ಎಂದು ಹೇಳುತ್ತಿರಲಿಲ್ಲ. ಆದರೆ ಅಧಿಕಾರಕ್ಕಾಗಿ ಆಸೆ ಪಡದೆ ಪಕ್ಷಕ್ಕಾಗಿ ದುಡಿಯುವ ನಿರ್ಧಾರ ಕೈಗೊಂಡ ರಾಹುಲ್ ಅವರು ಹತ್ತು ವರ್ಷಗಳ ಯುಪಿಎ ಸರ್ಕಾರದ ಕಾಲದಲ್ಲಿ ಸಚಿವರಾಗದೆ ಪಕ್ಷದ ಬಲವರ್ಧನೆಗೆ ದುಡಿದದ್ದನ್ನು ದೇಶ ನೋಡಿದೆ ಎಂದರು.
ರಾಹುಲ್ ಗಾಂಧಿಯವರು ತಾವು ಸಚಿವರಾಗದೆ, ಹಿರಿಯರಾದ ಗುಲಾಂ ನಭಿ ಆಜಾದ್ ಅವರಂತಹವರಿಗೆ ಅವಕಾಶವನ್ನು ಮಾಡಿಕೊಟ್ಟಿದ್ದರು. ಈಗ ಇದೇ ಆಜಾದ್ ಅವರು ರಾಹುಲ್ ಗಾಂಧಿಯವರ ಮೇಲೆ ವೈಯಕ್ತಿಕ ಮಟ್ಟದ ದಾಳಿಗಿಳಿದಿರುವುದು ಖಂಡನೀಯ. Success has many fathers and Failures is orphan ಎನ್ನುವ ಮಾತಿದೆ. ಗೆಲುವಿಗೆ ಹಲವಾರು ತಂದೆಗಳಿರುತ್ತಾರೆ, ಸೋಲು ಅನಾಥ. ಕಾಂಗ್ರೆಸ್ ಪಕ್ಷ ಗೆಲುವಿನ ಹಾದಿಯಲ್ಲಿರುವಾಗ ಸರ್ಕಾರ ಮತ್ತು ಪಕ್ಷದಲ್ಲಿ ಅಧಿಕಾರವನ್ನು ಅನುಭವಿಸಿದ್ದ ಗುಲಾಂ ನಬೀ ಆಜಾದ್ ಅವರು ಈಗ ಪಕ್ಷ ಕಷ್ಟದಲ್ಲಿರುವಾಗ ಅದರ ದೂಷಣೆಗೆ ಇಳಿದಿರುವುದು ಅವರ ವಯಸ್ಸು ಮತ್ತು ಅನುಭವಕ್ಕೆ ತಕ್ಕುದಾದ ನಡೆ ಅಲ್ಲ ಎಂದರು.
ಅಜ್ಜ ಪಂಡಿತ ಜವಾಹರಲಾಲ್ ನೆಹರೂ ಅವರಂತೆ ಕಟ್ಟಾ ಪ್ರಜಾಪ್ರಭುತ್ವವಾದಿಯಾಗಿರುವ ರಾಹುಲ್ ಗಾಂಧಿಯವರು ಪಕ್ಷದೊಳಗೆ ಆಂತರಿಕ ಪ್ರಜಾಪ್ರಭುತ್ವ ಇರಬೇಕೆಂದು ಪ್ರತಿಪಾದಿಸುತ್ತಾ ಬಂದಿದ್ದಾರೆ. ಪಕ್ಷಕ್ಕೆ ಸಂಬಂಧಿಸಿದ ನಿರ್ಧಾರವನ್ನು ಚರ್ಚೆ-ಮಾತುಕತೆಯ ಮೂಲಕ ಅವರು ಎಲ್ಲರ ಅಭಿಪ್ರಾಯವನ್ನು ಪಡೆದು ಕೈಗೊಳ್ಳುತ್ತಾ ಬಂದಿದ್ದಾರೆ. ಯುವಕಾಂಗ್ರೆಸ್ ಪಕ್ಷದ ಅಧ್ಯಕ್ಷರನ್ನು ಚುನಾವಣೆ ಮೂಲಕ ಆಯ್ಕೆ ಮಾಡುವ ನಿರ್ಧಾರವೇ ಅವರ ಪ್ರಜಾತಾಂತ್ರಿಕ ನಡವಳಿಕೆಗೆ ಸಾಕ್ಷಿ. ಬದಲಾಗಿರುವ ಕಾಲ ಮತ್ತು ತಲೆಮಾರಿಗೆ ಪ್ರಸ್ತುತವಾಗುವ ರೀತಿಯಲ್ಲಿ ಪಕ್ಷವನ್ನು ಕಟ್ಟುವ ಪ್ರಯತ್ನವನ್ನು ರಾಹುಲ್ ಮಾಡುತ್ತಾ ಬಂದಿದ್ದಾರೆ. ಪಕ್ಷಕ್ಕೆ ಹೊಸರಕ್ತ ತುಂಬುವ ಪ್ರಯತ್ನದಲ್ಲಿ ಅನಿವಾರ್ಯವಾಗಿ ಹಳೆಯ ತಲೆಗಳನ್ನು ಬದಲಾವಣೆ ಮಾಡುವುದು ಅನಿವಾರ್ಯವಾಗಿತ್ತು. ಈ ಬದಲಾವಣೆ ಕೂಡಾ ಅವರ ವೈಯಕ್ತಿಕ ನಿರ್ಧಾರವಾಗದೆ ಪಕ್ಷದ ಒಟ್ಟು ನಿರ್ಧಾರವಾಗಿತ್ತು ಎನ್ನುವುದನ್ನು ಪಕ್ಷದೊಳಗಿನ ನಾಯಕರೆಲ್ಲರೂ ಬಲ್ಲರು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗುಲಾಂ ನಬೀ ಆಜಾದ್ ಅವರು ರಾಜೀನಾಮೆ ನೀಡಿರುವ ಹೊತ್ತು ಮತ್ತು ಅವರ ರಾಜೀನಾಮೆ ಪತ್ರದ ಒಕ್ಕಣೆಯನ್ನು ನೋಡಿದರೆ ತಮಗೆ ಆಗಿರುವ ನೋವನ್ನು ವ್ಯಕ್ತಪಡಿಸುವ ಸದುದ್ದೇಶಕ್ಕಿಂತಲೂ, ನಮ್ಮ ಪ್ರಮುಖ ಎದುರಾಳಿ ಪಕ್ಷವನ್ನು ಖುಷಿಪಡಿಸುವ ದುರುದ್ದೇಶ ಇದ್ದಂತೆ ಕಾಣುತ್ತಿದೆ. ಕೋಟ್ಯಂತರ ಸಂಖ್ಯೆಯ ಕಾರ್ಯಕರ್ತರ ಬಲವನ್ನು ಹೊಂದಿರುವ ಕಾಂಗ್ರೆಸ್ ಪಕ್ಷದ ಮೇಲೆ ಒಬ್ಬ ನಾಯಕರ ನಿರ್ಗಮನ ಯಾವ ಪರಿಣಾಮವನ್ನು ಬೀರದು. ಆಡಳಿತ ಪಕ್ಷ ಸರ್ವಾಧಿಕಾರಿಯ ರೂಪ ಪಡೆದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಕೆಡವಿ ಹಾಕಲು ಹೊರಟಿರುವ ಈ ದುರಿತದ ಕಾಲದಲ್ಲಿ ದೇಶವನ್ನು ಉಳಿಸುವ ದೊಡ್ಡ ಜವಾಬ್ದಾರಿ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಮೇಲಿದೆ. ಒಬ್ಬ ವ್ಯಕ್ತಿಯ ನಿರ್ಗಮನದಿಂದ ವಿಚಲಿತರಾಗದೆ ದೇಶ ಉಳಿಸುವ ಕರ್ತವ್ಯವನ್ನು ನಾವೆಲ್ಲರೂ ಜವಾಬ್ದಾರಿಯಿಂದ, ಸಂಘಟಿತರಾಗಿ ನಿಭಾಯಿಸಲು ಕಾಂಗ್ರೆಸ್ ಪಕ್ಷದ ಎಲ್ಲ ನಾಯಕರು ಮತ್ತು ಕಾರ್ಯಕರ್ತರು ಕಟಿಬದ್ಧರಾಗಬೇಕೆಂದು ಮನವಿ ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.