ಬೆಂಗಳೂರು-ಮೈಸೂರು ಎಕ್ಸ್​​ಪ್ರೆಸ್​​ ವೇಯಲ್ಲಿ ಸಮಸ್ಯೆ ಇರುವುದು ನಿಜ: ಪ್ರತಾಪ್ ಸಿಂಹ

Prasthutha|

ಮೈಸೂರು: ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇಯಲ್ಲಿ ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣ ಪ್ರದೇಶದಲ್ಲಿ ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳಿವೆ. ಇದಕ್ಕೆ ದೋಷಯುಕ್ತ (DPR) ಕಾರಣ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಒಪ್ಪಿಕೊಂಡಿದ್ದಾರೆ. ಎಕ್ಸ್‌ಪ್ರೆಸ್‌ ವೇಗೆ ಸಂಬಂಧಿಸಿದ ಈ ಎಲ್ಲಾ ಸಮಸ್ಯೆಗಳನ್ನು ಎಂಟರಿಂದ 10 ತಿಂಗಳಲ್ಲಿ ಸರಿಪಡಿಸಲಿದ್ದೇವೆ ಎಂದು ಅವರು ಭರವಸೆ ನೀಡಿದ್ದಾರೆ.

- Advertisement -

ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) 480 ಕೋಟಿ ರೂಪಾಯಿ ವೆಚ್ಚದಲ್ಲಿ ಇನ್ನೂ ಕೆಲವೆಡೆ ಭೂಸ್ವಾಧೀನಪಡಿಸಿಕೊಳ್ಳುತ್ತಿದೆ. ಎಕ್ಸ್‌ಪ್ರೆಸ್‌ ವೇ ಸಂಬಂಧಿತ ಇನ್ನೂ ಕೆಲವು ಕಾಮಗಾರಿಗಳಿಗೆ 1,800 ಕೋಟಿ ರೂ. ವೆಚ್ಚ ಮಾಡುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಈ ಎಲ್ಲಾ ಪಟ್ಟಣಗಳ ಬಳಿ ಸರಿಯಾದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ನಿರ್ಮಿಸಲಿದೆ. ವಿಶ್ರಾಂತಿ ಪ್ರದೇಶ, ಮೈಸೂರು ರಿಂಗ್ ರಸ್ತೆ (ಮಣಿಪಾಲ್ ಆಸ್ಪತ್ರೆ ಜಂಕ್ಷನ್) ಬಳಿ ಫ್ಲೈಓವರ್, ಕುಂಬಳಗೋಡು ಬಳಿ ಅಂಡರ್‌ಪಾಸ್ ಮತ್ತು ಮೇಲ್ಸೇತುವೆ ನಿರ್ಮಾಣ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.