ಮಂಗಳೂರು: ನ್ಯಾಯದ ಪರವಾಗಿ, ಶೋಷಿತರ ಪರವಾಗಿ ಧ್ವನಿ ಎತ್ತುವ ಗಟ್ಟಿ ನಿಲುವಿನ ಎಸ್’ಡಿಪಿಐ ಶಾಸಕರು ವಿಧಾನಸಭೆಯಲ್ಲಿರಬೇಕಾದುದು ಕಾಲದ ಬೇಡಿಕೆಯಾಗಿದೆ ಎಂದು ಎಸ್ ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಹೇಳಿದ್ದಾರೆ.
ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಎಸ್’ಡಿಪಿಐ ಸಾರ್ವಜನಿಕ ಸಭೆ ಹಾಗೂ ಪಕ್ಷದ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ನಾಮಪತ್ರ ಸಲ್ಲಿಕೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಮಂಗಳೂರು ಕ್ಷೇತ್ರದಲ್ಲಿ ಬಹಳಷ್ಟು ವರ್ಷಗಳಿಂದ ಶಾಸಕರಾಗಿ ಸಚಿವರಾಗಿರುವ ಯು.ಟಿ.ಖಾದರ್ ಅವರು ನ್ಯಾಯದ ಪರವಾಗಿ ನಿಲ್ಲದೆ, ನ್ಯಾಯಕ್ಕಾಗಿ ಧ್ವನಿ ಎತ್ತದೆ, ತಾರತಮ್ಯ ನೀತಿಯ ವಿರುದ್ಧ ಮಾತನಾಡದೆ, ನ್ಯಾಯ ವಂಚಿತರ ಪರವಾಗಿ ಧ್ವನಿ ಎತ್ತದೆ ಜನತೆಯನ್ನು ವಂಚಿಸಿದ್ದಾರೆ. ದೈನಂದಿನ ಸಮಸ್ಯೆಗಳ ಪರಿಹಾರಕ್ಕೂ ಅವರು ಯಾವುದೇ ಪ್ರಯತ್ನ ಮಾಡಿಲ್ಲ. ಹಾಗಾಗಿ ಉಳ್ಳಾಲದ ಜನತೆ ಈ ಬಾರಿ ರಿಯಾಝ್ ಫರಂಗಿಪೇಟೆಯವರನ್ನು ವಿಧಾನಸಭೆಗೆ ಕಳುಹಿಸಲು ಮುಂದಾಗಿದ್ದಾರೆ ಎಂದರು.
ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ ಹಾಗೂ ನ್ಯಾಯ ಕೇಳಲು ಬಂದಾಗ ನಿರಾಶಾದಾಯಕವಾಗಿ ಉತ್ತರ ನೀಡಿದ ಹಾಲಿ ಶಾಸಕರನ್ನು ಮನೆಗೆ ಕಳುಹಿಸಬೇಕಾಗಿದೆ. ವಿಧಾನಸಭೆಗೆ ನ್ಯಾಯದ ಪರವಾಗಿ ಧ್ವನಿ ಎತ್ತುವವರನ್ನು ಕಳುಹಿಸಬೇಕಾಗಿದೆ ಎಂದು ಹೇಳಿದರು.
ಯಾರನ್ನೋ ಸೋಲಿಸಬೇಕು ಅಥವಾ ಸೇಡಿನ ರಾಜಕಾರಣ ಮಾಡಬೇಕು ಎಂಬ ಉದ್ದೇಶದಿಂದ ಎಸ್’ಡಿಪಿಐ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಬದಲಾಗಿ ಯಾರ ಹಕ್ಕನ್ನೂ ಕಸಿಯಲ್ಪಡಬಾರದು. ಒಂದು ವೇಳೆ ಯಾರಾದರೂ ಹಕ್ಕುಗಳನ್ನು ಕಸಿದರೆ ಅದರ ವಿರುದ್ಧ ದೃಢವಾದ ಹೋರಾಟ ಮಾಡಬೇಕು ಎಂಬುದೇ ನಮ್ಮ ಗುರಿಯಾಗಿದೆ. ನ್ಯಾಯದ ಧ್ವಜವಾಹಕರಾಗಿರಿ ಎಂಬ ಸಿದ್ಧಾಂತದ ಮೇಲೆ ನಾವು ದೃಢವಾಗಿದ್ದೇವೆ ಎಂದರು.
ರಾಜ್ಯದಲ್ಲಿ ಪಕ್ಷಾಂತರ ಪರ್ವ ಆರಂಭಗೊಂಡಿದೆ. ಈ ಬಾರಿಯೂ ಕುದುರೆ ವ್ಯಾಪಾರ ನಡೆಯಲಿದೆ. ಸೋ ಕಾಲ್ಡ್ ಜಾತ್ಯತೀತವಾದಿಗಳು ಈ ಬಾರಿಯೂ ಮುಸ್ಲಿಮರ ಮತಗಳನ್ನು ಪಡೆದು ವಂಚಿಸಲಿದ್ದಾರೆ ಎಂದು ಅವರು ಎಚ್ಚರಿಕೆ ನೀಡಿದರು.
ಪಕ್ಷದ ಅಭ್ಯರ್ಥಿ ರಿಯಾಝ್ ಫರಂಗಿಪೇಟೆ ಮಾತನಾಡಿ, ನಮ್ಮ ಹೋರಾಟದಿಂದ ಕೆಲವು ಸೋ ಕೋಲ್ಡ್, ಪಟ್ಟ ಭದ್ರ ಹಿತಾಸಕ್ತಿಗಳಿಗೆ ಬಹಳ ನೋವು ಉಂಟಾಗುತ್ತಿದೆ. ಆದ್ದರಿಂದ ನಮ್ಮ ಹೋರಾಟವನ್ನು ಹತ್ತಿಕ್ಕಬೇಕು ಎಂದು ಪ್ರಯತ್ನ ಪಟ್ಟಿದ್ದಾರೆ. ಈಗಾಗಲೇ ಅವರಿಗೆ ಸೋಲುವ ಭೀತಿ ಶುರುವಾಗಿದೆ. ಆದ್ದರಿಂದಲೇ ನಾವು ಕಾರ್ಯಕ್ರಮ ನಡೆಸಬಾರದು ಎಂದು ಈ ಕಾರ್ಯಕ್ರಮ ನಡೆಯಬೇಕಾಗಿದ್ದ ಯುನಿಟ್ ಹಾಲ್’ನ ಮಾಲೀಕರಿಗೆ ಬೆದರಿಸಿ ಸಭಾಂಗಣ ನೀಡದಂತೆ ಮಾಡಿದ್ದಾರೆ ಎಂದು ನೇರ ಆರೋಪ ಮಾಡಿದರು.
ದಮನಿತರ ಹಕ್ಕುಗಳನ್ನು ನಿರಾಕರಿಸುವಾಗ, ಜಾತ್ಯತೀತ ಪ್ರಜಾಪ್ರಭುತ್ವ ಮೌಲ್ಯಗಳನ್ನು ಬಿಜೆಪಿ ಮತ್ತು ಸಂಘಪರಿವಾರ ನಾಶಪಡಿಸುತ್ತಿರುವಾಗ ಜಾತ್ಯತೀತ ಪಕ್ಷಗಳು ಇದರ ವಿರುದ್ಧ ಧ್ವನಿ ಎತ್ತಿ ಬೀದಿಗಿಳಿಯಬೇಕಾಗಿತ್ತು. ವಿಧಾನಸಭೆಯಲ್ಲಿ ಧರಣಿ ನಡೆಸಬೇಕಾಗಿತ್ತು. ಆದರೆ ಇಂತಹ ಸಂದರ್ಭದಲ್ಲಿ ಧ್ವನಿ ಎತ್ತಲು ಬೆನ್ನೆಲುಬು ಇಲ್ಲದ ಜಾತ್ಯತೀತ ಎಂದು ಹೇಳಿಕೊಳ್ಳುವ ಪಕ್ಷಗಳ ಶಾಸಕರು ಬಿಜೆಪಿಯ ಅಜೆಂಡಾಗಳಿಗೆ ಪೂರಕವಾಗಿ ಕೋಮುವಾದಿ ಸಿದ್ಧಾಂತಕ್ಕೆ ಬೆಂಬಲ ನೀಡಿದ್ದಾರೆ ಎಂದು ರಿಯಾಝ್ ಫರಂಗಿಪೇಟೆ ಆರೋಪಿಸಿದರು.
ಬಿಜೆಪಿಯಲ್ಲಿ ಟಿಕೆಟ್ ಪಡೆದವರಲ್ಲಿ ಶೇಕಡಾ 94ರಷ್ಟು ಆರೆಸ್ಸೆಸ್ ಹಿನ್ನೆಲೆಯವರಾಗಿದ್ದಾರೆ. ಇದೇ ವೇಳೆ ಕಾಂಗ್ರೆಸ್ ನಲ್ಲಿ ಶೇಕಡಾ 80ರಷ್ಟು ಮೂಲ ಬಿಜೆಪಿಗರಿಗೆ ಟಿಕೆಟ್ ನೀಡಲಾಗಿದೆ. ಇವೆರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು, ಜಂಡಾ ಮಾತ್ರ ಬೇರೆ ಅಜೆಂಡಾ ಒಂದೇ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಆಡಳಿತವಿದ್ದಾಗ ಜಿಲ್ಲೆಯ ಅಲ್ಪಸಂಖ್ಯಾತರು ಎದುರಿಸುತ್ತಿದ್ದ ಸಮಸ್ಯೆ, ತಲ್ಲಣಗಳನ್ನು ಸಾಕ್ಷಿ, ಪೇಪರ್ ಕಟ್ಟಿಂಗ್, ಎಫ್ ಐಆರ್ ಪ್ರತಿಗಳೊಂದಿಗೆ ದೊಡ್ಡ ಹೊತ್ತಿಗೆ ಮಾಡಿ 189 ಶಾಸಕರಿಗೆ ನೀಡಿ ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಲು ಮನವಿ ಮಾಡಿದ್ದೆವು. ಆದರೆ ಎಚ್.ಡಿ.ಕುಮಾರಸ್ವಾಮಿ ಮಾತ್ರ ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಿದರೇ ಹೊರತು ಉಳಿದ ಯಾವ ಶಾಸಕರೂ ಈ ಬಗ್ಗೆ ಚಕಾರವೆತ್ತಲಿಲ್ಲ. ಈ ಬಗ್ಗೆ ನಾವು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸಮುದಾಯದ ಸಮಸ್ಯೆಗಳ ಬಗ್ಗೆ ಗಮನ ಸೆಳೆದಾಗ, ನಾಲ್ವರು ಅಲ್ಪಸಂಖ್ಯಾತ ಶಾಸಕರು ನಿಮ್ಮ ಜಿಲ್ಲೆಯಲ್ಲಿ ಇದ್ದಾರೆ, ಅವರು ಅದರ ಬಗ್ಗೆ ಧ್ವನಿ ಎತ್ತಬೇಕು, ಅವರು ಧ್ವನಿ ಎತ್ತದಿದ್ದರೆ ಅದು ನಿಮ್ಮ ನಾಯಕತ್ವದ ಕೊರತೆ ಎಂದು ಸಿದ್ದರಾಮಯ್ಯ ಹೇಳಿದರು. ಸಮುದಾಯದ ಬಗ್ಗೆ ಚಿಂತನೆ ಇಲ್ಲದ ಇಂತಹ ಶಾಸಕರಿಂದ ಯಾವ ನಿರೀಕ್ಷೆ ಇಟ್ಟುಕೊಳ್ಳಬಹುದು. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ಇಂತಹ ಶಾಸಕರನ್ನು ಮನೆಗೆ ಕಳುಹಿಸಬೇಕಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿಪಿಐ ಉಳ್ಳಾಲ ಕ್ಷೇತ್ರದ ಅಧ್ಯಕ್ಷ ಇರ್ಷಾದ್ ಅಜ್ಜಿನಡ್ಕ ವಹಿಸಿದ್ದರು. ಪಕ್ಷದ ರಾಷ್ಟ್ರೀಯ ವೀಕ್ಷಕ ಎನ್.ಯು ಅಬ್ದುಲ್ ಸಲಾಂ, ಪಕ್ಷದ ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ, ಮುಖಂಡರಾದ ನವಾಝ್ ಉಳ್ಳಾಲ್, ಜಿಲ್ಲಾ ಉಪಾಧ್ಯಕ್ಷೆ ಮಿಸ್ರಿಯಾ ಕಣ್ಣೂರು, ಪಕ್ಷದ ರಾಜ್ಯ ನಾಯಕಿ ಶಾಹಿದಾ ತಸ್ನೀಮ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು, ಮುಖಂಡರಾದ ಸುಹೈಲ್ ಖಾನ್, ರವಿ ಕುಟಿನ್ಹಾ, ಉಬೈದ್ ಅಮ್ಮೆಂಬಲ, ಸಲಾಂ ವಿದ್ಯಾನಗರ, ಕಮರುನ್ನೀಸಾ, ಅನ್ಸಾರ್ ಇನೋಳಿ, ಎಸ್.ಎನ್.ಇಕ್ಬಾಲ್, ಸಂತೋಷ್ ಕಿನ್ಯ, ಅಬ್ದುಲ್ ರಹ್ಮಾನ್, ಹಮೀದ್ ಮಂಜೇಶ್ವರ, ಕಮರುದ್ದಿನ್ ಎಂ.ಕೆ , ಅಬ್ಬಾಸ್, ಅಬ್ದುರ್ರಹ್ಮಾನ್ ಮದನಿನಗರ, ಮೊಯ್ದೀನ್ ಎಸ್.ಬಿ. ಕೋಟೆಕಾರ್, ಎಸ್.ಎಂ.ಬಶೀರ್, ಇಂತಿಯಾಝ್ ಕಿನ್ಯ ಮತ್ತಿತರರು ಉಪಸ್ಥಿತರಿದ್ದರು.
ಬಳಿಕ ರಿಯಾಝ್ ಫರಂಗಿಪೇಟೆ ಬೃಹತ್ ಮೆರವಣಿಗೆಯಲ್ಲಿ ಸಾಗಿ ನಾಮಪತ್ರ ಸಲ್ಲಿಸಿದರು.