ಮಂಜೇಶ್ವರ : ಮಂಜೇಶ್ವರದ ಸರಕಾರಿ ಆಸ್ಪತ್ರೆಯಲ್ಲಿ ದಂತ ಚಿಕಿತ್ಸಾ ಘಟಕ ಹಾಗೂ ಲ್ಯಾಬ್ ನಿಷ್ಕ್ರಿಯಗೊಂಡು ವರ್ಷಗಳೇ ಕಳೆದರೂ ಈ ತನಕ ಸಕ್ರಿಯಗೊಳ್ಳದೇ ಇರುವುದು ಇಲ್ಲಿಗೆ ದಿನನಿತ್ಯ ಆಗಮಿಸುತ್ತಿರುವ ರೋಗಿಗಳಿಗೆ ಶಾಪವಾಗಿ ಪರಿಣಮಿಸಿರುವುದಾಗಿ ಮಂಜೇಶ್ವರ ಎಸ್ಡಿಪಿಐ ನೇತಾರರು ಆರೋಪಿಸಿದ್ದಾರೆ.
ದಂತ ವೈದ್ಯರನ್ನು ಯಾವುದೇ ಮುನ್ಸೂಚನೆ ಇಲ್ಲದೆ ದಿಢೀರ್ ವರ್ಗಾವಣೆಗೊಳಿಸಿದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಅದಕ್ಕೆ ಪರ್ಯಾಯ ವ್ಯವಸ್ತೆಯನ್ನು ಕಲ್ಪಿಸದೆ ಅಧಿಕೃತರು ಮೌನವನ್ನು ಪಾಲಿಸಿರುವುದು ಇಲ್ಲಿಗೆ ಪ್ರತಿದಿನ ಆಗಮಿಸುತ್ತಿರುವ ರೋಗಿಗಳನ್ನು ಸಂಕಷ್ಟಕ್ಕೀಡು ಮಾಡಿರುವುದಾಗಿ ನೇತಾರರು ಆರೋಪಿಸಿದ್ದಾರೆ.
ಆರೋಗ್ಯ ಇಲಾಖೆ ಹಾಗೂ ಮಂಜೇಶ್ವರ ಬ್ಲಾಕ್ ಪಂಚಾಯತ್ ನೆರವಿನಿಂದ ಆಸ್ಪತ್ರೆಯಲ್ಲಿ ಒಂದೇ ಕೊಠಡಿಯಲ್ಲಿ ಉಪಕರಣಗಳನ್ನು ಖರೀದಿಸಿ ದಂತ ಚಿಕಿತ್ಸಾ ವಿಭಾಗ ಆರಂಭಿಸಲಾಗಿದ್ದು, ದಂತ ವೈದ್ಯರ ವರ್ಗಾವಣೆ ಬಳಿಕ ಕ್ಲಿನಿಕ್ ಮುಚ್ಚಲಾಗಿದೆ. ಬದಲಿಗೆ ವೈದ್ಯರನ್ನು ನೇಮಿಸದೆ ದಂತ ಸೇವೆಗಳು ಲಭ್ಯವಿಲ್ಲದ ಕಾರಣ,ಅನೇಕ ರೋಗಿಗಳು ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ಹವಾಮಾನ ಬದಲಾವಣೆಯಿಂದ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರಕಾರಿ ಆಸ್ಪತ್ರೆಗೆ ದಿನನಿತ್ಯ ನೂರಾರು ಮಂದಿ ಆಗಮಿಸುತ್ತಿದ್ದರೂ ಯಾವುದೇ ಸೇವೆಗಳು ಲಭಿಸದೆ ಹಿಂತಿರುಗುತಿದ್ದಾರೆ. ತುರ್ತಾಗಿ ದಿನಕೂಲಿ ಆಧಾರದ ಮೇಲೆ ಯಾರನ್ನಾದರೂ ನೇಮಿಸಿಕೊಳ್ಳಬೇಕಾಗಿದೆ. ಖಾಲಿ ಇರುವ ಆರೋಗ್ಯ ಕಾರ್ಯಕರ್ತರ ಹುದ್ದೆಗಳನ್ನು ಭರ್ತಿ ಮಾಡಬೇಕು, ತುರ್ತು ಉದ್ದೇಶಕ್ಕೆ ಬಳಸಲು ಸ್ವಂತ ವಾಹನ ಕೂಡಾ ಇಲ್ಲದ ಸ್ಥಿತಿ ಎದುರಾಗಿದೆ.
ಆಸ್ಪತ್ರೆಗೆ ಬೇಟಿ ನೀಡಿ ಸ್ಥಿತಿಗತಿಗಳನ್ನು ಅವಲೋಕಿಸಿ ಸಿಎಚ್‌ಸಿ ಅಧೀಕ್ಷಕರನ್ನು ಭೇಟಿ ಮಾಡಿದ ಎಸ್‌ಡಿಪಿಐ ಮಂಜೇಶ್ವರ ಮಂಡಲ ಸಮಿತಿ ಡೆಂಟಲ್ ಒಪಿ ಘಟಕಕ್ಕೆ ಕೂಡಲೇ ವೈದ್ಯರನ್ನು ನೇಮಕಗೊಳಿಸಬೇಕು ಜೊತೆಯಾಗಿ ಲ್ಯಾಬ್ ಟೆಕ್ನಿಷಿಯನ್ ನೇಮಕವೂ ಶೀಘ್ರದಲ್ಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಜನರನ್ನು ಒಗ್ಗೂಡಿಸಿ ಪ್ರತಿಭಟನೆಗೆ ಮುಂದಾಗಲಿರುವುದಾಗಿ ಎಸ್ ಡಿ ಪಿ ಐ ಮಂಜೇಶ್ವರ ಮಂಡಲ ಅಧ್ಯಕ್ಷರಾದ ಅಶ್ರಫ್ ಬಡಾಜೆ ಎಚ್ಚರಿಕೆಯ ಕರೆಗಂಟೆ ಬಾರಿಸಿದ್ದಾರೆ.