ಕಾಲಮಿತಿಯಲ್ಲಿ ವಸತಿ ಯೋಜನೆಗಳ ಅನುಷ್ಠಾನಕ್ಕೆ ಸಚಿವ ಜಮೀರ್ ಅಹ್ಮದ್ ಸೂಚನೆ

Prasthutha|

ಬೆಂಗಳೂರು : ಬಡವರಿಗಾಗಿ ರೂಪಿಸಿರುವ ವಸತಿ ಯೋಜನೆಗಳನ್ನು ಪೂರ್ಣಗೊಳಿಸಲು ಕಾಲಮಿತಿ ಹಾಕಿಕೊಳ್ಳಲು ವಸತಿ ಸಚಿವ ಜಮೀರ್ ಅಹ್ಮದ್ ಗಡುವು ನೀಡಿದ್ದಾರೆ.
ವಸತಿ ಇಲಾಖೆ ವ್ಯಾಪ್ತಿಗೆ ಬರುವ ರಾಜೀವ್ ಗಾಂಧಿ ವಸತಿ ನಿಗಮದ ಪ್ರಗತಿ ಪರಿಶೀಲನೆ ನಡೆಸಿದ ಅವರು ಒಂದೊಂದು ಯೋಜನೆ ವರ್ಷಗಳ ಕಾಲ ವಿಳಂಬ ಆದರೆ ಬಡವರಿಗೆ ಸೂರು ಕಲ್ಪಿಸುವ ಉದ್ದೇಶ ಈಡೇರುವುದಿಲ್ಲ. ಯಾವುದೇ ಕಾರಣಕ್ಕೂ ವಿಳಂಬ ಸಹಿಸುವುದಿಲ್ಲ ಎಂದು ತಾಕೀತು ಮಾಡಿದರು.

- Advertisement -


ಒಂದೊಂದು ಯೋಜನೆಗೆ ನಿಗದಿತ ಕಾಲಮಿತಿ ಹಾಕಿಕೊಂಡು ಅದನ್ನು ಪೂರ್ಣ ಗೊಳಿಸಿದ ಬಳಿಕವೇ ಮತ್ತೊಂದು ಯೋಜನೆ ಕೈಗೆತ್ತಿಕೊಳ್ಳಬೇಕು. ಪ್ರತಿ ಯೋಜನೆಗೆ ಬೇಕಾದ ಹಣಕಾಸು ಹೊಂದಿಕೊಂಡು ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಂಚಿಕೆ ಆದ ನಂತರವಷ್ಟೇ ಮತ್ತೊಂದು ಯೋಜನೆ ಪ್ರಾರಂಭಿಸಬೇಕು. ಆಗ ಮಾತ್ರ ನಂಬಿಕೆ ಬರಲು ಸಾಧ್ಯ. ಇದು ಕಡ್ಡಾಯವಾಗಿ ಪಾಲನೆ ಆಗಲೇಬೇಕು ಎಂದು ಸೂಚನೆ ನೀಡಿದರು.


ಪ್ರಧಾನ ಮಂತ್ರಿ ಅವಾಸ್, ಯೋಜನೆಯ ಅವಧಿ ಜೂನ್ ಗೆ ಮುಗಿಯಲಿದ್ದು, 1.41 ಮನೆಗಳ ಗುರಿಯ ಪೈಕಿ 37 ಸಾವಿರ ಮನೆಗಳಿಗೆ ಮಾತ್ರ ಅನುಮತಿ ದೊರೆತಿದೆ. ಚುನಾವಣೆ ಮತ್ತಿತರ ಕಾರಣಕ್ಕೆ ತಡವಾಗಿದ್ದರೆ ತಕ್ಷಣ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಸಮಯ ವಿಸ್ತರಣೆಗೆ ಅನುಮತಿ ಪಡೆದುಕೊಳ್ಳಿ. ಅಗತ್ಯವಾದರೆ ದೆಹಲಿಗೆ ತೆರಳಿ ಕೇಂದ್ರ ಸಚಿವರ ಜತೆಯೂ ಚರ್ಚೆ ಮಾಡುತ್ತೇನೆ ಎಂದು ಸೂಚನೆ ನೀಡಿದರು.

- Advertisement -


ಬಸವ ವಸತಿ, ಅಂಬೇಡ್ಕರ್ ನಿವಾಸ್, ದೇವರಾಜ ಅರಸು ನಗರ ಮತ್ತು ಗ್ರಾಮೀಣ ವಸತಿ ಯೋಜನೆಯಡಿ ಹಲವು ವರ್ಷ ಕಳೆದರೂ ಘಟಕ ಪೂರ್ಣ ಗೊಳ್ಳದ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ಸಚಿವರು,ಯೋಜನೆ ಜಾರಿಯಾದ ವರ್ಷದಿಂದ ಇದುವರೆಗಿನ ಸಮಗ್ರ ಮಾಹಿತಿ ನೀಡುವಂತೆ ನಿರ್ದೇಶನ ನೀಡಿದರು.
ಸ್ಥಳೀಯ ಮಟ್ಟದ ಸಮಸ್ಯೆ ಬಗೆಹರಿಸಿಕೊಂಡು ಯೋಜನೆ ಅನುಷ್ಠಾನಕ್ಕೆ ಮುಂದಾಗಬೇಕು. ನೂರಾರು ಕೋಟಿ ವೆಚ್ಚ ಮಾಡಿದರೂ ಶೇ.30 ರಷ್ಟು ಪ್ರಗತಿ ಆದರೆ ಏನು ಪ್ರಯೋಜನ ಎಂದು ಪ್ರೆಶ್ನೆ ಮಾಡಿದರು.


ವಸತಿ ಯೋಜನೆಗಳ ಜಾರಿ ವಿಳಂಬಕ್ಕೆ ಫಲಾನುಭವಿಗಳ ಪಾಲಿನ ಹಣ ತುಂಬುವಲ್ಲಿ ಸಮಸ್ಯೆ ಆಗುತ್ತಿರುವ ಬಗ್ಗೆ ಅಧಿಕಾರಿಗಳು ಗಮನಕ್ಕೆ ತಂದಾಗ, ಬ್ಯಾಂಕ್ ಗಳ ಜತೆ ಮಾತನಾಡಿ ಸಾಲ ಸೌಲಭ್ಯ ಕೊಡಿಸುವ ಬಗ್ಗೆ ತುರ್ತು ಸಭೆ ನಡೆಸಿ ಎಂದು ಸೂಚನೆ ನೀಡಿದರು.


ಅಸಮಾಧಾನ :
ಮುಖ್ಯಮಂತ್ರಿಗಳ ಒಂದು ಲಕ್ಷ ಯೋಜನೆ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, 2017 ರಲ್ಲಿ ಆರಂಭ ವಾದ ಯೋಜನೆ ಇನ್ನೂ ಮುಗಿದಿಲ್ಲ. 1040 ಎಕರೆ ಪೈಕಿ 553 ಎಕರೆ ಮಾತ್ರ ಸ್ವಾಧೀನ ಪಡೆದಿದ್ದು 50797 ಅರ್ಜಿದಾರರಲ್ಲಿ 12158 ಮಂದಿ ಆರಂಭಿಕ ಹಣ ಪಾವತಿಸಿದ್ದು ಐದು ಸಾವಿರ ಮನೆ ಪೂರ್ಣಗೊಳಿಸಲಾಗಿದೆ. ಇನ್ನೂ ಫಲಾನುಭವಿಗಳಿಗೆ ಕೊಟ್ಟಿಲ್ಲ, ಹೀಗಾದರೆ ನಂಬಿಕೆ ಬರುವುದಾದರೂ ಹೇಗೆ ಎಂದು ಕೇಳಿದರು.
ಈ ಯೋಜನೆಯಡಿಯಲ್ಲಿ ಇನ್ನೂ ಆರಂಭವಾಗದ ಕಡೆ ಜಂಟಿ ಸಹಭಾಗಿತ್ವದಡಿ ಅನುಷ್ಠಾನ ಸಾಧ್ಯವಾ ಯೋಚಿಸಿ ಎಂದು ಸಲಹೆ ನೀಡಿದರು.
ರಾಜೀವ್ ಗಾಂಧಿ ವಸತಿ ನಿಗಮದ ಯೋಜನೆಗಳಿಗೆ ಅಗತ್ಯ ವಾದ ಆರ್ಥಿಕ ನೆರವು ಈ ವರ್ಷ ಪೂರ್ಣ ಗೊಳಿಸ ಬಹುದಾದ ಯೋಜನೆ ಬಗ್ಗೆ ಟಿಪ್ಪಣಿ ತಯಾರಿಸಿ. ಬಜೆಟ್ ಮಂಡನೆಗೆ ಮುಂಚೆ ಮುಖ್ಯಮಂತ್ರಿ ಅವರ ಬಳಿ ಚರ್ಚಿಸುತ್ತೇನೆ ಎಂದು ಹೇಳಿದರು.


ಸರ್ಕಾರದಿಂದ ಒಂದು ಸಾವಿರ ಕೋಟಿ ರೂ. ಅನುದಾನ ತಕ್ಷಣಕ್ಕೆ ದೊರೆತರೆ ಯೋಜನೆ ಗಳು ಪೂರ್ಣಗೊಳ್ಳಲಿವೆ ಎಂದು ಅಧಿಕಾರಿಗಳು ತಿಳಿಸಿದರು.
ಸರ್ಕಾರದ ಖಾತರಿಯೊಂದಿಗೆ ಬ್ಯಾಂಕ್ ಗಳಲ್ಲಿ ಸಾಲ ಪಡೆಯುವ ಬಗ್ಗೆಯೂ ಚಿಂತನೆ ನಡೆಸಿ ಎಂದು ಸಲಹೆ ನೀಡಿದರು.
ಚಿಕ್ಕಬಳ್ಳಾಪುರ ಹಕ್ಕುಪತ್ರ ವಿತರಣೆ ತನಿಖೆಗೆ ಸೂಚನೆ :
ಚಿಕ್ಕಬಳ್ಳಾಪುರ ದಲ್ಲಿ ಮುಖ್ಯಮಂತ್ರಿ ಗಳ ನಿವೇಶನ ಯೋಜನೆಯಡಿಯಲ್ಲಿ ವಿಧಾನ ಸಭೆ ಚುನಾವಣೆ ವೇಳೆ ಕಾನೂನು ಬಾಹಿರವಾಗಿ ಹಿಂದಿನ ಶಾಸಕರ ಭಾವಚಿತ್ರ ಹಾಕಿ 10,500 ಹಕ್ಕುಪತ್ರ ಹಂಚಿಕೆ ಮಾಡಿದ್ದು ಅದು ಸಿಂಧುವಲ್ಲ. ಈ ಬಗ್ಗೆ ಮೊದಲೇ ತಿಳಿಸಲಾಗಿತ್ತು, ಆದರೂ ಹಂಚಿಕೆ ಮಾಡಲಾಗಿದೆ ಎಂಬ ವಿಚಾರ ಪ್ರಸ್ತಾಪ ವಾಗಿ ಸರ್ಕಾರ ಸಿದ್ದಪಡಿಸಿದ್ದ ಮುಖ್ಯಮಂತ್ರಿ ಹಾಗೂ ವಸತಿ ಸಚಿವರ ಭಾವ ಚಿತ್ರವುಳ್ಳ ಮಾದರಿಯ ಹಕ್ಕು ಪತ್ರ ಮಾತ್ರ ಮಾನ್ಯ ಎಂದು ಅಧಿಕಾರಿಗಳು ತಿಳಿಸಿದರು.
ಬಡವರಿಗೆ ಅನ್ಯಾಯ ಆಗಬಾರದು, ಆ ಪ್ರಕರಣದಲ್ಲಿ ತಪ್ಪಾಗಿದ್ದರೆ ವರದಿ ತರಿಸಿಕೊಂಡು ಪರಿಶೀಲಿಸಿ ಕ್ರಮ ಕೈಗೊಳ್ಳಿ ಎಂದು ಸಭೆಯಲ್ಲಿ ಸಚಿವ ಜಮೀರ್ ಅಹ್ಮದ್ ಸೂಚನೆ ನೀಡಿದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್, ವಸತಿ ಇಲಾಖೆ ಕಾರ್ಯದರ್ಶಿ ರವಿಕುಮಾರ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

Join Whatsapp