ಮುತಾಲಿಕ್’ಗೆ ಆತಿಥ್ಯ: ಮನವಿ ನೀಡಲು ಆಗಮಿಸುವವರ ಜೊತೆ ಮಾತುಕತೆ ನಡೆಸುವುದು ಸಹಜ ಎಂದ ಮಂಗಳೂರು ಕಮಿಷನರ್

Prasthutha|

ಮಂಗಳೂರು: ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ವಿವಾದಿತ ಮುಖಂಡ ಪ್ರಮೋದ್ ಮುತಾಲಿಕ್’ಗೆ ಆತಿಥ್ಯ ನೀಡಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮನವಿ ನೀಡಲು ಆಗಮಿಸುವವರ ಜೊತೆ ಮಾತುಕತೆ ನಡೆಸುವುದು ಸಹಜ ಎಂದು ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳಲಿ ಮಸೀದಿ ವಿಚಾರವಾಗಿ ಚರ್ಚೆ ಮಾಡಲು ಮುತಾಲಿಕ್ ಬಂದಿದ್ದರು, ವಿವಾದಿತ ಪ್ರದೇಶವನ್ನು ಪ್ರವೇಶಿಸಲು ಅನುಮತಿ ನೀಡುವಂತೆ ಕೋರಿಕೊಂಡಿದ್ದಾರೆ. ಮುತಾಲಿಕ್ ಮತ್ತು ಸಹಚರರು ಸ್ಥಳಕ್ಕೆ ಭೇಟಿ ನೀಡುತ್ತಾರೆ ಎನ್ನುವ ಮಾಹಿತಿ ಇತ್ತು, ಆದರೆ ಮುತಾಲಿಕ್ ಅವರು ಅಲ್ಲಿಗೆ ಹೋದರೆ ಅಹಿತಕರ ಘಟನೆ ನಡೆಯುವ ಸಾಧ್ಯತೆ ಇತ್ತು, ಈ ಹಿನ್ನೆಲೆಯಲ್ಲಿ ಮುತಾಲಿಕ್’ಗೆ ಪ್ರವೇಶ ನಿರಾಕರಿಸಲಾಗಿತ್ತು ಎಂದು ಹೇಳಿದ್ದಾರೆ.

ಕಮಿಷನರ್ ಕಚೇರಿಗೆ ಮುತಾಲಿಕ್ ಮಧ್ಯಾಹ್ನ 2.30ರ ವೇಳೆಗೆ ಆಗಮಿಸಿದ್ದರು, ನಾವು ಕಚೇರಿಯಿಂದ ಹೊರಡುವ ಸಮಯದಲ್ಲಿ ಫೋಟೋ ಕ್ಲಿಕ್ಕಿಸಲಾಗಿದೆ. ಆದರೆ ಇದನ್ನು ನಿರ್ದಿಷ್ಟ ಪಕ್ಷ, ಸಂಘಟನೆಗೆ ಸೇರಿದವರು ಅಪಪ್ರಚಾರ ನಡೆಸಿದ್ದಾರೆ ಎಂದು ಶಶಿಕುಮಾರ್ ಆರೋಪಿಸಿದ್ದಾರೆ. ಸಾಂದರ್ಭಿಕ ಚಿತ್ರವನ್ನು ತಪ್ಪಾಗಿ ಬಿಂಬಿಸಲಾಗಿದ್ದು, ಇದನ್ನು ಶೇರ್ ಮಾಡಿದವರು ಪ್ರತಿನಿಧಿಸುವ ಪಕ್ಷದ ಪದಾಧಿಕಾರಿಗಳು ಇಲ್ಲಿಗೆ ಆಗಮಿಸುತ್ತಾರೆ, ಮನವಿ ನೀಡಲು ಆಗಮಿಸುವವರ ಜೊತೆ ಮಾತುಕತೆ ನಡೆಸುವುದು ಸಹಜ ಎಂದು ಅವರು ಹೇಳಿದ್ದಾರೆ.

- Advertisement -

ವಾಮಂಜೂರಿನಲ್ಲಿ ಆಝಾನ್ ವಿರುದ್ಧವಾಗಿ ಭಕ್ತಿಗೀತೆ ಹಾಡು ಹಾಕಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಆಯುಕ್ತ ಶಶಿಕುಮಾರ್, ಅಯ್ಯಪ್ಪ ಭಕ್ತರ ಶೆಡ್ ನಲ್ಲಿ ಭಕ್ತಿಗೀತೆ ಹಾಕಲಾಗಿದ್ದು, ಸುಮಾರು ಮುಂಜಾನೆ 5 ಗಂಟೆ ವೇಳೆಗೆ ಸ್ವಾಮಿ ಕೊರಗಜ್ಜರಿಗೆ ಸಂಬಂಧಿಸಿ‌ದ ಭಕ್ತಿಗೀತೆಯನ್ನು40 ನಿಮಿಷಗಳ ಕಾಲ ಹಾಕಲಾಗಿದೆ ಎಂದಿದ್ದಾರೆ.

ಘಟನೆಯಲ್ಲಿ ಇಬ್ಬರು ಭಾಗಿಯಾಗಿದ್ದಾಗಿ ತಿಳಿದು ಬಂದಿದ್ದು,ಇದರಿಂದ ಆಝಾನ್ ಗೆ ಯಾವುದೇ ತೊಂದರೆ ಆಗಿಲ್ಲ. ಕಮೀಷನರೇಟ್ ವ್ಯಾಪ್ತಿಯಲ್ಲಿ ಒಂದು ಕಡೆಯಲ್ಲಿ ಮಾತ್ರ ಘಟನೆ ವರದಿಯಾಗಿದೆ, ಸದ್ಯಕ್ಕೆ ಯಾವುದೇ ನೋಟೀಸ್ ನೀಡಲಾಗಿಲ್ಲ ಎಂದು ಹೇಳಿದ್ದಾರೆ.

Join Whatsapp