ಶಾಲಾ ಕಾಲೇಜುಗಳಲ್ಲಿ ಸಂವಿಧಾನ ಪ್ರಸ್ತಾವನೆ ಓದು ಕಡ್ಡಾಯ: ಸಚಿವ ಮಧು ಬಂಗಾರಪ್ಪ

Prasthutha|

ಧಾರವಾಡ : ಮಕ್ಕಳಲ್ಲಿ ಸಂವಿಧಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ಸಂವಿಧಾನದ ಪ್ರಸ್ತಾವನೆಯ ಓದು ಕಡ್ಡಾಯಗೊಳಿಸಲಾಗುವುದು ಎಂದು ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

- Advertisement -

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಇಕೋ ವಾಚ್, ಕರ್ನಾಟಕ ವಿದ್ಯಾರ್ಧಕ ಸಂಘ, ಬಾಲ ಬಳಗ ಸೃಜನಶೀಲ ಶಿಕ್ಷಣ ಪ್ರತಿಷ್ಠಾನ ಸಹಯೋಗದಲ್ಲಿ
ಹಮ್ಮಿಕೊಂಡಿದ್ದ ಮಕ್ಕಳ ನಡಿಗೆ ಹಸಿರಿನ ಕಡೆಗೆ ಎಂಬ ಒಂದು ದಿನದ ವಿಶೇಷ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ, ಅವರು ಮಾತನಾಡಿದರು.

ಸಂವಿಧಾನದ ಅರಿವು ಅತೀ ಅವಶ್ಯಕ. ಅದರಲ್ಲೂ ಮಕ್ಕಳಿಗೆ ಈ ಜ್ಞಾನ ನೀಡುವ ನಿಟ್ಟಿನಲ್ಲಿ ಶಾಲೆಯಲ್ಲಿ ಸಂವಿಧಾನದ ಪ್ರಸ್ತಾವನೆ (ಪರಿವಿಡಿ) ಓದು ಕಡ್ಡಾಯಗೊಳಿಸಲಾಗುವುದು. ಈ ನಿಟ್ಟಿನಲ್ಲಿ ಸೆ.5 ರಂದು ಅಧಿಕೃತವಾಗಿ ಸಂವಿಧಾನ ಪ್ರಸ್ತಾವನೆ ಓದು ಕಡ್ಡಾಯಗೊಳಿಸಿ, ಆದೇಶ ಹೊರಡಿಸಲಾಗುವುದು ಎಂದರು.

- Advertisement -

ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಜತೆಗೂಡಿ ಶಾಲಾ ಆವರಣದಲ್ಲಿ 50 ಲಕ್ಷ ಸಸಿ ನೆಡುವ ಯೋಜನೆ ಹಾಕಿಕೊಂಡಿದ್ದು, ಇದಲ್ಲದೇ ಮಕ್ಕಳ ಮಧ್ಯಾಹ್ನದ ಬಿಸಿಯೂಟದ ಬಳಿಕ ಈ ನೆಟ್ಟ ಸಸಿಗಳ ಬುಡದಲ್ಲಿಯೇ ತಾಟು ತೊಳೆಯಲು ಸೂಚನೆ ನೀಡಲಿದ್ದೇವೆ. ಇದರಿಂದ ಮಕ್ಕಳ ಕೈಯಿಂದ ಪರಿಸರ ಕಾಳಜಿ ಕಾರ್ಯವೂ ನೆರವೇರಲಿದೆ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ರಾಜ್ಯದ 1.20 ಕೋಟಿ ಮಕ್ಕಳಿಗೆ 77 ಸಾವಿರ ಶಾಲೆಗಳಷ್ಟೇ ಇವೆ. ಹೀಗಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವುದು ಸೇರಿದಂತೆ ಸಾಕಷ್ಟು ಸವಾಲುಗಳಿವೆ. ಆದರೆ ಈ ಕ್ಷೇತ್ರವು ನಿಜಕ್ಕೂ ಪುಣ್ಯದ ಕೆಲಸವಿದು. ಮಕ್ಕಳ ಭವಿಷ್ಯದ ಜತೆಗೆ ದೇಶದ ಭವಿಷ್ಯ ನಿರ್ಮಾಣ ಮಾಡುವ ಪುಣ್ಯ ಕೆಲಸದಲ್ಲಿ ನಾನೂ ಭಾಗಿ ಎಂಬ ಹಮ್ಮೆ ಇದೆ. ಈ ಕ್ಷೇತ್ರದವರು ಬರೀ ಸಂಬಳಕ್ಕೆ ಕೆಲಸ ಮಾಡದೇ ಮಕ್ಕಳ ಉನ್ನತಿಗಾಗಿ ಕೆಲಸ ಮಾಡಬೇಕು ಎಂದರು.

ನಮ್ಮ ತಂದೆ ಸಿಎಂ ಆಗಿದ್ದಾಗ ಮಕ್ಕಳನ್ನು ಶಾಲೆಗೆ ಕರೆ ತರುವ ನಿಟ್ಟಿನಲ್ಲಿ ಅಲ್ಲದೇ ಮಕ್ಕಳ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಶಾಲೆಗೆ ಹಾಜರಾಗುವ ವಿದ್ಯಾರ್ಥಿಗೆ ಒಂದು ದಿನಕ್ಕೆ 1 ರೂ. ನೀಡುವಂತಹ ಅಕ್ಷಯ ಯೋಜನೆ ಜಾರಿ ತಂದಿದ್ದರು. ಈಗ ಇದು ಬಿಸಿಯೂಟ, ಸೈಕಲ್ ವಿತರಣೆಯೆಂಬ ಬೇರೆ ಸ್ವರೂಪ ಪಡೆದುಕೊಂಡಿದೆಯಷ್ಟೇ. ಇನ್ನು ಮಕ್ಕಳು ಸನ್ಮಾರ್ಗದಲ್ಲಿ ನಡೆದರಷ್ಟೇ ದೇಶದ ಉನ್ನತಿ. ಆದರೆ ಶಿಕ್ಷಣ ಕ್ಷೇತ್ರದಲ್ಲಿ ನಾವಿಂದು ತುಂಬಾ ಹಿಂದೆ ಇದ್ದು, ಎರಡು ವರ್ಷ ಸಮಯ ಕೊಡಿರಿ. ಅಷ್ಟರೊಳಗೆ ಮಕ್ಕಳ ಭವಿಷ್ಯ ಸುಭದ್ರಗೊಳಿಸುವ ಕೆಲಸ ಜಾರಿಗೊಳಿಸುವುದಾಗಿ ಭರವಸೆ ನೀಡಿದರು.