ಕಲಬುರಗಿ: ಕನ್ನಡಿಗರೊಬ್ಬರು ಪ್ರಧಾನಿಯಾಗ್ತಾರೆ ಅಂದ್ರೆ ಅದು ಹೆಮ್ಮೆಯ ವಿಚಾರ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಪ್ರಧಾನಿ ಅಭ್ಯರ್ಥಿ ಸ್ಥಾನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಹೆಸರು ಕೇಳಿ ಬಂದಿರುವ ವಿಚಾರವಾಗಿ ಅವರ ಪುತ್ರ ಸಚಿವ ಪ್ರಿಯಾಂಕ್ ಖರ್ಗೆ ಕಲಬುರಗಿಯಲ್ಲಿಂದು ಮಾತನಾಡಿದರು. ಕನ್ನಡಿಗರೊಬ್ಬರು ಪ್ರಧಾನಿಯಾಗ್ತಾರೆ ಅಂದ್ರೆ ಅದು ಹೆಮ್ಮೆಯ ವಿಚಾರ. ಹಾಗಂತ ಸುಮ್ಮನೆ ಹಗಲುಗನಸು ಕಾಣುವುದಲ್ಲ. ನಾವು ಮೊದಲು ಕಾಂಗ್ರೆಸ್ನಿಂದ 200-250 ಸ್ಥಾನಗಳನ್ನು ಗೆಲ್ಲಬೇಕು. ಮೈತ್ರಿಕೂಟದ ಜೊತೆ ಒಗ್ಗೂಡಿ ಹೆಚ್ಚಿನ ಸ್ಥಾನ ಗೆಲ್ಲಬೇಕು. ಇವೆಲ್ಲವೂ ಮುಗಿದ ಮೇಲೆ ಮುಂದಿನ ಪ್ರಶ್ನೆಗಳು ಎಂದರು. ಈಗಾಗಲೇ ಎಐಸಿಸಿ ಅಧ್ಯಕ್ಷರು ಈ ಬಗ್ಗೆ ಮಾತನಾಡಿದ್ದಾರೆ. ಆದಷ್ಟು ಹೆಚ್ಚಿನ ಸಂಸದರನ್ನು ಆಯ್ಕೆ ಮಾಡಿ ದೆಹಲಿಗೆ ಕಳುಹಿಸುವುದು ನಮ್ಮ ಮುಂದಿರುವ ಸವಾಲು. ಬಹುಮತ ತರಲು ಏನೇನು ಮಾಡಬೇಕೋ ಮಾಡುತ್ತೇವೆ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.