ಹೊಸದಿಲ್ಲಿ: ಮುಸ್ಲಿಮ್ ಯುವತಿಯರ ಚಿತ್ರಗಳನ್ನು ಸಂಘಪರಿವಾರದ ಕಾರ್ಯಕರ್ತರು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಮಹಿಳಾ ಆಯೋಗ ಪೊಲೀಸರಿಗೆ ನೋಟಿಸ್ ನೀಡಿದೆ.
ಹಿಂದುತ್ವ ಪ್ರೊಫೈಲ್‌ಗಳು ‘ಇಂದಿನ ಡೀಲ್’ ಎಂಬ ಶೀರ್ಷಿಕೆಯೊಂದಿಗೆ ಮುಸ್ಲಿಮ್ ಯುವತಿಯರ ಚಿತ್ರಗಳನ್ನು ಹಂಚಿಕೊಂಡಿತ್ತು. ಜುಲೈ 4 ರಂದು ಸಂಘಪರಿವಾರದ ಕಾರ್ಯಕರ್ತರು ನೂರಾರು ಮುಸ್ಲಿಮ್ ಯುವತಿಯರ ಚಿತ್ರಗಳನ್ನು ಗಿಟ್‌ಹಬ್ ಮೂಲಕ ಪ್ರಸಾರ ಮಾಡಿದ್ದರು. ‘ಇಂದಿನ ಡೀಲ್’ ಶೀರ್ಷಿಕೆಯೊಂದಿಗೆ ಅನೇಕ ಜನರು ಟ್ವಿಟ್ಟರ್‌ನಲ್ಲಿ ಚಿತ್ರಗಳನ್ನು ಹಂಚಿಕೊಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಇದರೊಂದಿಗೆ ಗಿಟ್‌ಹಬ್ ಚಿತ್ರಗಳನ್ನು ತೆಗೆದುಹಾಕಿತ್ತು.
ಈ ಪ್ರಕರಣದಲ್ಲಿ ದಾಖಲಾದ ಎಫ್‌ಐಆರ್ ಪ್ರತಿ ಮತ್ತು ಆರೋಪಿಗಳನ್ನು ಬಂಧಿಸಿರುವ ವಿವರಗಳನ್ನು ಒದಗಿಸಬೇಕು ಎಂದು ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಪೊಲೀಸರಿಗೆ ನೀಡಿದ ನೋಟಿಸ್‌ನಲ್ಲಿ ತಿಳಿಸಿದ್ದಾರೆ. ವಿವರಗಳನ್ನು ಒದಗಿಸಲು ಪೊಲೀಸರಿಗೆ ಒಂದು ವಾರದ ಸಮಯವನ್ನು ಮಲಿವಾಲ್ ನೀಡಿದ್ದಾರೆ.
ಈ ಹಿಂದೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಈ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿತ್ತು. ಅಲ್ಪಸಂಖ್ಯಾತ ಸಮುದಾಯದ ಮಹಿಳಾ ಪತ್ರಕರ್ತರು ಮತ್ತು ಇತರ ವೃತ್ತಿಪರರ ಚಿತ್ರಗಳನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವುದು ಖಂಡನೀಯ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಡಿಟರ್ಸ್ ಗಿಲ್ಡ್ ಒತ್ತಾಯಿಸಿದೆ.