ಕದನ ವಿರಾಮ ಘೋಷಿಸಿದ ನೇತನ್ಯಾಹು | ಇಸ್ರೇಲ್ ಸೋತಿದೆ ಎಂದ ಹಮಾಸ್ ಹೋರಾಟಗಾರರು

Prasthutha|

►ಫೆಲೆಸ್ತೀನ್, ಗಾಝಾದಲ್ಲಿ ಸಂಭ್ರಮಾಚರಣೆ
►ಹಮಾಸ್ ನಾಯಕನ ಹತ್ಯೆಗೆ ವಿಫಲ ಯತ್ನ ನಡೆಸಿದ್ದ ಇಸ್ರೇಲ್ ಪಡೆಗೆ ಮುಖಭಂಗ

- Advertisement -

ಗಾಝಾ : ಕಳೆದ 11 ದಿನಗಳಿಂದ ಫೆಲೆಸ್ತೀನಿನ ಅಮಾಯಕರ ಮೇಲೆ ಇಸ್ರೇಲ್ ಪಡೆ ನಡೆಸುತ್ತಿದ್ದ ಬಾಂಬ್ ಗಳ ಸುರಿಮಳೆಗೆ ಕೊನೆಗೂ ಬ್ರೇಕ್ ಬಿದ್ದಿದೆ. ನಿನ್ನೆ ತಡರಾತ್ರಿ ತನ್ನ ರಕ್ಷಣಾ ಕ್ಯಾಬಿನೆಟ್ ಸಭೆ ನಡೆಸಿದ ಪ್ರಧಾನಿ ನೇತನ್ಯಾಹು ಕದನ ವಿರಾಮ ಘೋಷಿಸಿದ್ದಾರೆ. ಇದು ಇಸ್ರೇಲಿನ ನೈತಿಕ ಸೋಲೆಂದೇ ವ್ಯಾಖ್ಯಾನಿಸಲ್ಪಟ್ಟಿದೆ. ರಮಝಾನ್ ಕೊನೆಯ ಸಮಯದಲ್ಲಿ ಮಸ್ಜಿದುಲ್ ಅಕ್ಸಾದಲ್ಲಿ ನಮಾಝ್ ಮಾಡುತ್ತಿದ್ದ ನಿರಾಯುಧರ ಮೇಲೆ ಮಾರಕ ಶಸ್ತಾಸ್ತ್ರಗಗಳಿಂದ ದಾಳಿ ನಡೆಸಿದ್ದ ಇಸ್ರೇಲ್ ಪಡೆಗೆ ಮರುದಿನದಿಂದಲೇ ಹಮಾಸ್ ಹೋರಾಟಗಾರರ ಪಡೆ ತಕ್ಕ ರೀತಿಯಲ್ಲೇ ಪ್ರತಿಕ್ರಿಯೆ ನೀಡಿತ್ತು. ನಿರ್ದಿಷ್ಟ ಸಮಯ ನಿಗದಿಪಡಿಸಿ ಇಸ್ರೇಲಿನ ರಾಜಧಾನಿ ಟೆಲ್ ಅವೀವ್ ಮೇಲೆ ಮಿಸೈಲ್ ದಾಳಿ ಮಾಡಿತ್ತು. ಮೊದಲ ದಿನವೇ ಇಸ್ರೇಲಿನ ಜಂಘಾಬಲವೇ ಉಡುಗಿ ಹೋಗಿತ್ತು.

ಇಸ್ರೇಲಿನ ನಿದ್ದೆಗೆಡಿಸಿದ್ದ ಹಮಾಸ್ ನಾಯಕ ಎಝೆದ್ದೀನ್ ಅಲ್ ಖಾಸ್ಸಮ್ ಬ್ರಿಗೇಡಿನ ಮೊಹಮ್ಮದ್ ಡೈಫ್ ಅವರ ಹತ್ಯೆ ಮಾಡಿಯೇ ತೀರುತ್ತೇವೆಂದು ಗಾಝಾ, ರಮಲ್ಲಾ ಮತ್ತು ಜೆರುಸಲೇಮಿನ ಅಮಾಯಕರ ಮೇಲೆ ನಿರಂತರ ಬಾಂಬ್ ದಾಳಿ ನಡೆಸಿದ್ದ ಇಸ್ರೇಲ್ ಪಡೆಗೆ ಕೊನೆಗೂ ಅದು ಸಾಧ್ಯವಾಗಿರಲಿಲ್ಲ. ಮೇ 10 ರ ಬಳಿಕ ಇಸ್ರೇಲ್ ಪಡೆ ಎರಡು ಬಾರಿ ಡೈಫ್ ರನ್ನು ಗುರಿಯಾಗಿಸಿ ಬಾಂಬ್ ದಾಳಿ ನಡೆಸಿದ್ದರೂ ಅಲ್ಲಿ ಅಮಾಯಕರೇ ಪ್ರಾಣ ತೆತ್ತಿದ್ದರು. ಮಿಲಿಟರಿ ಅಧಿಕೃತರು ನಾವಿಂದು ಡೈಫ್ ರನ್ನು ಹತ್ಯೆ ಮಾಡುತ್ತೇವೆಂದು ನಿನ್ನೆ ಹೇಳಿಕೆ ನೀಡಿದ್ದರು. ಆದರೆ ಅದೂ ಸಾಧ್ಯವಾಗದೆ ಇಸ್ರೇಲ್ ಪಡೆ ಮುಖಭಂಗವನ್ನನುಭವಿಸಿತ್ತು. ಆದರೆ ಈ ಬಾರಿಯ ಹಮಾಸ್ ಪ್ರತಿರೋಧ ಇಸ್ರೇಲ್ ಗೆ ಭಯಾನಕವಾಗಿ ಕಾಡಿತ್ತು. ಪ್ರಥಮ ದಿನವೇ ಇಸ್ರೇಲಿನ ರಕ್ಷಣೆಯ ಪ್ರತೀಕವೆಂದು ಹೇಳಿಕೊಂಡಿದ್ದ ಐರನ್ ಡೋಮಿನ ಮೇಲೆಯೇ ಹಮಾಸ್ ಮಿಸೈಲ್ ಅಪ್ಪಳಿಸಿತ್ತು.

- Advertisement -

ಇದೀಗ ಇಸ್ರೇಲ್ ರಕ್ಷಣಾ ಕ್ಯಾಬಿನೆಟ್ ಕದನ ವಿರಾಮಕ್ಕೆ ಮುಂದಾಗಿದೆ. ಕಾಲು ಕೆರೆದು ಯುದ್ಧದಲ್ಲಿ ತೊಡಗಿದ್ದ ಇಸ್ರೇಲ್ ಕೊನೆಗೂ ಕದನ ವಿರಾಮದ ಮೂಲಕ ಹಿಂದಡಿಯಿಟ್ಟಿದೆ ಎಂದೇ ಹೇಳಲಾಗುತ್ತಿದೆ. ಆ ಮೂಲಕ ಯಾವತ್ತೂ ಯುದ್ಧ ಪ್ರಾರಂಭಗೊಳಿಸುವುದು ಹಾಗೂ ಯುದ್ಧ ಕೊನೆಗೊಳಿಸುವುದು ಇಸ್ರೇಲ್ ಮತ್ತು ಹಮಾಸ್ ಕೇವಲ ಪ್ರತಿರೋಧವನ್ನು ಮಾತ್ರ ಒಡ್ಡುತ್ತಿದೆ ಎಂಬ ಫೆಲೆಸ್ತೀನ್ ವಾದಕ್ಕೆ ಮತ್ತೊಮ್ಮೆ ಪುಷ್ಠಿ ನೀಡಿದಂತಾಗಿದೆ.

ಗಾಝಾ ಪಟ್ಟಿಯಲ್ಲಿ ಸಂಭ್ರಮಾಚರಣೆ ; ಇಸ್ರೇಲಿನ ಸೋಲೆಂದ ಹಮಾಸ್

ಇಸ್ರೇಲ್ ಕದನ ವಿರಾಮ ಘೋಷಿಸುತ್ತಲೇ ಗಾಝಾ ಪಟ್ಟಿಯ ಜನರು ಬೀದಿಗೆ ಬಂದು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಇಸ್ರೇಲ್ ಪಡೆಯಿಂದ ನಿರಂತರ ಬಾಂಬ್ ದಾಳಿಗೊಳಪಡುತ್ತಿದ್ದ ಜನರು ಈಗ ನಿರಾಳರಾಗಿದ್ದಾರೆ. ಈ ನಡುವೆ ಹಮಾಸ್ ಹೋರಾಟಗಾರರ ಪಡೆ ಇದು ಇಸ್ರೇಲಿನ ಸೋಲು ಮತ್ತು ಫೆಲೆಸ್ತೀನ್ ಜನತೆಯ ಗೆಲುವು ಎಂದು ಹೇಳಿದ್ದಾರೆ.



Join Whatsapp