ಇಸ್ರೇಲ್ ಆಕ್ರಮಿತ ಪ್ರದೇಶವೊಂದರಲ್ಲಿ ಆಶ್ರಯ ಪಡೆದಿದ್ದ ಮಹಿಳೆಯೊಬ್ಬಳನ್ನು ಹತ್ಯೆ ಮಾಡಿದ್ದ ಆರೋಪದ ಮೇರೆಗೆ ಜೈಲಿನಲ್ಲಿದ್ದ ಪೆಲೆಸ್ತೀನಿಯನ್ ಖೈದಿಯೊಬ್ಬನ ಕುಟುಂಬದ ಮನೆಯನ್ನು ಶುಕ್ರವಾರ ಇಸ್ರೇಲಿ ಪಡೆಗಳು ಸ್ಫೋಟಿಸಿದವು.
ಜೆನಿನ್ ನ ತುರಾ ಎಂಬ ಹಳ್ಳಿಯಲ್ಲಿನ ಖೈದಿ ಮುಹಮ್ಮದ್ ಮಾರುಹ್ ಕಭಾ ವಾಸಿಸುತ್ತಿದ್ದ ಎರಡು ಅಂತಸ್ತಿನ ಕಟ್ಟಡವನ್ನು ಸ್ಫೋಟಿಸಲಾಗಿದೆ. ಇಸ್ರೇಲ್ ಹೈಕೋರ್ಟ್ ಆದೇಶದ ಒಂದು ವಾರದ ಬಳಿಕ ಸೇನಾ ಪಡೆಗಳು ಈ ಕ್ರಮ ಕೈಗೊಂಡಿವೆ.
ಬುಧವಾರ, ಇಸ್ರೇಲಿ ಆಕ್ರಮಣ ಪಡೆಗಳು ಹಳ್ಳಿಯ ಮೇಲೆ ದಾಳಿ ನಡೆಸಿ ಅದನ್ನು ಸೇನಾ ವಲಯವೆಂದು ಘೋಷಿಸಿದವು. ಕಭಾ ಮನೆಯ ಹೊರಗಿನ ಗೋಡೆಗಳನ್ನು ನೆಲಸಮಗೊಳಿಸುವ ಮೊದಲು ಸ್ಫೋಟಕಗಳನ್ನು ನೆಡಲು ಪತ್ನಿ ಮತ್ತು ನಾಲ್ಕು ಮಕ್ಕಳನ್ನು ಹೊರಗಟ್ಟಲಾಯಿತು.
ಸ್ಥಳೀಯ ನಿವಾಸಿಗಳ ಮೇಲೆ ಹಲ್ಲೆ ನಡೆಸಿ ಹಳ್ಳಿಯಿಂದ ಹೊರಹೋಗದಂತೆ ಅಥವಾ ಪ್ರವೇಶಿಸದಂತೆ ಸೇನಾ ಪಡೆಗಳು ತಡೆದವು.
“ಇದು ನಮ್ಮ ಜನರ ವಿರುದ್ಧ ಇಸ್ರೇಲಿ ಪಡೆಗಳು ನಡೆಸಿರುವ ಮತ್ತೊಂದು ಅಪರಾಧ. ಇದು ನಮ್ಮ ಬದ್ಧತೆ ಮತ್ತು ಇಚ್ಛಾಶಕ್ತಿಯನ್ನು ಕುಗ್ಗಿಸುವುದಿಲ್ಲ” ಎಂದಿರುವ ಜೆನಿನ್ ಗವರ್ನರ್ ಅಕ್ರಂ ರೌಬ್, ಘಟನೆಯನ್ನು ಖಂಡಿಸಿದ್ದಾರೆ. ಸಂತ್ರಸ್ತ ಕುಟುಂಬಕ್ಕೆ ಜೀವಿಸಲು ಸ್ಥಳಾವಕಾಶ, ಸಭ್ಯ ಜೀವನ ನಡೆಸಲು ಅಗತ್ಯವಿರುವ ಎಲ್ಲಾ ಸಹಾಯಗಳನ್ನು ಒದಗಿಸಲು ಪೆಲೆಸ್ತೀನಿಯನ್ ಪ್ರಾಧಿಕಾರದ ಅಧ್ಯಕ್ಷ ಮೆಹ್ಮೌದ್ ಅಬ್ಬಾಸ್ ಸೂಚನೆ ನೀಡಿದ್ದಾರೆ ಎಂದು ಅಕ್ರಂ ರೌಬ್ ಘೋಷಿಸಿದ್ದಾರೆ.