ಈಶ್ವರಪ್ಪ ಅವರು ರಾಜಕೀಯದ ಅತ್ಯಂತ ಸಂಸ್ಕೃತಹೀನ ಮನುಷ್ಯ: ಸಿದ್ದರಾಮಯ್ಯ ಆಕ್ರೋಶ

Prasthutha|

ಚನ್ನರಾಯಪಟ್ಟನ: ಈಶ್ವರಪ್ಪ ಅವರು ರಾಜಕೀಯದ ಅತ್ಯಂತ ಸಂಸ್ಕೃತಹೀನ ಮನುಷ್ಯ. ರಾಜಕಾರಣದಲ್ಲಿ ಮಾತನಾಡುವಾಗ ಸಂಸದೀಯ ಭಾಷೆ ಇರಬೇಕು, ಮಾತಿನಲ್ಲಿ ಸಭ್ಯತೆ ಇರಬೇಕು. ಇದು ಯಾವುದೂ ಇಲ್ಲದ ಈಶ್ವರಪ್ಪ ಪ್ರಾಣಿಗೆ ಸಮಾನ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

- Advertisement -

ಇಂದು ಚನ್ನರಾಯಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋನಿಯಾ ಗಾಂಧಿ ಇಟಲಿಯವರು. ಭಾರತಕ್ಕೆ ಬಂದು ರಾಜೀವ್ ಗಾಂಧಿ ಅವರನ್ನು ಮದುವೆಯಾಗಿದ್ದಾರೆ. ಈಗ ಅವರು ಭಾರತೀಯರೆ. ಇದರಲ್ಲಿ ತಪ್ಪೇನು? ಎಂದು ಪ್ರಶ್ನಿಸಿದ್ದಾರೆ.

ಎಸ್.ಟಿ ಸೋಮಶೇಖರ್ ಮೊನ್ನೆ ಮೊನ್ನೆ ವರೆಗೂ ಕಾಂಗ್ರೆಸ್ ನಲ್ಲಿದ್ರು. ನಮ್ಮ ಜೊತೆಗಿದ್ದು, ಈಗ ಬಿಜೆಪಿ ಹೋಗಿದ್ದಾರೆ. ಹೊಸದಾಗಿ ಮಾಡಿವಾಳ ಕೆಲಸ ಮಾಡೋರು ಗೋಣಿಚೀಲವನ್ನೂ ಒಗಿತಾರಂತೆ. ಹೋಗ್ತಾ ಹೋಗ್ತಾ ಅದನ್ನು ಬಿಡ್ತಾರೆ. ಹೀಗೆ ಸೋಮಶೇಖರ್ ಕತೆ. ಅವರು ಆರೆಸ್ಸೆಸ್ ಅಲ್ಲ, ಏನೂ ಅಲ್ಲ. ಆರೆಸ್ಸೆಸ್ ನ ಹೊಗಳೋಕೆ ಶುರು ಮಾಡಿದ್ದಾರೆ. ಇದು ಎಷ್ಟು ದಿನವೋ ಗೊತ್ತಿಲ್ಲ. ಸೋಮಶೇಖರ್ ಒಬ್ಬ ಮೂಲ ಕಾಂಗ್ರೆಸಿಗ. ಮೂಲ ಆರೆಸ್ಸೆಸ್ ನವರಲ್ಲ. ಮಂತ್ರಿ ಆಗೋಕೆ ಪಕ್ಷ ಬಿಟ್ಟು ಬಿಜೆಪಿ ಸೇರಿದ ಸೋಮಶೇಖರ್ ಯಾವ ರೀತಿ ಆರೆಸ್ಸೆಸ್ ನಾಯಕ ಆಗ್ತಾರೆ? ಎಂದು ಕೇಳಿದ್ದಾರೆ.

- Advertisement -

ನಾನು ಮುಖ್ಯಮಂತ್ರಿಯಾಗಿದ್ದಾಗ ಕುರುಬ ಸಮುದಾಯದವರು ತಮ್ಮನ್ನು ಎಸ್.ಟಿ ಗೆ ಸೇರಿಸುವಂತೆ ಅರ್ಜಿ ಕೊಟ್ಟಿದ್ದರು. ಎಸ್.ಟಿ ಗೆ ಸೇರಿಸಲು ಕುಲಶಾಸ್ತ್ರ ಅಧ್ಯಯನ ಮಾಡಲು ಮೈಸೂರಿನ ಸಂಸ್ಥೆಗೆ ನೀಡಿದ್ದೆ. ಆ ವರದಿ ಇನ್ನು ಬಂದಿಲ್ಲ. ಈ ಮಧ್ಯೆ ಈಶ್ವರಪ್ಪ ಕುರುಬರನ್ನು ಎಸ್.ಟಿ ಗೆ ಸೇರಿಸಿ ಎಂದು ಪಾದಯಾತ್ರೆ ಮಾಡಿದ್ರು. ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಎರಡೂ ಕಡೆ ನಿಮ್ಮದೇ ಸರ್ಕಾರ ಇದೆ. ಪಾದಯಾತ್ರೆಯ ಬೂಟಾಟಿಕೆ ಬಿಟ್ಟು ಕೂಡಲೇ ಮಾಡ್ಸಿ ಎಂದು ಹೇಳಿದ್ದೆ ಎಂದರು.

ಹೆಗಲ ಮೇಲೆ ಶಾಲು ಹಾಕುವುದು, ಪಂಚೆ ಉಟ್ಟುಕೊಳ್ಳೋದು ನನ್ನ ಸಂಪ್ರದಾಯವಾಗಿದ್ದು, ನಾನು ಮಾಡ್ತೀನಿ. ಹಿಜಾಬ್ ಹಾಕೋದು ಮುಸ್ಲಿಮರ ಸಂಪ್ರದಾಯ. ಇದರಿಂದ ಬೇರೆಯವರಿಗೇನು ತೊಂದರೆ? ಎಂದು ಪ್ರಶ್ನಿಸಿದ್ದಾರೆ.

ವಿಧಾನ ಪರಿಷತ್ ಚುನಾವಣೆಗೆ ನಮ್ಮ ಪಕ್ಷದ ಅಭ್ಯರ್ಥಿಯಾಗಿ ಮಧು ಮಾದೇಗೌಡ ಎನ್ನುವವರನ್ನು ಸ್ಪರ್ಧೆಗೆ ಇಳಿಸಿದ್ದೇವೆ. ಅವರ ಪರವಾಗಿ ಸಭೆ ಮಾಡಿದ್ದೇವೆ. ಹಾಸನ ಜಿಲ್ಲೆಯ ಪಕ್ಷದ ಎಲ್ಲಾ ಮಾಜಿ ಶಾಸಕರು, ಮಾಜಿ ಸಚಿವರು, ನಾಯಕರು, ಕಾರ್ಯಕರ್ತರ ಜೊತೆ ಸಭೆ ಮಾಡಿ ತಾವೆಲ್ಲಾ ನಮ್ಮ ಅಭ್ಯರ್ಥಿಯ ಪರವಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಆರ್ಯರು ಸಾವಿರಾರು ವರ್ಷಗಳ ಹಿಂದೆ ಮಧ್ಯ ಏಷ್ಯಾದಿಂದ ಬಂದವರು ಎಂದು ನಾವೆಲ್ಲ ಚರಿತ್ರೆಯಲ್ಲಿ ಓದಿದ್ದೇವೆ. ಈಗ ಅವರೆಲ್ಲ ಇಲ್ಲಿ ನೆಲೆಸಿ ಭಾರತೀಯರಾಗಿದ್ದಾರೆ. ಅದಕ್ಕೆ ನನ್ನ ತಕರಾರು ಇಲ್ಲ. ಅವರಂತೆ “ನೀವು ಭಾರತೀಯರಲ್ಲ, ದೇಶಬಿಟ್ಟು ಹೋಗಿ” ಎಂದು ನಾನು ಅವರಿಗೆ ಹೇಳಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನನ್ನನ್ನು ಆರ್ಯನೋ ಅಥವಾ ದ್ರಾವಿಡನೋ ಎಂದು ಪ್ರಶ್ನೆ ಮಾಡಿದ್ದಾರೆ. ನಾನು ದ್ರಾವಿಡ, ದ್ರಾವಿಡರು ಈ ದೇಶದ ಮೂಲ ನಿವಾಸಿಗಳು ಎಂದು ನುಡಿದಿದ್ದಾರೆ.

ಕಾಂಗ್ರೆಸ್ ರಾಷ್ಟ್ರೀಯ ನಾಯಕರು ನನಗೆ ಹತ್ತಿರ ಇರೋದ್ರಿಂದ್ಲೆ ನನ್ನನ್ನು ಮುಖ್ಯಮಂತ್ರಿ ಮಾಡಿದ್ದು. ನನ್ನನ್ನು ಒಪ್ಪಿಕೊಂಡಿರೋದು. ಜೋಶಿ ಅವರಿಗೆ ಇದೆಲ್ಲ ಎಲ್ಲಿ ಗೊತ್ತಾಗ್ಬೇಕು ಪಾಪ. ಒಬ್ಬ ವ್ಯಕ್ತಿ ಲೀಡರ್ ಆಗೋದು ಜನರಿಂದ. ಜೋಶಿ ಹೇಳಿದ್ರೆ ಯಾರೂ ಅಸಲಿ ಲೀಡರ್ ಅಥವಾ ನಕಲಿ ಲೀಡರ್ ಆಗಲ್ಲ. ಜನ ಯಾರನ್ನು ಲೀಡರ್ ಎಂದು ಒಪ್ಪಿಕೊಳ್ತಾರೆ ಅವರು ನಿಜವಾದ ಲೀಡರ್ ಎಂದು ತಿರುಗೇಟು ನೀಡಿದ್ದಾರೆ.

Join Whatsapp