ಶಿವಮೊಗ್ಗ: ಬಿಜೆಪಿ ಕಾರ್ಯಕರ್ತ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಕೆ.ಎಸ್. ಈಶ್ವರಪ್ಪ ನಡೆಸಿದ ಸುದ್ದಿಗೋಷ್ಠಿಯಲ್ಲಿ ವಿನಾ ಕಾರಣ ಹಿಜಾಬ್ ವಿಚಾರ ಎಳೆದು ತಂದಿದ್ದಾರೆ. ರಾಜೀನಾಮೆಗೆ ಆಗ್ರಹಿಸುತ್ತಿರುವ ಕಾಂಗ್ರೆಸ್ ನಾಯಕರನ್ನು ಟೀಕಿಸುತ್ತಿರುವ ಭರದಲ್ಲಿ ಹಿಜಾಬ್ ಗಾಗಿ ಪ್ರತಿಭಟನೆಗಿಳಿದಿದ್ದ ವಿದ್ಯಾರ್ಥಿನಿಯರನ್ನು ಎಳೆದು ತಂದಿದ್ದಾರೆ.
ಆರು ವಿದ್ಯಾರ್ಥಿನಿಯರನ್ನು ಕರೆದು ಬುದ್ಧಿ ಹೇಳಿದ್ದರೆ ಈ ರೀತಿ ಆಗುತ್ತಿರಲಿಲ್ಲ, ಕರ್ನಾಟಕ ಬಂದ್ ಗೂ ಕಾಂಗ್ರೆಸ್ ಬೆಂಬಲ ಕೊಟ್ಟು ಕೋರ್ಟ್ ಆದೇಶವನ್ನು ಕಡೆಗಣಿಸಿತು ಎಂದು ವಿನಾಕಾರಣ ಈ ವಿಚಾರ ತಂದಿಟ್ಟಿದ್ದಾರೆ. ಅಲ್ಲದೇ ಶಿವಮೊಗ್ಗದಲ್ಲಿ ನಡೆದಿದ್ದ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣವನ್ನೂ ಎಳೆದು ತಂದಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ. ಗುತ್ತಿಗೆದಾರ, ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ವಿರುದ್ಧ ನಾನು ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆಯಿಂದ ಹೆದರಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು, ಸಂತೋಷ್ ಯಾರೆಂದು ನನಗೇ ಗೊತ್ತೇ ಇಲ್ಲ ಎಂದಿದ್ದಾರೆ.